ಮುಂಬಯಿ: ಶೀಘ್ರದಲ್ಲಿಯೇ ಸೂಪರ್ ಆ್ಯಪ್ ಒಂದನ್ನು ಬಿಡುಗಡೆಗೊಳಿಸುವುದಾಗಿ ( Adani super app) ಬಿಲಿಯನೇರ್ ಉದ್ಯಮಿ ಗೌತಮ್ ಅದಾನಿ ತಿಳಿಸಿದ್ದಾರೆ.
ಅದಾನಿ ಏರ್ ಪೋರ್ಟ್‌ಗೆ ಭೇಟಿ ನೀಡುವ ಪ್ರಯಾಣಿಕರು, ವೀಕ್ಷಕರಿಗೆ ಅದಾನಿ ಗ್ರೂಪ್‌ನ ಸಮಗ್ರ ಸೇವೆಗಳೂ ಇದರ ಮೂಲಕ ಪರಿಚಯವಾಗಲಿದೆ ಎಂದಿದ್ದಾರೆ. ಮುಂದಿನ ಮೂರರಿಂದ ಆರು ತಿಂಗಳಿನಲ್ಲಿ ಸೂಪರ್ ಆ್ಯಪ್ ಸಿದ್ಧವಾಗಲಿದೆ.
ಅದಾನಿ ಗ್ರೂಪ್‌ನ ಸ್ಟಾರ್ಟಪ್ ಒಂದು ಈ ಸೂಪರ್ ಆ್ಯಪ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಇದನ್ನು ಡಿಜಿಟಲ್ ಜಗತ್ತಿನ ಫೆರಾರಿಯಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಅದಾನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅದಾನಿಯವರು ದೇಶದಲ್ಲಿ ಏಳು ವಿಮಾನ ನಿಲ್ದಾಣಗಳನ್ನು ನಡೆಸುತ್ತಿದ್ದಾರೆ. ಮುಂಬಯಿ ಏರ್ ಪೋರ್ಟ್‌ನಲ್ಲಿ ಹೊಸ ಟರ್ಮಿನಲ್ ಕಟ್ಟುತ್ತಿದ್ದಾರೆ. ಒಟ್ಟಾರೆಯಾಗಿ ದೇಶದ 20% ಏವಿಯೇಶನ್ ಟ್ರಾಫಿಕ್ ಅವರ ನಿಲ್ದಾಣಗಳ ಮೂಲಕ ಹಾದು ಹೋಗುತ್ತದೆ. ಶಾಪಿಂಗ್, ಪೇಮೆಂಟ್, ಮನರಂಜನೆ, ಸಾಮಾಜಿಕ ಜಾಲತಾಣ, ಹಣಕಾಸು ಎಲ್ಲವನ್ನೂ ಒಂದೇ ಆ್ಯಪ್ ಅಡಿಯಲ್ಲಿ ಕೊಡುವುದು ಚೀನಾದ ದಿಗ್ಗಜ ಕಂಪನಿಗಳ ಶೈಲಿ. ಆಲಿಬಾಬಾ ಗ್ರೂಪ್ ಹೋಲ್ಡಿಂಗ್ಸ್, ಟೆನ್ಸೆಂಟ್ ಹೋಲ್ಡಿಂಗ್ಸ್ ಅದೇ ರೀತಿ ಮಾಡುತ್ತವೆ. ಅದಾನಿಯವರೂ ಅಂಥದ್ದೇ ಆಲೋಚನೆಯಲ್ಲಿ ಇದ್ದಂತಿದೆ ಎಂದು ವರದಿಯಾಗಿದೆ.
ಗುಜರಾತ್‌ನಲ್ಲಿ ಪೆಟ್ರೊಕೆಮಿಕಲ್ ಘಟಕವೊಂದರ ನಿರ್ಮಾಣಕ್ಕೂ 4 ಶತಕೋಟಿ ಡಾಲರ್ (32,400 ಕೋಟಿ ರೂ.) ಹೂಡಿಕೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.