ನವ ದೆಹಲಿ: ಉದ್ಯಮಿ ಗೌತಮ್ ಅದಾನಿ ಅವರ ಹಿರಿಯ ಸೋದರ ವಿನೋದ್ ಅದಾನಿ (Vinod Adani) ಅವರು ಗ್ರೂಪ್‌ನ ಆಸ್ಟ್ರೇಲಿಯಾದಲ್ಲಿನ ಕಲ್ಲಿದ್ದಲು ವ್ಯವಹಾರದ ಕುರಿತ 3 ಕಂಪನಿಗಳ ಆಡಳಿತ ಮಂಡಳಿಗೆ ರಾಜೀನಾಮೆ ನೀಡಿದ್ದಾರೆ (Adani Group) ಎಂದು ವರದಿಯಾಗಿದೆ. ಅಮೆರಿಕದ ಶಾರ್ಟ್ ಸೆಲ್ಲರ್ ಹಿಂಡೆನ್ ಬರ್ಗ್ ಕಳೆದ ಜನವರಿ ಅಂತ್ಯಕ್ಕೆ ಅದಾನಿ ಗ್ರೂಪ್ ವಿರುದ್ಧ ಸ್ಫೋಟಕ ವರದಿ ಪ್ರಕಟಿಸಿದ ಬಳಿಕ ವಿನೋದ್ ಅದಾನಿ ಅವರ ಹೆಸರೂ ಪ್ರಚಲಿತದಲ್ಲಿತ್ತು.
ಇದೀಗ ಕಾರ್‌ಮೈಕೆಲ್ ರೈಲ್ & ಪೋರ್ಟ್ ಸಿಂಗಾಪುರ್, ಕಾರ್‌ಮೈಕೆಲ್ ರೈಲ್ ಸಿಂಗಾಪುರ್, ಅಬೋಟ್ ಪಾಯಿಂಟ್ ಕಂಪನಿಯ ಆಡಳಿತ ಮಂಡಳಿಗೆ ವಿನೋದ್ ಅದಾನಿ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ. ಈ ಬೆಳವಣಿಗೆ ಬಗ್ಗೆ ಅದಾನಿ ಗ್ರೂಪ್ ಪ್ರತಿಕ್ರಿಯಿಸಿಲ್ಲ. ಅವರು ಅದಾನಿ ಗ್ರೂಪ್‌ನ ಭಾಗವಾಗಿದ್ದಾರೆ ಎಂದು ಸಮೂಹ ಈ ಹಿಂದೆ ತಿಳಿಸಿತ್ತು.
ಹಿಂಡೆನ್ ಬರ್ಗ್ ತನ್ನ ವರದಿಯಲ್ಲಿ ವಿನೋದ್ ಅದಾನಿ ಅವರು ಡಜನುಗಟ್ಟಲೆ ನಕಲಿ ಕಂಪನಿಗಳನ್ನು ನಿಯಂತ್ರಿಸುತ್ತಿದ್ದಾರೆ ಎಂದು ಆರೋಪಿಸಿತ್ತು. ಹಿಂಡೆನ್ ಬರ್ಗ್ ವರದಿಯ ಬಳಿಕ ಅದಾನಿ ಸಮೂಹದ ಕಂಪನಿಗಳ ಷೇರುಗಳು ಭಾರಿ ಕುಸಿತಕ್ಕೀಡಾಗಿತ್ತು. ಬಳಿಕ ನಿಧಾನವಾಗಿ ಚೇತರಿಸುತ್ತಿದೆ. ಈ ನಡುವೆ ಪ್ರತಿಪಕ್ಷಗಳು ಅದಾನಿ ಗ್ರೂಪ್ ವಿರುದ್ಧ ಜಂಟಿ ಸಂಸದೀಯ ಸಮಿತಿ ತನಿಖೆಗೆ ಒತ್ತಾಯಿಸಿವೆ. ಫೋರ್ಬ್ಸ್ ನಿಯತಕಾಲಿಕೆಯ ಪ್ರಕಾರ ಗೌತಮ್ ಅದಾನಿ ಅವರು 25ನೇ ಸಿರಿವಂತ ವ್ಯಕ್ತಿ. ಅವರ ನಿವ್ವಳ ಸಂಪತ್ತು 47.9 ಶತಕೋಟಿ ಡಾಲರ್ (3.92 ಲಕ್ಷ ಕೋಟಿ ರೂ.)
ಐಐಎಫ್‌ಎಲ್ ವೆಲ್ತ್ ಹುರಾನ್ ಇಂಡಿಯಾ-2022 ಸಿರಿವಂತರ ಪಟ್ಟಿಯ ಪ್ರಕಾರ, ಗೌತಮ್ ಅದಾನಿಯವರ ಅಣ್ಣ ವಿನೋದ್ ಶಾಂತಿಲಾಲ್ ಅದಾನಿ ಅವರು ದುಬೈನಲ್ಲಿ ಬಿಸಿನೆಸ್ ಮೂಲಕ 37,400 ಕೋಟಿ ರೂ. ಗಳಿಸಿದ್ದಾರೆ. ಅಂದರೆ ದಿನಕ್ಕೆ ಸರಾಸರಿ 102 ಕೋಟಿ ರೂ. ಗಳಿಸಿದ್ದಾರೆ. ಅವರು ಭಾರತದ ಟಾಪ್ 10 ಸಿರಿವಂತರ ಪೈಕಿ 6ನೇ ಸ್ಥಾನಕ್ಕೆ ಏರಿದ್ದಾರೆ. ಅವರ ನಿವ್ವಳ ಸಂಪತ್ತು 169,000 ಕೋಟಿ ರೂ.ಗಳಾಗಿದೆ.