ಮುಂಬಯಿ: ಅದಾನಿ ಸಮೂಹದ ಕಂಪನಿಗಳ (Adani stocks) ಷೇರು ದರಗಳಲ್ಲಿ ಮಂಗಳವಾರ ಬೆಳಗ್ಗೆ ಗಣನೀಯ ಚೇತರಿಕೆ ದಾಖಲಾಯಿತು. ಅದಾನಿ ಎಂಟರ್‌ಪ್ರೈಸಸ್ ಷೇರು ದರದಲ್ಲಿ 5% ಏರಿಕೆಯಾಯಿತು. ಅದಾನಿ ಗ್ರೂಪ್‌ನ 8 ಕಂಪನಿಗಳ ಷೇರು ದರಗಳು ಬೆಳಗ್ಗೆ ಚೇತರಿಸಿತು. ಎರಡು ಕಂಪನಿಗಳ ಷೇರು ದರ ಕುಸಿಯಿತು.
ಬಿಎಸ್‌ಇನಲ್ಲಿ ಅದಾನಿ ಎಂಟರ್‌ಪ್ರೈಸಸ್‌ನ ಷೇರು ದರದಲ್ಲಿ 17.47% ಏರಿಕೆ ಕಂಡು ಬಂದಿತು. ೧,೮೪೭ ರೂ.ಗೆ ಹೆಚ್ಚಳವಾಯಿತು. ಮಾರುಕಟ್ಟೆ ಬಂಡವಾಳ ಮೌಲ್ಯ 2.06 ಲಕ್ಷ ಕೋಟಿ ರೂ.ಗೆ ಜಿಗಿಯಿತು. ಅದಾನಿ ಪೋರ್ಟ್ಸ್ ಷೇರು ದರ 6.42% ಏರಿಕೆ ದಾಖಲಿಸಿತು. ೫೮೦ ರೂ.ಗೆ ಚೇತರಿಸಿತು. ಇದರ ಮಾರುಕಟ್ಟೆ ಬಂಡವಾಳ ಮೌಲ್ಯ 1.28 ಲಕ್ಷ ಕೋಟಿ ರೂ.ಗೆ ವೃದ್ಧಿಸಿತು. ಅದಾನಿ ವಿಲ್ಮರ್ ಶೇ.5 (399 ರೂ.), ಅದಾನಿ ಟ್ರಾನ್ಸ್‌ಮಿಶನ್ ಶೇ.5 (1,324 ರೂ.) ಹೆಚ್ಚಳ ದಾಖಲಿಸಿತು. ಅದಾನಿ ಪವರ್ ಮತ್ತು ಅದಾನಿ ಗ್ಯಾಸ್ ಷೇರು ದರ ಇಳಿಕೆಯಲ್ಲಿತ್ತು.
ಅದಾನಿ ಎಂಟರ್‌ಪ್ರೈಸಸ್ | 1,847.40 ರೂ. | 17.47% ಏರಿಕೆ |
ಅದಾನಿ ಪೋರ್ಟ್ಸ್ & ಸ್ಪೆಶಲ್ ಎಕನಾಮಿಕ್ ಝೋನ್ | 580.45 ರೂ. | 6.42% ಏರಿಕೆ |
ಅದಾನಿ ಪವರ್ ಲಿಮಿಟೆಡ್ | 181.35 ರೂ. | 0.55% ಇಳಿಕೆ |
ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ | 911.40 ರೂ. | 2.51% ಏರಿಕೆ |
ಅದಾನಿ ವಿಲ್ಮರ್ ಲಿಮಿಟೆಡ್ | 398.90 ರೂ. | 4.99% ಏರಿಕೆ |
ಷೇರು ಪೇಟೆಯಲ್ಲಿ ಕಳೆದ ಎಂಟು ದಿನಗಳಲ್ಲಿ ಅದಾನಿ ಗ್ರೂಪ್ ಕಂಪನಿಗಳ ಷೇರು ದರಗಳು ತೀವ್ರ ಕುಸಿದಿತ್ತು. ಅದಾನಿ ಗ್ರೂಪ್ ಸೋಮವಾರ ಸಾಲದಲ್ಲಿ ನಿರ್ದಿಷ್ಟ ಮೊತ್ತವನ್ನು ಅವಧಿಗೆ ಮುನ್ನ ಮರು ಪಾವತಿಸಿ, ಅಡಮಾನ ಇಟ್ಟಿದ್ದ ಷೇರುಗಳನ್ನು ಬಿಡುಗಡೆಗೊಳಿಸುವುದಾಗಿ ತಿಳಿಸಿದ ಬಳಿಕ ಹೂಡಿಕೆದಾರರಲ್ಲಿ ವಿಶ್ವಾಸ ವೃದ್ಧಿಸಿತು.
ಟಾಪ್ 20 ಶ್ರೀಮಂತರ ಪಟ್ಟಿಗೆ ಮರಳಿದ ಅದಾನಿ
ಷೇರು ಮಾರುಕಟ್ಟೆಯಲ್ಲಿ ಫೆ.7ರಂದು ಅದಾನಿ ಸಮೂಹದ ಷೇರುಗಳ ಚೇತರಿಕೆಯ ಪರಿಣಾಮ ಉದ್ಯಮಿ ಗೌತಮ್ ಅದಾನಿ ಮಂಗಳವಾರ 463 ದಶಲಕ್ಷ ಡಾಲರ್ (3,750 ಕೋಟಿ ರೂ.) ಗಳಿಸಿದ್ದು, ಜಗತ್ತಿನ ಟಾಪ್ 20 ಸಿರಿವಂತರ ಪಟ್ಟಿಗೆ ಮರಳಿದ್ದಾರೆ. ಅದಾನಿ ಪೋರ್ಟ್ಸ್, ಅಂಬುಜಾ ಸಿಮೆಂಟ್ಸ್, ಅದಾನಿ ಪವರ್ ಫಲಿತಾಂಶಗಳು ಮಾರುಕಟ್ಟೆಯ ಮೇಲೆ ಪ್ರಭಾವ ಬೀರುವ ನಿರೀಕ್ಷೆ ಇದೆ. ಫೋರ್ಬ್ಸ್ ಪ್ರಕಾರ ಗೌತಮ್ ಅದಾನಿ ವಿಶ್ವದ ನಂ.17 ನೇ ಸ್ಥಾನಕ್ಕೆ ಏರಿದ್ದಾರೆ.
ಅದಾನಿ ಪೋರ್ಟ್ಸ್ ನಿವ್ವಳ ಲಾಭ 16% ಇಳಿಕೆ: ಅದಾನಿ ಪೋರ್ಟ್ಸ್ 2022-23ರ ಮೂರನೇ ತ್ರೈಮಾಸಿಕದಲ್ಲಿ 1,315 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. 2021-22ರ ಇದೇ ಅವಧಿಯಲ್ಲಿ 1,567 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, 16% ಇಳಿಕೆಯಾಗಿದೆ. ಆದರೆ ಕಂಪನಿಯ ಆದಾಯದಲ್ಲಿ 16% ಏರಿಕೆಯಾಗಿದ್ದು, 15,055 ಕೋಟಿ ರೂ.ಗೆ ವೃದ್ಧಿಸಿದೆ.