ಮುಂಬೈ: ಅದಾನಿ ಗ್ರೂಪ್ ಅಂಗ ಸಂಸ್ಥೆಯಾದ ಅದಾನಿ ಪೋರ್ಟ್ಸ್‌ನ ಆಡಿಟರ್ ಸ್ಥಾನಕ್ಕೆ ಡೆಲಾಯ್ಟ್ ಹಾಸ್ಕಿನ್ಸ್ ಆ್ಯಂಡ್ ಸೆಲ್ಸ್ ಎಲ್‌ಎಲ್‌ಪಿಯು ರಾಜೀನಾಮೆ ನೀಡಿದ ಬೆನ್ನಲ್ಲೇ ಸೋಮವಾರ (ಆಗಸ್ಟ್ 14) ಅದಾನಿ ಗ್ರೂಪ್ ಷೇರುಗಳ ಮೌಲ್ಯವು (Adani Group Shares) ಏಕಾಏಕಿ ಶೇ.4.2ರಷ್ಟು ಕುಸಿದಿದೆ. ಇದರಿಂದಾಗಿ ಅದಾನಿ ಗ್ರೂಪ್‌ನಲ್ಲಿ ಹೂಡಿಕೆ ಮಾಡಿದವರಿಗೆ ನಷ್ಟದ ಭೀತಿ ಶುರುವಾಗಿದೆ.
ಸೋಮವಾರ ಬೆಳಗ್ಗೆ ಅದಾನಿ ಎಂಟರ್‌ಪ್ರೈಸಸ್ ಹಾಗೂ ಅದಾನಿ ಪೋರ್ಟ್ಸ್‌ನ ಷೇರುಗಳ ಮೌಲ್ಯ ನಿಫ್ಟಿ50 ಸ್ಟಾಕ್ಸ್‌ನಲ್ಲಿ ಶೇ.4ರಷ್ಟು ಕುಸಿತ ಕಂಡಿದೆ. ಹಾಗೆಯೇ, ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ (NSE) ಅದಾನಿ ಗ್ರೂಪ್ ಷೇರುಗಳ ಮೌಲ್ಯವು ಶೇ.2ರಿಂದ 4ರಷ್ಟು ಕುಸಿದಿದೆ. ಅದಾನಿ ಪೋರ್ಟ್ಸ್‌ನ ಆಡಿಟರ್ ಸ್ಥಾನಕ್ಕೆ ಡೆಲಾಯ್ಟ್ ಹಾಸ್ಕಿನ್ಸ್ ಆ್ಯಂಡ್ ಸೆಲ್ಸ್ ಎಲ್‌ಎಲ್‌ಪಿಯು ರಾಜೀನಾಮೆ ನೀಡಿದ್ದೇ ಇದಕ್ಕೆ ಕಾರಣ ಎಂದು ತಿಳಿದುಬಂದಿದೆ. ಅಲ್ಲದೆ, ಸೆಬಿಯು ಸೋಮವಾರವೇ ಸುಪ್ರೀಂ ಕೋರ್ಟ್‌ಗೆ ತನಿಖಾ ವರದಿ ಸಲ್ಲಿಸುತ್ತಿರುವುದು ಕೂಡ ಕಾರಣ ಎನ್ನಲಾಗಿದೆ.
ಅದಾನಿ ಗ್ರೂಪ್ ಕುರಿತು ಅಮೆರಿಕದ ಹಿಂಡನ್‌ಬರ್ಗ್ ತನಿಖಾ ವರದಿ ಕುರಿತು ಬಾಹ್ಯ ತನಿಖೆ ನಡೆಸಲು ಡೆಲಾಯ್ಟ್ ಹಾಸ್ಕಿನ್ಸ್ ಆ್ಯಂಡ್ ಸೆಲ್ಸ್ ಎಲ್‌ಎಲ್‌ಪಿ ಬಯಸಿತ್ತು. ಇದೇ ವಿಚಾರಕ್ಕೆ ಭಿನ್ನಾಭಿಪ್ರಾಯ ಮೂಡಿದ ಕಾರಣ ಆಡಿಟರ್ ಸ್ಥಾನಕ್ಕೆ ರಾಜೀನಾಮೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ಡೆಲಾಯ್ಟ್ ಹಾಸ್ಕಿನ್ಸ್ ಆ್ಯಂಡ್ ಸೆಲ್ಸ್ ಎಲ್‌ಎಲ್‌ಪಿ ರಾಜೀನಾಮೆ ಸ್ವೀಕರಿಸಿದ ಅದಾನಿ ಪೋರ್ಟ್ಸ್, ಅದರ ಜಾಗಕ್ಕೆ ಎಂಎಸ್‌ಕೆಎ ಆ್ಯಂಡ್ ಅಸೋಸಿಯೇಟ್ಸ್ ಚಾರ್ಟರ್ಡ್ ಅಕೌಂಟಂಟ್ಸ್‌ಅನ್ನು ನೇಮಿಸಿದೆ.
ಇದನ್ನೂ ಓದಿ: Adani Group: ಸಂಘಿ ಸಿಮೆಂಟ್ ಕಂಪನಿ ಈಗ ಅದಾನಿ ಗ್ರೂಪ್ ಪಾಲು; ಇದು ಎಷ್ಟು ಸಾವಿರ ಕೋಟಿ ರೂ. ಡೀಲ್?
ಏನದು ಹಿಂಡನ್‌ಬರ್ಗ್ ವರದಿ ಕೇಸ್?
ಅಮೆರಿಕ ಮೂಲದ ಶಾರ್ಟ್ ಸೆಲ್ಲರ್ ಹಿಂಡನ್‌ಬರ್ಗ್ 2023ರ ಜನವರಿ 24ರಂದು ಅದಾನಿ ಗ್ರೂಪ್ ವಿರುದ್ಧ ತನಿಖಾ ವರದಿ ಪ್ರಕಟಿಸಿತ್ತು. ಕಂಪನಿ ಕೃತಕವಾಗಿ ತನ್ನ ಷೇರುಗಳ ದರ ಏರಿಸಿದೆ. ಹಲವು ಅವ್ಯವಹಾರಗಳನ್ನು ನಡೆಸಿದೆ ಎಂದು ಆರೋಪಿಸಿತ್ತು. ಈ ವರದಿ ಬಳಿಕ ಅದಾನಿ ಗ್ರೂಪ್ ಕಂಪನಿಗಳ ಷೇರು ದರ ಭಾರಿ ಕುಸಿತಕ್ಕೀಡಾಗಿತ್ತು. ಈ ಬಗ್ಗೆ ಷೇರು ಮಾರುಕಟ್ಟೆ ನಿಯಂತ್ರಕ ಸೆಬಿ ತನ್ನ ತನಿಖೆ ನಡೆಸುತ್ತಿದೆ.