Site icon Vistara News

TickTok layoffs : ಬ್ಯಾನ್‌ ಆಗಿ 3 ವರ್ಷಗಳ ಬಳಿಕ ಭಾರತದಲ್ಲಿ ಎಲ್ಲ 40 ಸಿಬ್ಬಂದಿಯನ್ನು ವಜಾಗೊಳಿಸಿದ ಟಿಕ್‌ಟಾಕ್‌

tiktok

ನವ ದೆಹಲಿ: ಭಾರತದಲ್ಲಿ ಬ್ಯಾನ್‌ ಆಗಿ 3 ವರ್ಷಗಳ ಬಳಿಕ ಚೀನಾ ಮೂಲದ ಸಾಮಾಜಿಕ ಜಾಲತಾಣ ಆ್ಯಪ್ ಟಿಕ್‌ಟಾಕ್‌ ತನ್ನ ಎಲ್ಲ 40 ಸಿಬ್ಬಂದಿಯನ್ನು ವಜಾಗೊಳಿಸಿದೆ. ಟಿಕ್‌ಟಾಕ್‌ನ ಪ್ರವರ್ತಕ ಸಂಸ್ಥೆಯಾದ ಬೈಟೆಡ್ಯಾನ್ಸ್‌ ಈ ನಿರ್ಧಾರ ಕೈಗೊಂಡಿದೆ. ಟಿಕ್‌ಟಾಕ್‌ ಭಾರತದಲ್ಲಿ (TickTok layoffs) ಎರಡನೇ ಅತಿ ಹೆಚ್ಚು ಬಳಕೆದಾರರ ನೆಲೆಯನ್ನು ಹೊಂದಿತ್ತು. 2020ರಲ್ಲಿ ರಾಷ್ಟ್ರೀಯ ಭದ್ರತೆಯ ಕಾರಣಕ್ಕೋಸ್ಕರ ಟಿಕ್‌ಟಾಕ್‌ ದೇಶದಲ್ಲಿ ನಿಷೇಧವಾಗಿತ್ತು. ಹೀಗಿದ್ದರೂ ಭಾರತದಲ್ಲಿ ಕಚೇರಿಯೊಂದನ್ನು ಹೊಂದಿತ್ತು. ಭಾರತದಲ್ಲಿನ ಈ ಕಚೇರಿಯಲ್ಲಿದ್ದ ಉದ್ಯೋಗಿಗಳು ಬ್ರೆಜಿಲ್‌ ಮತ್ತು ದುಬೈ ಮಾರುಕಟ್ಟೆಗೆ ಕೆಲಸ ಮಾಡುತ್ತಿದ್ದರು. ಕಂಪನಿ ಇಲ್ಲಿಯವರೆಗೆ ಈ ಕಾರಣವನ್ನು ಕೊಟ್ಟು ಕಚೇರಿಯನ್ನು ಉಳಿಸಿಕೊಂಡಿತ್ತು. ಆದರೆ ಭಾರತೀಯ ಮಾರುಕಟ್ಟೆಗೆ ಮತ್ತೆ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ. ಅಮೆರಿಕದಕ್ಕಿ ಕೂಡ ಕಂಪನಿಯ ಭವಿಷ್ಯ ಅತಂತ್ರವಾಗಿದೆ.

ಇತ್ತೀಚಿನ ವರದಿಗಳ ಪ್ರಕಾರ ಟಿಕ್‌ಟಾಕ್‌ನ ಭಾರತೀಯ ಘಟಕದಲ್ಲಿ 40 ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಕಳೆದ ಸೋಮವಾರ ಇವರೆಲ್ಲರಿಗೂ ಪಿಂಕ್‌ ಸ್ಲಿಪ್‌ ನೀಡಲಾಗಿದೆ. ಜತೆಗೆ 90 ದಿನಗಳಿಗೆ ಪರಿಹಾರವನ್ನು ನೀಡುವುದಾಗಿ ಕಂಪನಿ ತಿಳಿಸಿದೆ. ಫೆ.28 ಕಚೇರಿ ಕೆಲಸದ ಕೊನೆಯ ದಿನ ಎಂದು ತಿಳಿಸಲಾಗಿತ್ತು. ಚೀನಿ ಆ್ಯಪ್ ಗಳ ಬಗ್ಗೆ ಸರ್ಕಾರದ ನಿಲುವು ಬದಲಾಗಿಲ್ಲವಾದ್ದರಿಂದ ಮುಂದುವರಿಯಲು ಸಾಧ್ಯವಾಗುತ್ತಿಲ್ಲ ಎಂದು ಟಿಕ್‌ಟಾಕ್‌ ತಿಳಿಸಿರುವುದಾಗಿ ವರದಿಯಾಗಿದೆ.

ಕಂಪನಿಯ ಸಮೀರ್‌ ಸಿಂಗ್‌ ಅವರನ್ನು ಉತ್ತರ ಅಮೆರಿಕದಲ್ಲಿ ಗ್ಲೋಬಲ್‌ ಬಿಸಿನೆಸ್‌ ಮುಖ್ಯಸ್ಥರಾಗಿ ನೇಮಿಸಲಾಗಿದೆ. 2019ರಲ್ಲಿ ಸಿಂಗ್‌ ಟಿಕ್‌ಟಾಕ್‌ಗೆ ಸೇರಿದ್ದರು. 15 ಸೆಕೆಂಡ್‌ಗಳ ವಿಡಿಯೊ ಪ್ಲಾಟ್‌ಫಾರ್ಮ್‌ ಭಾರತದಲ್ಲಿ ಆಂಡ್ರಾಯ್ಡ್‌ನಲ್ಲಿ ಹೆಚ್ಚು ಡೌನ್‌ಲೋಡ್‌ ಆಗಿರುವ ಆ್ಯಪ್ ಆಗಿತ್ತು. ಆದರೆ ಭಾರತೀಯರ ವೈಯಕ್ತಿಕ ಡೇಟಾವನ್ನು ಕಂಪನಿ ಸಂಗ್ರಹಿಸುತ್ತಿದ್ದುದರಿಂದ ನಿಷೇಧಿಸಲಾಗಿದೆ. ಗಲ್ವಾನ್‌ ಕಣಿವೆಯಲ್ಲಿ ಚೀನಾ ಸಂಘರ್ಷ ನಡೆಸಿದ ಬಳಿಕ ಪ್ರತಿಯಾಗಿ ಭಾರತ ಚೀನಾ ಮೂಲದ ಹಲವಾರು ಆ್ಯಪ್‌ಗಳನ್ನು ನಿಷೇಧಿಸಿತ್ತು. ಅದರಲ್ಲಿ ಟಿಕ್‌ಟಾಕ್‌ ಕೂಡ ಒಂದಾಗಿತ್ತು.

Exit mobile version