ನವ ದೆಹಲಿ: ಎನ್‌ಡಿಟಿವಿ ( NDTV) ಷೇರು ಮಾರುಕಟ್ಟೆ ನಿಯಂತ್ರಕ ಸೆಬಿಗೆ ಗುರುವಾರ ಸಲ್ಲಿಸಿದ ವಿವರಣೆಯಲ್ಲಿ, ಎನ್‌ಡಿಟಿವಿಯ ಪ್ರವರ್ತಕ ಕಂಪನಿಯಾದ ಆರ್‌ಆರ್‌ಪಿಆರ್‌ನಲ್ಲಿನ ೯೯.೫% ಷೇರುಗಳನ್ನು ಖರೀದಿಸಲು ಸೆಬಿಯ ಅನುಮತಿ ಪಡೆಯುವುದು ಅಗತ್ಯ ಎಂದು ತಿಳಿಸಿದೆ. ಎನ್‌ಡಿಟಿವಿಯ ಸ್ಥಾಪಕರಿಗೆ ಷೇರು ಮಾರುಕಟ್ಟೆಯಲ್ಲಿ ವ್ಯವಹರಿಸಲು ನಿರ್ಬಂಧ ಇರುವ ಹಿನ್ನೆಲೆಯಲ್ಲಿ ಸೆಬಿಯ ಅನುಮೋದನೆ ಅಗತ್ಯ ಎಂದು ಎನ್‌ಡಿಟಿವಿ ತಿಳಿಸಿದೆ.
ಸೆಬಿಯು ೨೦೨೦ರ ನವೆಂಬರ್ ೨೭ರಂದು ಎನ್‌ಡಿಟಿವಿಯ ಸ್ಥಾಪಕರಾದ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ಅವರಿಗೆ ಷೇರು ಮಾರುಕಟ್ಟೆಯಿಂದ ಎರಡು ವರ್ಷಗಳ ಅವಧಿಗೆ ನಿರ್ಬಂಧಿಸಿತ್ತು. ನೇರವಾಗಿ ಇಲ್ಲವೇ ಪರೋಕ್ಷವಾಗಿ ಷೇರುಗಳ ಖರೀದಿ-ಮಾರಾಟ ವಹಿವಾಟು ನಡೆಸದಿರುವಂತೆ ನಿಷೇಧಿಸಲಾಗಿತ್ತು. ೨೦೨೨ರ ನವೆಂಬರ್ ೨೬ರ ತನಕ ಈ ನಿರ್ಬಂಧ ಅನ್ವಯಿಸಲಿದೆ.
ಎನ್‌ಡಿಟಿವಿ ಸ್ಥಾಪಕರಾದ ಪ್ರಣಯ್ ರಾಯ್ ಮತ್ತು ರಾಧಿಕಾ ಅವರು ೪೦೦ ಕೋಟಿ ರೂ. ಸಾಲವನ್ನು ವಿಸಿಪಿಎಲ್‌ನಿಂದ ೧೦ ವರ್ಷಗಳ ಹಿಂದೆ ಪಡೆದಿದ್ದರು. ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿಸದಿದ್ದುದರಿಂದ ವಿಸಿಪಿಎಲ್ ವಾರಂಟ್ ಹೊರಡಿಸಿತ್ತು. ಹಾಗೂ ಒಪ್ಪಂದದ ಪ್ರಕಾರ ಎನ್‌ಡಿಟಿವಿಯಲ್ಲಿನ ೨೯.೧೮ ಷೇರುಗಳನ್ನು ತನ್ನದಾಗಿಸಿತ್ತು. ಇದಕ್ಕಾಗಿ ಎನ್‌ಡಿಟಿವಿಯ ಪ್ರವರ್ತಕ ಸಂಸ್ಥೆಯಾದ ಆರ್‌ಆರ್‌ಪಿಆರ್ ಸಂಸ್ಥೆಗೆ ವಾರಂಟ್ ಹೊರಡಿಸಿತ್ತು. ಈ ವಿಸಿಪಿಎಲ್ ಈಗ ಅದಾನಿ ಸಮೂಹದ ಅಧೀನ ಕಂಪನಿಯಾಗಿದೆ. ಅದಾನಿ ಸಮೂಹದ ಎಎಂಜಿ ಮೀಡಿಯಾ ನೆಟ್‌ವರ್ಕ್ಸ್, ವಿಸಿಪಿಎಲ್ ಅನ್ನು ಖರೀದಿಸಿದೆ. ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ಈಗಲೂ ಎನ್‌ಡಿಟಿವಿಯಲ್ಲಿ ೩೨.೩೬ % ಷೇರುಗಳನ್ನು ಹೊಂದಿದ್ದಾರೆ.