ನವ ದೆಹಲಿ: ಅದಾನಿ-ಹಿಂಡೆನ್‌ಬರ್ಗ್ ವಿವಾದಕ್ಕೆ ಸಂಬಂಧಿಸಿ ತನಿಖೆ ನಡೆಸಲು (Adani vs Hindenburg) ಸುಪ್ರೀಂಕೋರ್ಟ್ ಗುರುವಾರ ಆದೇಶಿಸಿದೆ. ನಿವೃತ್ತ ನ್ಯಾಯಾಧೀಶ ಎ.ಎಂ ಸಪ್ರೆ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ನೇಮಿಸಲಾಗಿದೆ. ಜತೆಗೆ ಈಗಿನ ವಿದ್ಯಮಾನಗಳ ಸ್ಥಿತಿಗತಿ ಬಗ್ಗೆ ಇನ್ನೆರಡು ತಿಂಗಳೊಳಗೆ ವರದಿ ನೀಡುವಂತೆ ಸೆಬಿಗೆ ತಿಳಿಸಿದೆ.
ತಜ್ಞರ ಸಮಿತಿಯಲ್ಲಿ ಒಪಿ ಭಟ್, ಜೆಪಿ ದೇವಧರ್, ಕೆವಿ ಕಾಮತ್, ನಂದನ್ ನಿಲೇಕಣಿ, ಸೋಮಶೇಖರ್ ಸುಂದರೇಶನ್ ಇದ್ದಾರೆ. ಅದಾನಿ-ಹಿಂಡೆನ್ ಬರ್ಗ್ ವಿವಾದಕ್ಕೆ ಕಾರಣ, ಹೂಡಿಕೆದಾರರ ಹಿತ ರಕ್ಷಣೆ, ಮಾರುಕಟ್ಟೆ ವೈಫಲ್ಯದ ಬಗ್ಗೆ ಸಮಿತಿ ತನಿಖೆ ನಡೆಸಲಿದೆ. ಅದಾನಿ ಕಂಪನಿಗಳು ಷೇರು ಮಾರುಕಟ್ಟೆಯ ನಿಯಮಗಳನ್ನು ಉಲ್ಲಂಘಿಸಿದೆಯೇ ಎಂಬುದರ ಬಗ್ಗೆ ತನಿಖೆಗೆ ಅರ್ಜಿದಾರರು ಒತ್ತಾಯಿಸಿದ್ದರು.
ಸಮಿತಿಯು ಅದಾನಿ ಗ್ರೂಪ್ ವಿರುದ್ಧ ಹಿಂಡೆನ್ ಬರ್ಗ್ ಮಾಡಿರುವ ಆರೋಪಗಳು, ಬಳಿಕ ಸಂಭವಿಸಿದ ಅದಾನಿ ಷೇರುಗಳ ಪತನದ ಹಿಂದಿನ ಕಾರಣಗಳ ಬಗ್ಗೆ ತನಿಖೆ ನಡೆಸಲಿದೆ. ಇಂಥ ಸಂದರ್ಭಗಳಲ್ಲಿ ಈಗಿನ ಕಾನೂನು ಚೌಕಟ್ಟಿನಡಿಯಲ್ಲಿ ಹೂಡಿಕೆದಾರರ ಹಿತರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ ನೀಡಲಿದೆ.
ಮುಖ್ಯ ನ್ಯಾಯಮೂರ್ತಿ ಧನಂಜಯ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿಎಸ್ ನರಸಿಂಹ ಮತ್ತು ಜೆಬಿ ಪರ್ದಿವಾಲಾ ಈ ಆದೇಶವನ್ನು ಹೊರಡಿಸಿತು. ಪ್ರಕರಣದ ನಾನಾ ಆಯಾಮಗಳ ಬಗ್ಗೆ ತನಿಖೆ ನಡೆಯಲಿದೆ. ಫೆಬ್ರವರಿ 17ರಂದು ಸಿಜೆಐ ನೇತೃತ್ವದ ಪೀಠವು ತನ್ನ ಆದೇಶವನ್ನು ಕಾಯ್ದಿರಿಸಿತ್ತು.
ಜನವರಿ 24ರಂದು ಹಿಂಡೆನ್‌ಬರ್ಗ್ ಅದಾನಿ ಗ್ರೂಪ್ ವಿರುದ್ಧ ವರದಿ ಪ್ರಕಟಿಸಿದ ಬಳಿಕ ಅದಾನಿ ಗ್ರೂಪ್‌ನ 10 ಕಂಪನಿಗಳ ಷೇರುಗಳ ಮಾರುಕಟ್ಟೆ ಮೌಲ್ಯದಲ್ಲಿ 12 ಲಕ್ಷ ಕೋಟಿ ರೂ. ನಷ್ಟವಾಗಿದೆ. ಅದಾನಿ ಸಮೂಹವು ಕೃತಕವಾಗಿ ಕಂಪನಿಗಳ ದರವನ್ನು ಏರಿಸಿದೆ. ನಕಲಿ ಕಂಪನಿಗಳನ್ನು ಸೃಷ್ಟಿಸಿ, ಭಾರತೀಯ ಷೇರು ಪೇಟೆಯಲ್ಲಿ ಗಳಿಸಿದ ನಿಧಿಯನ್ನು ವರ್ಗಾಯಿಸಿದೆ ಎಂದು ಆರೋಪಿಸಿದೆ. ಹಿಂಡೆನ್‌ಬರ್ಗ್ ಮಾಡಿರುವ ಎಲ್ಲ ಆರೋಪಗಳನ್ನು ಅದಾನಿ ಗ್ರೂಪ್ ನಿರಾಕರಿಸಿದೆ.
ಹಿಂಡೆನ್‌ಬರ್ಗ್ ಶಾರ್ಟ್ ಸೆಲ್ಲಿಂಗ್ ಮಾಡುತ್ತಿರುವುದನ್ನು ತನ್ನ ವರದಿಯಲ್ಲಿ ಒಪ್ಪಿಕೊಂಡಿತ್ತು. ಹೀಗಾಗಿ ಪ್ರಕರಣದ ಬಗ್ಗೆ ತನಿಖೆಗೆ ಒತ್ತಾಯವೂ ಉಂಟಾಗಿತ್ತು.