ನವ ದೆಹಲಿ: ಅಮೆರಿಕ ಮೂಲದ ಶಾರ್ಟ್ ಸೆಲ್ಲರ್ ಹಿಂಡೆನ್ ಬರ್ಗ್ ರಿಸರ್ಚ್ ಮಾಡಿರುವ (Adani stocks) ಆರೋಪಗಳಿಗೆ 100ಕ್ಕೂ ಹೆಚ್ಚು ಪುಟಗಳ ವಿಸ್ತೃತವಾದ ಪ್ರತ್ಯುತ್ತರ ನೀಡಲು ಅದಾನಿ ಗ್ರೂಪ್ (Adani group) ಸಜ್ಜಾಗಿದೆ. ಅದಾನಿ ಎಂಟರ್‌ಪ್ರೈಸಸ್‌ನ ಎಫ್‌ಪಿಒ (Follow on public offer-FPO) ಜನವರಿ 31ಕ್ಕೆ ಮುಕ್ತಾಯವಾಗಲಿದೆ. ಬಳಿಕ ಅದಾನಿ ಗ್ರೂಪ್, ತನ್ನ ಉತ್ತರವನ್ನು ಬಹಿರಂಗಪಡಿಸಲಿದೆ ಎಂದು ವರದಿಯಾಗಿದೆ. ಅದಾನಿ ಗ್ರೂಪ್ ಫೆಬ್ರವರಿ 1ರಂದು ತನ್ನ ವಿರುದ್ಧದ ಎಲ್ಲ ಆರೋಪಗಳಿಗೆ ಉತ್ತರ ನೀಡುವ ನಿರೀಕ್ಷೆ ಇದೆ. ಅದಾನಿ ಸಮೂಹ ಕೆಲವು ಪ್ರಶ್ನೆಗಳಿಗೆ ಈಗಾಗಲೇ ಉತ್ತರಿಸಿದೆ. ಹಿಂಡೆನ್ ಬರ್ಗ್ (Hindenburg Research) ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿಯೂ ತಿಳಿಸಿದೆ. ಮತ್ತೊಂದು ಕಡೆ ಕಾನೂನು ಕರಮ ಎದುರಿಸಲು ತಾನಿ ಸಿದ್ಧ ಎಂದೂ ಹಿಂಡೆನ್‌ಬರ್ಗ್ ಸವಾಲೊಡ್ಡಿದೆ. ಹೀಗಾಗಿ ಅದಾನಿ ಗ್ರೂಪ್ ನೀಡಲಿರುವ ಉತ್ತರ ತೀವ್ರ ಕುತೂಹಲ ಕೆರಳಿಸಿದೆ.
100ಕ್ಕೂ ಹೆಚ್ಚು ಪುಟಗಳ ಉತ್ತರವನ್ನು ನೀಡಲಿರುವ ಅದಾನಿ ಗ್ರೂಪ್, ಇದನ್ನು ಬಿಡುಗಡೆಗೊಳಿಸುವ ಬಗ್ಗೆ ಕಾನೂನು ತಜ್ಞರ ನೆರವನ್ನೂ ನಿರೀಕ್ಷಿಸಿದೆ.
ಅದಾನಿ ಎಂಟರ್‌ಪ್ರೈಸಸ್ (Adani Enterprises) ತನ್ನ 20,000 ಕೋಟಿ ರೂ.ಗಳ ಎಫ್‌ಪಿಒ ನಡೆಸುವುದಕ್ಕೆ ಮುನ್ನಾ ದಿನವೇ ಹಿಂಡೆನ್‌ಬರ್ಗ್ ಸ್ಫೋಟಕ ವರದಿಯನ್ನು ಬಿಡುಗಡೆಗೊಳಿಸಿತ್ತು. ಅದಾನಿ ಗ್ರೂಪ್ ವಿರುದ್ಧ ಹಲವು ಅವ್ಯವಹಾರ, ಅಕ್ರಮಗಳ ಗಂಭೀರ ಆರೋಪಗಳನ್ನು ಹೊರಿಸಿತ್ತು. ಇದಾದ ಬಳಿಕ ಷೇರು ಪೇಟೆಯಲ್ಲಿ ಅದಾನಿ ಗ್ರೂಪ್ ಕಂಪನಿಗಳ ಷೇರು ದರ 20% ತನಕ ಕುಸಿದಿತ್ತು. ತಾನು ಎರಡು ವರ್ಷಗಳ ಸತತ ಸಂಶೋಧನೆ ನಡೆಸಿ ಈ ವರದಿ ತಯಾರಿಸಿದ್ದು, ಅದಾನಿ ಗ್ರೂಪ್ ಷೇರುಗಳ ವ್ಯವಹಾರದಲ್ಲಿ ಅಕ್ರಮ ಎಸಗಿದೆ ಎಂದು ಆರೋಪಿಸಿದೆ.