ಮುಂಬಯಿ: ಅದಾನಿ- ಹಿಂಡೆನ್‌ಬರ್ಗ್ ವಿವಾದದ ಹಿನ್ನೆಲೆಯಲ್ಲಿ (Adani-Hindenburg row ) ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ವಿವರಣೆಯಲ್ಲಿ, ಭವಿಷ್ಯದ ದಿನಗಳಲ್ಲಿ ಷೇರುಪೇಟೆಯಲ್ಲಿ ಹೂಡಿಕೆದಾರರ ಹಿತಾಸಕ್ತಿ ರಕ್ಷಣೆಗೆ ಸಲಹೆ ನೀಡಲು ತಜ್ಞರ ಸಮಿತಿಯನ್ನು ರಚಿಸುವುದಕ್ಕೆ ತನ್ನ ಅಭ್ಯಂತರವೇನೂ ಇಲ್ಲ ಎಂದು ತಿಳಿಸಿದೆ. ಹೂಡಿಕೆದಾರರ ಹಿತವನ್ನು ರಕ್ಷಿಸಲು ಷೇರು ಮಾರುಕಟ್ಟೆ ನಿಯಂತ್ರಕ ಸೆಬಿ ಸಶಕ್ತವಾಗಿದೆ ಎಂದೂ ಕೇಂದ್ರ ಸರ್ಕಾರ ತಿಳಿಸಿದೆ.
ಸುಪ್ರೀಂಕೋರ್ಟ್ ಕಳೆದ ಶುಕ್ರವಾರ ವಿಚಾರಣೆಯ ವೇಳೆ, ತಜ್ಞರ ಸಮಿತಿ ರಚಿಸುವ ಬಗ್ಗೆ ಕೇಂದ್ರ ಸರ್ಕಾರದ ವಿವರಣೆಯನ್ನು ನಿರೀಕ್ಷಿಸಿತ್ತು. ಉದ್ದೇಶಿತ ಸಮಿತಿಗೆ ವಿಷಯ ತಜ್ಞರ ಹೆಸರುಗಳನ್ನು ಮುಚ್ಚಿದ ಲಕೋಟೆಯಲ್ಲಿ ನೀಡಲು ಬಯಸಿರುವುದಾಗಿ ತಿಳಿಸಿತು.
ಕೇಂದ್ರ ಸರ್ಕಾರ ಮತ್ತು ಸೆಬಿಯ ಪರ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಮಾರುಕಟ್ಟೆ ನಿಯಂತ್ರಕ ಸೆಬಿ ಮತ್ತು ಇತರ ಶಾಸನಾತ್ಮಕ ಸಂಸ್ಥೆಗಳು ಹೂಡಿಕೆದಾರರ ಹಿತಾಸಕ್ತಿ ರಕ್ಷಣೆಯ ದೃಷ್ಟಿಯಿಂದ ಸಶಕ್ತವಾಗಿದೆ ಎಂದರು. ಅಮೆರಿಕದ ಶಾರ್ಟ್ ಸೆಲ್ಲರ್ ಹಿಂಡೆನ್‌ಬರ್ಗ್ ಅದಾನಿ ಗ್ರೂಪ್ ವಿರುದ್ಧ ಜನವರಿ 24ರಂದು ವರದಿ ಪ್ರಕಟಿಸಿದ ಬಳಿಕ, ಅದಾನಿ ಕಂಪನಿಗಳ ಷೇರು ಮಾರುಕಟ್ಟೆ ಮೌಲ್ಯದಲ್ಲಿ 120 ಶತಕೋಟಿ ಡಾಲರ್ ನಷ್ಟವಾಗಿದೆ.
ಕಾನೂನು ಹೋರಾಟಕ್ಕೆ ಅದಾನಿ ಗ್ರೂಪ್ ಸಿದ್ಧತೆ
ಬಿಲಿಯನೇರ್ ಉದ್ಯಮಿ ಗೌತಮ್ ಅದಾನಿ ಅವರು ( Adani Group) ಅಮೆರಿಕದ ಶಾರ್ಟ್ ಸೆಲ್ಲರ್ ಹಿಂಡೆನ್‌ಬರ್ಗ್ ವಿರುದ್ಧ ಕಾನೂನು ಹೋರಾಟ ನಡೆಸಲು ಅಲ್ಲಿನ ಕಾನೂನು ವಲಯದ ಸಂಸ್ಥೆಗಳಾದ ವಾಚ್‌ಟೆಲ್, ಲಿಪ್ಟೋನ್, ರೋಸೆನ್ &ಕಾಟ್ಜ್ ಅನ್ನು ನೇಮಿಸಿದೆ ಎಂದು ವರದಿಯಾಗಿದೆ. ಅಮೆರಿಕ ಮೂಲದ ಶಾರ್ಟ್ ಸೆಲ್ಲರ್ ಹಿಂಡೆನ್‌ಬರ್ಗ್ ಅದಾನಿ ಗ್ರೂಪ್ ವಿರುದ್ಧ ಅವ್ಯವಹಾರ, ಭ್ರಷ್ಟಾಚಾರದ ಆರೋಪಗಳನ್ನು ಮಾಡಿರುವ ವರದಿ ಪ್ರಕಟಿಸಿದ ಬಳಿಕ ಅದಾನಿ ಕಂಪನಿಗಳ ಷೇರುಗಳ ಮೌಲ್ಯದಲ್ಲಿ ಭಾರಿ ಕುಸಿತ ಉಂಟಾಗಿತ್ತು.
ಹಿಂಡೆನ್‌ಬರ್ಗ್ ವಿರುದ್ಧ ಕಾನೂನು ಕ್ರಮಕ್ಕೆ ಚಿಂತನೆ ನಡೆಸುತ್ತಿರುವುದಾಗಿ ಅದಾನಿ ಗ್ರೂಪ್ ಇತ್ತೀಚೆಗೆ ತಿಳಿಸಿತ್ತು. ಹಿಂಡೆನ್ ಬರ್ಗ್‌ನ ಆರೋಪಗಳನ್ನು ತಿರಸ್ಕರಿಸಿತ್ತು. ಆದರೆ ಪ್ರತಿಯಾಗಿ ಹಿಂಡೆನ್‌ಬರ್ಗ್, ಕಾನೂನು ಸಂಘರ್ಷಕ್ಕೂ ಸಿದ್ಧ ಎಂದು ಸವಾಲು ಹಾಕಿತ್ತು. 2022ರಲ್ಲಿ ಟ್ವಿಟರ್ ಕಂಪನಿಯು ವಾಚ್‌ಟೆಲ್ ಅನ್ನು ಎಲಾನ್ ಮಸ್ಕಲ್ ವಿರುದ್ಧ ಮೊಕದ್ದಮೆ ಹೂಡಲು ನೇಮಿಸಿತ್ತು. 44 ಶತಕೋಟಿ ಡಾಲರ್ ಮೌಲ್ಯದ ಖರೀದಿಯನ್ನು ಪೂರ್ಣಗೊಳಿಸಲು ಮಸ್ಕ್ ಮೇಲೆ ಒತ್ತಡ ಹೇರಿತ್ತು.