ಮುಂಬಯಿ: ಮುಂಬಯಿ ಏರ್‌ಪೋರ್ಟ್ ಅನ್ನು ಮಾರಾಟ ಮಾಡುವ ವಿಚಾರದಲ್ಲಿ ಅದಾನಿ ಗ್ರೂಪ್ ಅಥವಾ (Adani Group) ಯಾರಿಂದಲೂ ಯಾವುದೇ ಒತ್ತಡ ಇದ್ದಿರಲಿಲ್ಲ ಎಂದು ಜಿವಿಕೆ ಗ್ರೂಪ್ ಅಧ್ಯಕ್ಷ ಸಂಜಯ್ ರೆಡ್ಡಿ ಮಂಗಳವಾರ ಹೇಳಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲೋಕಸಭೆಯಲ್ಲಿ, ಮುಂಬಯಿ ಏರ್ ಪೋರ್ಟ್ ಅನ್ನು ಸಿಬಿಐ ಮತ್ತು ಇ.ಡಿಯನ್ನು ಬಳಸಿ ಬಲವಂತವಾಗಿ ಜಿವಿಕೆಯಿಂದ ಕಿತ್ತುಕೊಳ್ಳಲಾಯಿತು ಎಂಬ ಹೇಳಿಕೆಗೆ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ.
ಅದಾನಿ ಗ್ರೂಪ್ 2021ರ ಜುಲೈನಲ್ಲಿ ಮುಂಬಯಿ ಏರ್‌ಪೋರ್ಟ್ ನಿಯಂತ್ರಣವನ್ನು ವಶಪಡಿಸಿಕೊಂಡಿತ್ತು. ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನವೊಂದರಲ್ಲಿ ಸಂಜಯ್ ರೆಡ್ಡಿ, ಮುಂಬಯಿ ಏರ್ ಪೋರ್ಟ್ ಮಾರಲು ಯಾರಿಂದಲೂ ತಮಗೆ ಒತ್ತಡ ಇದ್ದಿರಲಿಲ್ಲ ಎಂದು ತಿಳಿಸಿದ್ದಾರೆ.
ಜಿವಿಕೆ ಗ್ರೂಪ್ ಆವಾಗ ಏರ್ ಪೋರ್ಟ್ ಬಿಸಿನೆಸ್ ಸಲುವಾಗಿ ಹಣ ಸಂಗ್ರಹಿಸಲು ಯೋಚಿಸಿತ್ತು. ಆಗ ಅದಾನಿಯವರು ಸಂಪರ್ಕಿಸಿದರು. ಏರ್ ಪೋರ್ಟ್ ಬಗ್ಗೆ ಆಸಕ್ತಿ ಹೊಂದಿರುವುದಾಗಿ ತಿಳಿಸಿದರು. ಬಳಿಕ ಮುಂಬಯಿ ಏರ್ ಪೋರ್ಟ್ ಮಾರಲು ಜಿವಿಕೆ ಗ್ರೂಪ್ ನಿರ್ಧರಿಸಿತು. ಒಂದು ತಿಂಗಳೊಳಗೆ ಇಡೀ ಹಣಕಾಸು ವರ್ಗಾವಣೆಗಳನ್ನು ಮಾಡುವುದಾಗಿ ಗೌತಮ್ ಅದಾನಿ ಅವರು ಭರವಸೆ ನೀಡಿದ್ದರು. ಅದು ನಮಗೆ ನಿರ್ಣಾಯಕವಾಗಿತ್ತು. ಆದ್ದರಿಂದ ಒಪ್ಪಿದೆವು ಎಂದು ರೆಡ್ಡಿ ವಿವರಿಸಿದರು.
ಅದಾನಿ-ಹಿಂಡೆನ್‌ಬರ್ಗ್ ವಿವಾದಕ್ಕೆ ಸಂಬಂಧಿಸಿ ಲೋಕಸಭೆಯಲ್ಲಿ ಪ್ರತಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸಂದರ್ಭದಲ್ಲಿ ರಾಹುಲ್ ಗಾಂಧಿ, ಅದಾನಿ ಪರ ಸರ್ಕಾರ ನಿಯಮಾವಳಿಗಳನ್ನು ತಿರುಚಿತ್ತು. ಯಾವುದೇ ಅನುಭವ ಇಲ್ಲದಿದ್ದರೂ, ಅದಾನಿ ಗ್ರೂಪ್‌ಗೆ 6 ಏರ್‌ಪೋರ್ಟ್‌ಗಳ ಅಭಿವೃದ್ಧಿಯನ್ನು ವಹಿಸಿತ್ತು ಎಂದು ಆರೋಪಿಸಿದ್ದರು.