ಮುಂಬಯಿ: ಅದಾನಿ ಸಮೂಹದ ( Adani group) ಗ್ರೀನ್ ಡೈಡ್ರೋಜನ್ ಯೋಜನೆಯಲ್ಲಿ 4 ಶತಕೋಟಿ ಡಾಲರ್ (ಅಂದಾಜು 32,400 ಕೋಟಿ ರೂ.) ಹೂಡಿಕೆಗೆ ಫ್ರಾನ್ಸ್ ಮೂಲದ ಟೋಟಲ್ ಎನರ್ಜೀಸ್ ಸದ್ಯಕ್ಕೆ ಹಿಂದೇಟು ಹಾಕಿದೆ. ಅಮೆರಿಕ ಮೂಲದ ಶಾರ್ಟ್ ಸೆಲ್ಲರ್ ಹಿಂಡೆನ್‌ಬರ್ಗ್, ಅದಾನಿ ಗ್ರೂಪ್ ವಿರುದ್ಧ ವರದಿ ಪ್ರಕಟಿಸಿದ ಬಳಿಕ ಟೋಟಲ್ ಎನರ್ಜೀಸ್ ಈ ನಿರ್ಧಾರ ಕೈಗೊಂಡಿರುವುದಾಗಿ ವರದಿಯಾಗಿದೆ. ಇದರ ಪರಿಣಾಮ ಯೋಜನೆಗೆ ಬೇಕಾಗಿರುವ 6 ಶತಕೋಟಿ ಡಾಲರ್ (ಅಂದಾಜು 48,600 ಕೋಟಿ ರೂ.) ಸಾಲ ಪೂರೈಕೆಗೆ ವಿಘ್ನ ಎದುರಾಗಿದೆ.
ಅದಾನಿ ಗ್ರೂಪ್‌ನ ಅದಾನಿ ನ್ಯೂ ಇಂಡಸ್ಟ್ರೀಸ್‌ನಲ್ಲಿ 25% ಷೇರುಗಳನ್ನು ಟೋಟಲ್ ಎನರ್ಜೀಸ್ ಹೊಂದಿದೆ. H೨ ಯೋಜನೆಗೆ ಪಡೆಯುವ ಸಾಲದಲ್ಲಿ 50% ಕ್ಕೆ ಖಾತರಿ ನೀಡಲು ಫ್ರಾನ್ಸ್‌ನ ಕಂಪನಿ ಸಮ್ಮತಿಸಿತ್ತು. ಇದರಿಂದ 2030ರ ವೇಳೆಗೆ ಒಂದು ಡಾಲರ್‌ಗೆ ಕೆಜಿ ಹೈಡ್ರೋಜನ್ ತಯಾರಿಸುವ ಯೋಜನೆಗೆ ಹಿನ್ನಡೆ ಆಗುವ ಅಪಾಯ ಇದೆ.
ಟೋಟಲ್ ಎನರ್ಜೀಸ್ ಅದಾನಿ ಗ್ರೂಪ್‌ನಲ್ಲಿ ಹೂಡಿಕೆ ಮಾಡಿರುವ ದೊಡ್ಡ ವಿದೇಶಿ ಹೂಡಿಕೆದಾರ ಕಂಪನಿಗಳಲ್ಲಿ ಒಂದಾಗಿದೆ. ಈ ಹಿಂದೆ ಸಮೂಹದ ನವೀಕರಿಸಬಹುದಾದ ಇಂಧನ ಯೋಜನೆ, ಅದಾನಿ ಗ್ರೀನ್ ಎನರ್ಜಿ, ಸಿಟಿ ಗ್ಯಾಸ್ ಯುನಿಟ್ ಮತ್ತು ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್‌ನಲ್ಲಿ ಹೂಡಿಕೆ ಮಾಡಿತ್ತು.