ನವ ದೆಹಲಿ: ಬಿಲಿಯನೇರ್ ಉದ್ಯಮಿ ಗೌತಮ್ ಅದಾನಿ ಅವರು ಟೆಲಿಕಾಂ ಸ್ಪೆಕ್ಟ್ರಮ್ ಖರೀದಿಸಲು ಯೋಜಿಸುತ್ತಿರುವುದಾಗಿ ಹೇಳಿದ್ದಾರೆ. ಇದರೊಂದಿಗೆ ಟೆಲಿಕಾಂ ಕ್ಷೇತ್ರಕ್ಕೆ ಅದಾನಿ ಗ್ರೂಪ್ ಅಚ್ಚರಿಯ ಪ್ರವೇಶ ಮಾಡಲಿದೆ. ನೇರವಾಗಿ ರಿಲಯನ್ಸ್ ಜಿಯೊ ಮತ್ತು ಭಾರ್ತಿ ಏರ್‌ಟೆಲ್‌ಗೆ ಪೈಪೋಟಿ ನೀಡಲಿದೆ.
ಸ್ಪೆಕ್ಟ್ರಮ್ ಹರಾಜು ಜುಲೈ ೨೬ರಂದು ನಡೆಯಲಿದೆ. ೫ಜಿ ಸ್ಪೆಕ್ಟ್ರಮ್ ಹರಾಜು ಕೂಡ ನಡೆಯಲಿದೆ. ಜಿಯೊ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಈ ಹರಾಜಿನಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಜತೆಗೆ ಅದಾನಿ ಗ್ರೂಪ್ ಕೂಡ ಅರ್ಜಿ ಸಲ್ಲಿಸಲಿದೆ. ೪ ಅರ್ಜಿಗಳು ಬಂದಿರುವುದನ್ನು ದೂರಸಂಪರ್ಕ ಇಲಾಖೆ ದೃಢಪಡಿಸಿದೆ. ಆದರೆ ೪ನೇ ಅರ್ಜಿದಾರರು ಯಾರು ಎಂಬುದನ್ನು ಇಲಾಖೆ ತಿಳಿಸಿಲ್ಲ.
ಹೀಗಿದ್ದರೂ ಈ ಬಗ್ಗೆ ಅದಾನಿ ಗ್ರೂಪ್ ದೃಢಪಡಿಸಿಲ್ಲ. ಜುಲೈ ೧೨ಕ್ಕೆ ಅರ್ಜಿದಾರರ ವಿವರಗಳು ಗೊತ್ತಾಗಲಿದೆ. ೪.೩ ಲಕ್ಷ ಕೋಟಿ ರೂ. ಮೌಲ್ಯದ ಸ್ಪೆಕ್ಟ್ರಮ್ ಹರಾಜು ನಡೆಯುವ ನಿರೀಕ್ಷೆ ಇದೆ. ೨೦ ವರ್ಷಗಳ ಅವಧಿಯ ಸ್ಪೆಕ್ಟ್ರಮ್‌ಗಳನ್ನು ಹರಾಜಿಗಿಡಲಾಗುವುದು.
ಟೆಲಿಕಾಂ ರಂಗದಲ್ಲಿ ಈಗ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಗ್ರೂಪ್, ಸುನಿಲ್ ಮಿತ್ತಲ್ ಅವರ ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಲಿಮಿಟೆಡ್ ಪ್ರಮುಖವಾಗಿವೆ. ಇದರೊಂದಿಗೆ ನಾಲ್ಕನೆಯ ಕಂಪನಿಯಾಗಿ ಅದಾನಿ ಗ್ರೂಪ್ ಪ್ರವೇಶದಿಂದ ಗ್ರಾಹಕರಿಗೆ ಯಾವ ಪ್ರಯೋಜನ ಸಿಗಬಹುದು ಎಂಬ ಕುತೂಹಲ ಈಗ ಉಂಟಾಗಿದೆ.