ಮುಂಬಯಿ: ಅದಾನಿ ಗ್ರೂಪ್ ಅಕ್ಟೋಬರ್ ೧೭ರಂದು ಎನ್‌ಡಿಟಿವಿಯಲ್ಲಿನ ಹೆಚ್ಚುವರಿ ೨೬% ಷೇರುಗಳನ್ನು ಖರೀದಿಸಲು ಮುಕ್ತ ಮಾರುಕಟ್ಟೆಯಲ್ಲಿ ತನ್ನ ಆಫರ್ ಅನ್ನು ಮುಂದಿಡಲಿದೆ. (NDTV) ೧.೬೭ ಕೋಟಿ ಷೇರುಗಳನ್ನು, ಪ್ರತಿ ಷೇರಿಗೆ ೨೯೪ ರೂ. ದರದಲ್ಲಿ ಅದಾನಿ ಗ್ರೂಪ್ ಕೊಳ್ಳುವ ಆಫರ್ ಅನ್ನು ಮುಂದಿಟ್ಟಿದೆ. ಈ ಖರೀದಿ ಪ್ರಸ್ತಾಪ ನವೆಂಬರ್ ೧ಕ್ಕೆ ಮುಕ್ತಾಯವಾಗಲಿದೆ. ಈ ಬಗ್ಗೆ ಜೆಎಂ ಫೈನಾನ್ಷಿಯಲ್ ಜಾಹೀರಾತು ನೀಡಿದೆ.
ಎಲ್ಲ ೨೬% ಷೇರುಗಳನ್ನು ಖರೀದಿಸಿದರೆ ಅದಾನಿ ಗ್ರೂಪ್‌ಗೆ ೪೯೨.೮೧ ಕೋಟಿ ರೂ. ವೆಚ್ಚವಾಗಲಿದೆ. ಕಳೆದ ಆಗಸ್ಟ್ ೨೩ರಂದು ಅದಾನಿ ಗ್ರೂಪ್, ಎನ್‌ಡಿಟಿವಿಯಲ್ಲಿನ ೨೯.೧೮ ಷೇರುಗಳನ್ನು ವಿಸಿಪಿಎಲ್ ಮೂಲಕ ಖರೀದಿಸಿತ್ತು. ಇದರ ಬೆನ್ನಲ್ಲೇ ಹೆಚ್ಚುವರಿ ೨೬% ಷೇರು ಖರೀದಿಗೆ ಆಫರ್ ನೀಡಲಾಗಿದೆ. ಇದರೊಂದಿಗೆ ಎನ್‌ಡಿಟಿವಿಯ ಮಾಲಿಕತ್ವ ನಿಯಂತ್ರಣ ಪಡೆಯಲು ಅದಾನಿ ಗ್ರೂಪ್ ರೆಡಿಯಾಗಿದೆ.
ಎನ್‌ಡಿಟಿವಿಯ ಪರವಾಗಿ ಪ್ರಣಯ್ ರಾಯ್ ೨೦೦೯-೧೦ರಲ್ಲಿ ೪೦೩ ಕೋಟಿ ರೂ. ಸಾಲವನ್ನು ವಿಸಿಪಿಎಲ್‌ನಿಂದ ತೆಗೆದುಕೊಂಡಿತ್ತು. ಒಪ್ಪಂದದ ಪ್ರಕಾರ ನಿಗದಿತ ಅವಧಿಯಲ್ಲಿ ಮರು ಪಾವತಿಸದಿದ್ದರೆ, ಸಾಲವನ್ನು ಎನ್‌ಡಿಟಿವಿಯ ಷೇರಾಗಿ ಪರಿವರ್ತಿಸಬಹುದು. ಸಾಲ ಮರು ಪಾವತಿಯಾಗದ ಪರಿಣಾಮ ವಿಸಿಪಿಎಲ್, ವಾರಂಟ್ ಹೊರಡಿಸಿ ಸಾಲವನ್ನು ಷೇರುಗಳನ್ನಾಗಿ ಪರಿವರ್ತಿಸಿತ್ತು. ವಿಸಿಪಿಎಲ್ ಅನ್ನು ಅದಾನಿ ಗ್ರೂಪ್ ಖರೀದಿಸಿತ್ತು. ಇದರೊಂದಿಗೆ ಪರೋಕ್ಷವಾಗಿ ಎನ್‌ಡಿಟಿವಿಯ ೨೯.೧೮ ಷೇರುಗಳನ್ನು ಅದಾನಿ ಸಮೂಹ ಖರೀದಿಸಿದಂತಾಗಿದೆ.