ನವ ದೆಹಲಿ: ಹಿಂಡೆನ್‌ಬರ್ಗ್ ವರದಿಯ ಬಳಿಕ ಭಾರಿ ಕುಸಿತಕ್ಕೀಡಾಗಿದ್ದ ಅದಾನಿ ಗ್ರೂಪ್ ಕಂಪನಿಗಳ ಷೇರುಗಳಲ್ಲಿ ಮೂರು ತಿಂಗಳಿನ ಹಿಂದೆ 15,000 ಕೋಟಿ ರೂ. ಹೂಡಿದ್ದ ಅನಿವಾಸಿ ಭಾರತೀಯ ಹೂಡಿಕೆದಾರ ರಾಜೀವ್ ಜೈನ್, ಇದೀಗ ಅಂದಾಜು 10,000 ಕೋಟಿ ರೂ. ಲಾಭ ಗಳಿಸಿದ್ದಾರೆ. (Adani stocks) ರಾಜೀವ್ ಜೈನ್ ಅವರು 15,000 ಕೋಟಿ ರೂ. ಹೂಡಿದ್ದರು. ಅದರ ಮೌಲ್ಯ ಈಗ 25,000 ಕೋಟಿ ರೂ.ಗೆ ಏರಿಕೆಯಾಗಿದೆ.
ರಾಜೀವ್ ಜೈನ್ (Rajiv Jain) ಅವರ ಜಿಕ್ಯೂಜಿ ಪಾರ್ಟ್‌ನರ್ಸ್ (GQG Partners) ಅದಾನಿ ಕಂಪನಿಗಳಲ್ಲಿ ಹೂಡಿದ್ದ ಮೊತ್ತದ ಮೌಲ್ಯ ಕಳೆದ ಮಾರ್ಚ್ 2ಕ್ಕೆ 15,446 ಕೋಟಿ ರೂ. ಆಗಿತ್ತು. ಮಂಗಳವಾರ ಅದರ ಮೌಲ್ಯ 25,515 ಕೋಟಿ ರೂ. ಆಗಿತ್ತು. ಅದಾನಿ ಸಮೂಹದ ಅದಾನಿ ಎಂಟರ್‌ಪ್ರೈಸ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಪೋರ್ಟ್ಸ್ ಮತ್ತು ಅದಾನಿ ಟ್ರಾನ್ಸ್‌ಮಿಶನ್‌ನಲ್ಲಿ ರಾಜೀವ್ ಜೈನ್ ಕಂಪನಿ ಹೂಡಿಕೆ ಮಾಡಿತ್ತು.
ಅದಾನಿ ಗ್ರೂಪ್‌ನಲ್ಲಿ ಜಿಕ್ಯೂಜಿ ಪಾರ್ಟ್‌ನರ್ಸ್ ತನ್ನ ಹೂಡಿಕೆಯನ್ನು 10% ತನಕ ಏರಿಸಿದೆ. ಮುಂದಿನ ಐದು ವರ್ಷಗಳಲ್ಲಿ ಅದಾನಿ ಗ್ರೂಪ್‌ನಲ್ಲಿ ಅದಾನಿ ಕುಟುಂಬದ ಬಳಿಕ ಅತಿ ದೊಡ್ಡ ಹೂಡಿಕೆದಾರರಲ್ಲಿ ಒಬ್ಬರಾಗುವುದಾಗಿ ರಾಜೀವ್ ಜೈನ್ ಹೇಳಿದ್ದಾರೆ.
ಅದಾನಿ ಎಂಟರ್‌ಪ್ರೈಸ್ ಮತ್ತು ಅದಾನಿ ಟ್ರಾನ್ಸ್‌ಮಿಶನ್ 21,000 ಕೋಟಿ ರೂ. ಫಂಡ್ ಸಂಗ್ರಹಿಸಲು ಸಿದ್ಧತೆ ಮಾಡುತ್ತಿರುವುದಾಗಿ ಇತ್ತೀಚೆಗೆ ಘೋಷಿಸಿವೆ. ಅದಾನಿ ಎಂಟರ್‌ಪ್ರೈಸ್ 12,500 ಕೋಟಿ ರೂ, ಹಾಗೂ ಅದಾನಿ ಟ್ರಾನ್ಸ್‌ಮಿಶನ್ 8,500 ಕೋಟಿ ರೂ. ಸಂಗ್ರಹಿಸಲು ಉದ್ದೇಶಿಸಿವೆ.
ಇದನ್ನೂ ಓದಿ :Adani Group : ಅದಾನಿ ಗ್ರೂಪ್ ಪ್ರವರ್ತಕರಿಂದ ಎಫ್‌ಐಐಗೆ 15,446 ಕೋಟಿ ರೂ. ಷೇರುಗಳ ಮಾರಾಟ