Site icon Vistara News

Adani Group : ಅದಾನಿ ಸಾಲ 21% ಏರಿಕೆ, ವಿದೇಶಿ ಬ್ಯಾಂಕ್‌ಗಳಿಂದ ಸಾಲ ವಿತರಣೆ ಚುರುಕು

adani group

adani

ನವ ದೆಹಲಿ: ಅದಾನಿ ಗ್ರೂಪ್‌ನ (Adani Group) ಸಾಲ ಕಳೆದೊಂದು ವರ್ಷದಲ್ಲಿ 21% ಏರಿಕೆಯಾಗಿದ್ದು, ಸಮೂಹಕ್ಕೆ ವಿದೇಶಿ ಬ್ಯಾಂಕ್‌ಗಳು ನೀಡುತ್ತಿರುವ ಸಾಲ ವಿತರಣೆ ಚುರುಕಾಗಿದೆ. ಅದಾನಿ ಸಮೂಹ ಪಡೆದಿರುವ ಸಾಲದಲ್ಲಿ ಮೂರನೇ ಒಂದರಷ್ಟು ಪಾಲನ್ನು ಜಾಗತಿಕ ಮಟ್ಟದ ಪ್ರಮುಖ ಬ್ಯಾಂಕ್‌ಗಳು ವಹಿಸಿವೆ. ಅದಾನಿ ಸಮೂಹದ ತ್ವರಿತ ಬೆಳವಣಿಗೆ ಮತ್ತು ಅಂತಾರಾಷ್ಟ್ರೀಯ ವಿಸ್ತರಣೆಯನ್ನು ಇದು ಬಿಂಬಿಸಿದೆ.

ಸಾಲ ಮರು ಪಾವತಿಸುವ ಕಂಪನಿಯ ಸಾಮರ್ಥ್ಯ ಕೂಡ ಸುಧಾರಿಸಿದೆ. ಆಸ್ಟ್ರೇಲಿಯಾ, ಇಸ್ರೇಲ್‌ ಮೊದಲಾದ ದೇಶಗಳಲ್ಲಿ ಅದಾನಿ ಸಮೂಹದ ಬಿಸಿನೆಸ್‌ ವಿಸ್ತರಿಸಿದೆ. ಹೀಗಿದ್ದರೂ, ಅಮೆರಿಕದ ಶಾರ್ಟ್‌ ಸೆಲ್ಲರ್‌ ಹಿಂಡೆನ್‌ಬರ್ಗ್‌, ಅದಾನಿ ಗ್ರೂಪ್‌ ವಿರುದ್ಧ ಅವ್ಯವಹಾರಗಳ ಆರೋಪ ಹೊರಿಸಿತ್ತು. ಬಳಿಕ ಅದಾನಿ ಕಂಪನಿಗಳ ಷೇರುಗಳ ದರ ತೀವ್ರ ಕುಸಿದಿತ್ತು. ಅದಾನಿ ಗ್ರೂಪ್‌ ಪದೇಪದೆ ತನ್ನ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದರೂ, ಪ್ರಮುಖ ಹೂಡಿಕೆದಾರರ ಜತೆ ಮುಖತಃ ಮಾತುಕತೆ ನಡೆಸಿದ್ದರೂ, ಸಾಲವನ್ನು ಮರು ಪಾವತಿಸುತ್ತಿದ್ದರೂ, ಷೇರು ದರಗಳು ಪೂರ್ಣ ಪ್ರಮಾಣದಲ್ಲಿ ಚೇತರಿಸಿಲ್ಲ. ಗ್ರೂಪ್‌ ತನ್ನ ಸಾಲದ ಹೊರೆಯನ್ನು ಗಣನೀಯವಾಗಿ ತಗ್ಗಿಸಲು ಶತಃ ಪ್ರಯತ್ನ ನಡೆಸುತ್ತಿದೆ.

ಮಾರ್ಚ್‌ 31ರ ವೇಳೆಗೆ ಅದಾನಿ ಕಂಪನಿಗಳ ಒಟ್ಟು ಸಲ 2.3 ಲಕ್ಷ ಕೋಟಿ ರೂ.ಗಳಾಗಿದೆ. ಅಂದರೆ 21% ಏರಿಕೆಯಾಗಿದೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ 27,000 ಕೋಟಿ ರೂ. ಸಾಲ ನೀಡಿದೆ. ಮೂಡೀಸ್‌ ಇನ್‌ವೆಸ್ಟರ್ಸ್‌ ಸರ್ವೀಸ್‌ (Moodyʼs Investors service) ಇತ್ತೀಚೆಗೆ ತನ್ನ ವರದಿಯಲ್ಲಿ ಅದಾನಿ ಗ್ರೂಪ್‌ ಹೊಂದಿರುವ ಸಾಲದ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು.

ಎಲ್‌ಐಸಿಯಿಂದ ಹೂಡಿಕೆ ಹೆಚ್ಚಳ:

ಹಿಂಡೆನ್‌ ಬರ್ಗ್‌ನ ವರದಿ ಎಬ್ಬಿಸಿದ ಕೋಲಾಹಲಗಳಿಗೆ ಸೊಪ್ಪು ಹಾಕದ ವಿಮೆ ದಿಗ್ಗಜ ಭಾರತೀಯ ವಿಮೆ ನಿಗಮ (Life Insurance Corporation of India-LIC) ಅದಾನಿ ಸಮೂಹದ ಪ್ರವರ್ತಕ ಸಂಸ್ಥೆಯಾದ ಅದಾನಿ ಎಂಟರ್‌ಪ್ರೈಸಸ್‌ನಲ್ಲಿ ಕಳೆದ ಜನವರಿ-ಮಾರ್ಚ್‌ ಅವಧಿಯಲ್ಲಿ ತನ್ನ ಷೇರುಗಳನ್ನು ಹೆಚ್ಚಿಸಿದೆ. 357,500 ಷೇರುಗಳನ್ನು ಖರೀದಿಸಿದೆ. ಇದರಿಂದಾಗಿ ಅದಾನಿ ಎಂಟರ್‌ಪ್ರೈಸಸ್‌ನಲ್ಲಿ ಎಲ್‌ಐಸಿಯ ಷೇರು ಪಾಲು 4.23%ರಿಂದ 4.26%ಕ್ಕೆ ಏರಿಕೆಯಾಗಿದೆ.

ಅದಾನಿ ಗ್ರೂಪ್‌ ಕಂಪನಿಗಳಲ್ಲಿ ಎಲ್‌ಐಸಿಯ ಹೂಡಿಕೆಯು 2023ರ ಜನವರಿ ಅಂತ್ಯಕ್ಕೆ 30,127 ಕೋಟಿ ರೂ.ನಷ್ಟಿತ್ತು. ಹಿಂಡೆನ್‌ ಬರ್ಗ್‌ ವರದಿ ಪ್ರಕಟವಾದ ಬಳಿಕ ಅದಾನಿ ಕಂಪನಿಗಳ ಷೇರು ದರ ಇಳಿದಿತ್ತು. ಇದು ರಾಜಕೀಯವಾಗಿಯೂ ವಿವಾದ ಸೃಷ್ಟಿಸಿತ್ತು. ಅದಾನಿ ಕಂಪನಿಗಳಲ್ಲಿ ಎಲ್‌ಐಸಿಯ ಹೂಡಿಕೆ ವಿರುದ್ಧ ಪ್ರತಿಪಕ್ಷಗಳು ಕಳವಳ ವ್ಯಕ್ತಪಡಿಸಿತ್ತು. ಇದರಿಂದಾಗಿ ಎಲ್‌ಐಸಿಗೆ ನಷ್ಟ ಸಂಭವಿಸಿದೆ ಎಂದು ಆರೋಪಿಸಲಾಗಿತ್ತು.

ಆದರೆ ಈ ಆರೋಪಗಳನ್ನು ಎಲ್‌ಐಸಿ ನಿರಾಕರಿಸಿತ್ತು. ಎಸ್‌ಬಿಐ ಮತ್ತು ಎಲ್‌ಐಸಿಗೆ ಅದಾನಿ ಗ್ರೂಪ್‌ ಷೇರುಗಳಲ್ಲಿ ಹೂಡಿಕೆ ಮಾಡುವಂತೆ ಒತ್ತಡ ಹೇರಲಾಗಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ದೂರಿದ್ದಾರೆ. ಆದರೆ ತನ್ನ ಒಟ್ಟು ಆಸ್ತಿಯಲ್ಲಿ 1%ಗಿಂತಲೂ ಕಡಿಮೆ ಮೊತ್ತವನ್ನು ಅದಾನಿ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡಲಾಗಿದೆ ಎಂದು ಎಲ್‌ಐಸಿ ತಿಳಿಸಿದೆ. ಅದಾನಿ ಟ್ರಾನ್ಸ್‌ಮಿಶನ್‌, ಅದಾನಿ ಗ್ರೀನ್‌, ಅದಾನಿ ಟೋಟಲ್‌ ಗ್ಯಾಸ್‌ನಲ್ಲೂ ಷೇರುಗಳನ್ನು ಹೆಚ್ಚಿಸಿದೆ. ರಿಲಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್‌ ಅಂಬಾನಿ ಅವರು ಫೋರ್ಬ್ಸ್‌ ಸಂಸ್ಥೆ ಬಿಡುಗಡೆಗೊಳಿಸಿರುವ 2023ರ ವಿಶ್ವದ ಪ್ರಮುಖ ಬಿಲಿಯನೇರ್‌ಗಳ (forbes Worlds Billionaires List 2023) ಪಟ್ಟಿಯಲ್ಲಿ 9ನೇ ಸ್ಥಾನ ಗಳಿಸಿದ್ದಾರೆ. ಅದಾನಿ ಸಮೂಹದ ಸಂಸ್ಥಾಪಕ ಗೌತಮ್‌ ಅದಾನಿ ಅವರು 24ಕ್ಕೆ ಕುಸಿದಿದ್ದಾರೆ.

Exit mobile version