ನವ ದೆಹಲಿ: ಬಿಲಿಯನೇರ್ ಉದ್ಯಮಿ ಗೌತಮ್ ಅದಾನಿ ಅವರು ಶೀಘ್ರದಲ್ಲಿಯೇ ಹೆಸರಾಂತ ವಾರ್ತಾ ವಾಹಿನಿಯಾದ ಎನ್‌ಡಿಟಿವಿಯ ನಿಯಂತ್ರಣವನ್ನು ತಮ್ಮ ಕೈಗೆ ತೆಗೆದುಕೊಳ್ಳಲಿದ್ದಾರೆ.
ಎನ್‌ಡಿಟಿವಿಯ ೨೯.೧೮% ಷೇರುಗಳನ್ನು ಅದಾನಿ ಗ್ರೂಪ್ ಖರೀದಿಸಲಿದೆ. ಜತೆಗೆ ಪ್ರತಿ ಷೇರಿಗೆ ೨೯೪ ರೂ. ದರದಲ್ಲಿ ಇನ್ನೂ ೨೬% ಷೇರುಗಳನ್ನು ಖರೀದಿಸುವ ಪ್ರಸ್ತಾಪವನ್ನೂ ಅದಾನಿ ಗ್ರೂಪ್ ಮುಂದಿಟ್ಟಿದೆ. ಇದರೊಂದಿಗೆ ಒಟ್ಟು ೫೫.೧೮% ಷೇರುಗಳನ್ನು ಖರೀದಿಸುವ ಮೂಲಕ ವಾಹಿನಿಯ ಮಾಲಿಕತ್ವವನ್ನು ತನ್ನದಾಗಿಸಲು ಅದಾನಿ ಗ್ರೂಪ್ ಸಜ್ಜಾಗಿದೆ. ಪ್ರತಿ ಷೇರಿಗೆ ೨೯೪ ರೂ. ದರದಲ್ಲಿ ಹೆಚ್ಚುವರಿ 26% ಷೇರುಗಳನ್ನು ಖರೀದಿ ಸಲುವಾಗಿ ೪೯೨ ಕೋಟಿ ರೂ. ನಗದನ್ನು ನೀಡಲು ಅದಾನಿ ಗ್ರೂಪ್ ಆಫರ್ ಮುಂದಿಟ್ಟಿದೆ.
ಅದಾನಿ ಗ್ರೂಪ್‌ನ ಭಾಗವಾಗಿರುವ ಎಎಂಜಿ ಮೀಡಿಯಾ ನೆಟ್‌ವರ್ಕ್ಸ್ ಲಿಮಿಟೆಡ್, ತನ್ನ ಅಧೀನದಲ್ಲಿರುವ ವಿಶ್ವಪ್ರಧಾನ್ ಕಮರ್ಶಿಯಲ್ ಪ್ರೈವೇಟ್ ಲಿಮಿಟೆಡ್ ಮೂಲಕ (ವಿಸಿಪಿಎಲ್), ಎನ್‌ಡಿಟಿವಿಯ ೨೯.೧೮ ಷೇರುಗಳನ್ನು ಖರೀದಿಸಲಿದೆ.
ಎನ್‌ಡಿಟಿವಿ ಆದಾಯ ೨೦೨೧-೨೨ರಲ್ಲಿ ೨೩೦ ಕೋಟಿ ರೂ, ಲಾಭ ೮೫ ಕೋಟಿ ರೂ.
ಎನ್‌ಡಿಟಿವಿ (ನ್ಯೂಡೆಲ್ಲಿ ಟೆಲಿವಿಶನ್ ಲಿಮಿಟೆಡ್) ೧೯೮೪ರಲ್ಲಿ ಸ್ಥಾಪನೆಯಾಗಿತ್ತು. ಪತ್ರಕರ್ತ, ಲೇಖಕ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ಅವರು ಎನ್ ಡಿಟಿವಿಯನ್ನು ಸ್ಥಾಪಿಸಿದ್ದರು. 1998ರಲ್ಲಿ 24×7 ನ್ಯೂಸ್ ಚಾನೆಲ್ ಅನ್ನು ಸ್ಟಾರ್ ಇಂಡಿಯಾ ಸಹಭಾಗಿತ್ವದಲ್ಲಿ ಆರಂಭಿಸಲಾಯಿತು. ಭಾರತದಲ್ಲಿ ಮೊದಲ ೨೪x7 ವಾರ್ತಾ ವಾಹಿನಿ ಇದಾಗಿತ್ತು. ಎನ್‌ಡಿಟಿವಿ ಗ್ರೂಪ್‌ನ ಪ್ರವರ್ತಕ ಕಂಪನಿಯಾದ ಆರ್‌ಆರ್‌ಪಿಆರ್ ಎನ್‌ಡಿಟಿವಿಯಲ್ಲಿ ೨೯.೧೮ ಷೇರುಗಳನ್ನು ಹೊಂದಿದೆ. ಬಿಎಸ್‌ಇನಲ್ಲಿ ಮಂಗಳವಾರ ಎನ್‌ಡಿಟಿವಿಯ ಪ್ರತಿ ಷೇರಿನ ದರ ೩೬೬ ರೂ. ಇತ್ತು. 20೨೧-೨೨ರ ಸಾಲಿನಲ್ಲಿ ಎನ್‌ಡಿಟಿವಿ ೨೩೦ ಕೋಟಿ ರೂ. ಆದಾಯ ಮತ್ತು ೮೫ ಕೋಟಿ ರೂ. ಲಾಭ ಗಳಿಸಿತ್ತು.
ಎನ್‌ಡಿಟಿವಿಯು ಒಟ್ಟು ಮೂರು ರಾಷ್ಟ್ರೀಯ ನ್ಯೂಸ್ ಚಾನೆಲ್‌ಗಳನ್ನು ನಡೆಸುತ್ತಿದೆ. ಎನ್‌ಡಿಟಿವಿ ೨೪x7, ಎನ್‌ಡಿಟಿವಿ ಇಂಡಿಯಾ ಮತ್ತು ಎನ್‌ಡಿಟಿವಿ ಪ್ರಾಫಿಟ್ ಚಾನೆಲ್‌ಗಳನ್ನು ಹೊಂದಿದೆ. ” ಈ ಖರೀದಿ ಎಎಂಜಿ ಮೀಡಿಯಾ ನೆಟ್‌ವರ್ಕ್ಸ್ ಲಿಮಿಟೆಡ್‌ನ ಯಾತ್ರೆಯಲ್ಲಿ ಮಹತ್ವದ ಮೈಲಿಗಲ್ಲುʼʼ ಎಂದು ಸಂಸ್ಥೆಯ ಸಿಇಒ ಸಂಜಯ್ ಪುಗಾಲಿಯಾ ಹೇಳಿದ್ದಾರೆ.