ಸ್ಯಾನ್ ಫ್ರಾನ್ಸಿಸ್ಕೊ: ಗೂಗಲ್ ಸೇರಿದಂತೆ ದಿಗ್ಗಜ ತಂತ್ರಜ್ಞಾನ ಕಂಪನಿಗಳಲ್ಲಿ ಸಾಮೂಹಿಕ ಉದ್ಯೋಗ ಕಡಿತದ ಬಳಿಕ ಇದೀಗ ಮಾಧ್ಯಮ ಮತ್ತು ಮನರಂಜನೆ ಕ್ಷೇತ್ರದಲ್ಲಿ (Mass layoff) ಕೂಡ ಜಾಗತಿಕ ಮಟ್ಟದಲ್ಲಿ ಭಾರಿ ಉದ್ಯೋಗ ಕಡಿತ ಆರಂಭವಾಗಿದೆ.
ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯಲ್ಲಿ ಕಂಪನಿಗಳು ಖರ್ಚು ವೆಚ್ಚಗಳನ್ನು ನಿಯಂತ್ರಿಸಲು ಉದ್ದೇಶಿಸಿದ್ದು, ಅದರ ಭಾಗವಾಗಿ ಉದ್ಯೋಗ ಕಡಿತ ಮಾಡುತ್ತಿವೆ. ಅಮೆರಿಕದ ಮಾಧ್ಯಮ ಸಂಸ್ಥೆ ಎಕ್ಸೋಯಿಸ್ ಪ್ರಕಾರ ಅಕ್ಟೋಬರ್ ತನಕ ಮಾಧ್ಯಮ ಕ್ಷೇತ್ರದಲ್ಲಿ 3,000 ಉದ್ಯೋಗ ನಷ್ಟವಾಗಿದೆ.
ಅಮೆರಿಕ ಮೂಲದ ಮಾಧ್ಯಮ ಮತ್ತು ಮನರಂಜನಾ ಸಂಸ್ಥೆ ವಾರ್ನರ್ ಬ್ರೋಸ್ ಡಿಸ್ಕವರಿಯಲ್ಲಿ ಉದ್ಯೋಗ ಕಡಿತ ಮುಂದುವರಿದಿದೆ. ಸಿಎನ್‌ಎನ್ ವಾಹಿನಿಯ ಮುಖ್ಯಸ್ಥ ಕ್ರಿಸ್ ಲಿಚ್ಟ್ ಅವರು ಕಳೆದ ವಾರ ಉದ್ಯೋಗಿಗಳಿಗೆ ನೀಡಿದ ಸಂದೇಶದಲ್ಲಿ, ಮುಂದಿನ ತಿಂಗಳಿನಿಂದ ಉದ್ಯೋಗ ಕಡಿತ ನಡೆಯಲಿದೆ ಎಂದು ತಿಳಿಸಿದ್ದಾರೆ.
ಪ್ಯಾರಾಮೌಂಟ್ ಗ್ಲೋಬಲ್‌ನಿಂದ ವಾಲ್ಟ್ ಡಿಸ್ನಿ ಕಂಪನಿ ತನಕ ಮಾಧ್ಯಮ ಮತ್ತು ಮನರಂಜನೆ ವಲಯದ ಕಂಪನಿಗಳು ಉದ್ಯೋಗ ಕಡಿತವನ್ನು ಪ್ರಕಟಿಸಿವೆ. ವೇತನ ಕಡಿತವನ್ನು ಕೈಗೊಂಡಿವೆ. ತಂತ್ರಜ್ಞಾನ ಇಂಡಸ್ಟ್ರಿಯಲ್ಲಿ ನವೆಂಬರ್ ಮಧ್ಯ ಭಾಗದ ತನಕ 73,000 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.