ನವ ದೆಹಲಿ: ಬಿಲಿಯನೇರ್ ಗೌತಮ್ ಅದಾನಿ ನೇತೃತ್ವದ ಅದಾನಿ ಸಮೂಹವು ಸಾಲದ ದುಡ್ಡಿನಲ್ಲಿ ಈಗ ಇರುವ ಹಾಗೂ ಹೊಸ ಕ್ಷೇತ್ರಗಳಲ್ಲಿ ಭಾರಿ ಹೂಡಿಕೆ ಮಾಡಿದೆ ಎಂದು ಫಿಚ್ ಗ್ರೂಪ್‌ನ ಕ್ರೆಡಿಟ್ ಸೈಟ್ಸ್ ಸಂಸ್ಥೆಯ (Fitch report) ವರದಿ ಎಚ್ಚರಿಸಿದೆ.
ಅದಾನಿ ಗ್ರೂಪ್ ವ್ಯಾಪಕವಾಗಿ ಸಾಲದ ದುಡ್ಡಿನಲ್ಲಿ ನಾನಾ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿರುವುದರಿಂದ ಅದರ ಕ್ರೆಡಿಟ್ ಮಾನದಂಡಗಳು ಮತ್ತು ನಗದು ಹರಿವಿನ ಮೇಲೆ ಒತ್ತಡ ಉಂಟಾಗಿದೆ ಎಂದು ಕ್ರೆಡಿಟ್‌ಸೈಟ್ಸ್ ವರದಿ ಎಚ್ಚರಿಸಿದೆ. ಒಂದು ವೇಳೆ ಪರಿಸ್ಥಿತಿ ಬಿಗಡಾಯಿಸಿದರೆ ಅದಾನಿ ಗ್ರೂಪ್ ಸಾಲದ ಬಲೆಗೆ ಸಿಲುಕಬಹುದು ಮತ್ತು ಸುಸ್ತಿಸಾಲಗಾರನಾಗಬಹುದು ಎಂದೂ ವರದಿ ಹೇಳಿದೆ. ಕ್ರೆಡಿಟ್ ಸೈಟ್ಸ್ ವರದಿ ಬಗ್ಗೆ ಅದಾನಿ ಗ್ರೂಪ್ ಈ ತನಕ ಪ್ರತಿಕ್ರಿಯಿಸಿಲ್ಲ.
ಕೇಂದ್ರ ಸರ್ಕಾರದ ಜತೆ ಉತ್ತಮ ಸಂಬಂಧ
ಬಂದರು, ವಿಮಾನನಿಲ್ದಾಣ, ವಿದ್ಯುತ್, ಹಸಿರು ಇಂಧನ ಸೇರಿದಂತೆ ಪ್ರಮುಖ ವಲಯಗಳಲ್ಲಿ ಅದಾನಿ ಗ್ರೂಪ್ ಭಾರಿ ಹೂಡಿಕೆ ಮಾಡಿದೆ. ಹೀಗಿದ್ದರೂ, ಅದಾನಿ ಗ್ರೂಪ್ ಬ್ಯಾಂಕ್‌ಗಳ ಜತೆಗೆ ಮತ್ತು ಕೇಂದ್ರ ಸರ್ಕಾರದ ಆಡಳಿತ ವ್ಯವಸ್ಥೆ ಜತೆಗೆ ಪ್ರಬಲ ಸಂಬಂಧವನ್ನು ಹೊಂದಿದೆ ಎಂದು ವರದಿ ಹೇಳಿದೆ.
ಸಾಲದ ಹಣದಲ್ಲಿ ಭಾರಿ ಹೂಡಿಕೆ?: ಸಮೂಹದ ವಿಸ್ತರಣೆಗೆ ಮಾಡಿರುವ ಹೂಡಿಕೆಯು ಭಾರಿ ಪ್ರಮಾಣದ ಸಾಲವನ್ನು ಆಧರಿಸಿದೆ ಎಂದು ವರದಿ ವಿವರಿಸಿದೆ. ಅದಾನಿ ಗ್ರೂಪ್ ಭಾರತದ ಅತಿ ದೊಡ್ಡ ಖಾಸಗಿ ಬಂದರು, ಕಲ್ಲಿದ್ದಲು ಗಣಿಗಾರಿಕೆ, ಸಿಟಿ ಗ್ಯಾಸ್ ವಿತರಣೆಯ ಜಾಲವನ್ನು ಹೊಂದಿದೆ. ವಿಶ್ವದ ಅತಿ ದೊಡ್ಡ ನವೀಕರಿಸಬಹುದಾದ ಇಂಧನ ಉತ್ಪಾದಕನಾಗುವ ಇಂಗಿತವನ್ನು ಅದಾನಿ ಸಮೂಹ ಹೊಂದಿದೆ.
ರಿಲಯನ್ಸ್- ಅದಾನಿ ಗ್ರೂಪ್ ಸ್ಪರ್ಧೆ?
ಅದಾನಿ ಗ್ರೂಪ್ ಹೊಸ ಹಾಗೂ ತನಗೆ ಸಂಬಂಧಪಡದ ಕ್ಷೇತ್ರಗಳಲ್ಲಿ ಭಾರಿ ಹೂಡಿಕೆ ಮಾಡುತ್ತಿದೆ. ಅದು ಭಾರಿ ಬಂಡವಾಳವನ್ನು ಬಯಸುವಂಥದ್ದು. ಇದು ಕಳವಳಕಾರಿ ಅಂಶ ಎಂದಿದೆ. ಅಂಬಾನಿಯವರ ರಿಲಯನ್ಸ್ ಜತೆ ಮಾರುಕಟ್ಟೆ ಪ್ರಾಬಲ್ಯಕ್ಕಾಗಿ ನಡೆಸುವ ಪೈಪೋಟಿಯ ಭರದಲ್ಲಿ ಅಸಮರ್ಪಕ ಆರ್ಥಿಕ ನಿರ್ಧಾರವನ್ನು ಕೈಗೊಳ್ಳುವ ಸಾಧ್ಯತೆ ಇದೆ. ಆದರೆ ಅದಾನಿ ಗ್ರೂಪ್ ಸ್ಥಿರ ಮತ್ತು ಪ್ರಬಲ ಕಂಪನಿಗಳನ್ನು ನಡೆಸಿದ ಇತಿಹಾಸವನ್ನು ಹೊಂದಿದೆ. ಮೂಲಸೌಕರ್ಯ ಅಭಿವೃದ್ಧಿ ವಲಯದ ಉದ್ದಿಮೆಯಲ್ಲಿ ಸಶಕ್ತವಾಗಿದೆ. ಅದಾನಿ ಗ್ರೂಪ್‌ನ ಸ್ಥಾಪಕರು ಕೇಂದ್ರ ಸರ್ಕಾರದ ಜತೆಗೆ ಉತ್ತಮ ಸಂಬಂಧ ಹೊಂದಿದ್ದಾರೆ.
ಇದನ್ನೂ ಓದಿ: ವಿಸ್ತಾರ Money Guide | 6 ಅದಾನಿ ಕಂಪನಿ ಷೇರುಗಳಲ್ಲಿ ಹೂಡಿದ್ದ ತಲಾ 1 ಲಕ್ಷ ರೂ, ಎರಡೇ ವರ್ಷದಲ್ಲಿ 66 ಲಕ್ಷ!