ಹೊಸದಿಲ್ಲಿ: ಬೆಲೆ ಏರಿಕೆಯನ್ನು ನಿಯಂತ್ರಿಸುವ ಸಲುವಾಗಿ ಗೋಧಿಯ ರಫ್ತಿಗೆ ಇತ್ತೀಚೆಗೆ ನಿರ್ಬಂಧಗಳನ್ನು ವಿಧಿಸಿದ್ದ ಕೇಂದ್ರ ಸರಕಾರ ಇದೀಗ ಸಕ್ಕರೆಯ ರಫ್ತಿಗೂ ಮಿತಿಯನ್ನು ವಿಧಿಸಲು ಉದ್ದೇಶಿಸಿದೆ.
ಕಳೆದ 6 ವರ್ಷಗಳಲ್ಲಿ ಮೊದಲ ಬಾರಿಗೆ ಸಕ್ಕರೆಯ ರಫ್ತಿಗೆ ಮಿತಿ ವಿಧಿಸಲು ಭಾರತ ಪರಿಶೀಲನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಭಾರತ ವಿಶ್ವದ ಅತಿ ದೊಡ್ಡ ಸಕ್ಕರೆ ಉತ್ಪಾದಕ ಹಾಗೂ ಎರಡನೇ ಅತಿ ದೊಡ್ಡ ರಫ್ತುದಾರ ರಾಷ್ಟ್ರವಾಗಿದೆ. ಈ ಸುದ್ದಿ ಹಿನ್ನೆಲೆಯಲ್ಲಿ ಸಕ್ಕರೆ ವಲಯದ ಷೇರುಗಳು ದಲಾಲ್ ಸ್ಟ್ರೀಟ್‌ನಲ್ಲಿ ಶೇ.5ರಷ್ಟು ದರ ಇಳಿಕೆ ದಾಖಲಿಸಿವೆ.
ಉಕ್ರೇನ್ ವಿರುದ್ಧ ರಷ್ಯಾ ಸಂಘರ್ಷ ತಾರಕಕ್ಕೇರಿದ ಬಳಿಕ ಜಗತ್ತಿನಾದ್ಯಂತ ಆಹಾರ ವಸ್ತುಗಳ ದರ ಏರಿಕೆಯಾಗಿದೆ. ಸರಕಾರಗಳು ದೇಶಿ ಮಾರುಕಟ್ಟೆಗಳಲ್ಲಿ ಆಹಾರ ವಸ್ತುಗಳ ಲಭ್ಯತೆ ಮತ್ತು ಪೂರೈಕೆಗೆ ಕೊರತೆಯಾಗದಂತೆ ನೋಡಿಕೊಳ್ಳುತ್ತಿವೆ. ಅದರ ಅನಿವಾರ್ಯತೆಯೂ ಉಂಟಾಗಿದೆ. ಮಲೇಷ್ಯಾ ಜೂನ್ 1ರಿಂದ ಕೋಳಿ ಮಾಂಸದ ರಫ್ತಿಗೆ ನಿರ್ಬಂಧ ವಿಧಿಸಿದೆ. ಇಂಡೊನೇಷ್ಯಾ ಇತ್ತೀಚೆಗೆ ತಾಳೆ ಎಣ್ಣೆ ರಫ್ತಿಗೆ ನಿಷೇಧ ವಿಧಿಸಿತ್ತು. ಸರ್ಬಿಯಾ, ಕಝಕಿಸ್ತಾನ ಇತ್ಯಾದಿ ರಾಷ್ಟ್ರಗಳು ಆಹಾರ ಧಾನ್ಯ ರಫ್ತಿಗೆ ನಿರ್ಬಂಧ ವಿಧಿಸಿವೆ.
ಭಾರತದಲ್ಲಿ ಮಾರ್ಚ್ ಅಂತ್ಯದ ವೇಳೆಗೆ ಬಿಸಿಗಾಳಿಗೆ ಗೋಧಿ ಬೆಳೆ ಹಾನಿಯಾಗಿತ್ತು. ಆದ್ದರಿಂದ ಭಾರತ ಭಾಗಶಃ ರಫ್ತು ನಿಷೇಧ ಜಾರಿಗೊಳಿಸಿತ್ತು. ಇಂಡೊನೇಷ್ಯಾ ಏ.28ರಂದು ತಾಳೆ ಎಣ್ಣೆ ರಫ್ತು ನಿಷೇಧವನ್ನು ತೆರವುಗೊಳಿಸಿತ್ತು. ಈ ನಡುವೆ ರಫ್ತಿಗೆ ನಿರ್ಬಂಧ ವಿಧಿಸಿರುವುದರಿಂದ ಗೋಧಿ ಬೆಳೆಗಾರರು ಅಸಮಾಧಾನಗೊಂಡಿದ್ದಾರೆ. ದೇಶಿ ಮಾರುಕಟ್ಟೆಯಲ್ಲಿ ಗೋಧಿಯ ದರ ಕುಸಿದಿರುವುದು ಇದಕ್ಕೆ ಕಾರಣ. ರಫ್ತು ಮೂಲಕ ಹೆಚ್ಚು ಆದಾಯ ಗಳಿಸುವ ದಾರಿ ಇದೀಗ ಕೈತಪ್ಪಿದೆ ಎಂಬುದು ಬೆಳೆಗಾರರ ವಾದ. ಆದರೆ ಆಹಾರ ಭದ್ರತೆ ಮತ್ತು ಬೆಲೆ ಏರಿಕೆ ನಿಯಂತ್ರಣಕ್ಕೆ ರಫ್ತು ಮೇಲೆ ಮಿತಿ ಅಗತ್ಯ ಎನ್ನುವುದು ಸರಕಾರದ ನಿಲುವು.
ಮತ್ತೊಂದು ಸುತ್ತಿನ ಸುಂಕ ಕಡಿತ
ಹಣದುಬ್ಬರವನ್ನು ನಿಯಂತ್ರಿಸುವ ಸಲುವಾಗಿ ಸರಕಾರ ಮತ್ತೊಂದು ಸತ್ತಿನಲ್ಲಿ ಆಮದು ಸುಂಕ ಕಡಿತವನ್ನು ಘೋಷಿಸುವ ನಿರೀಕ್ಷೆ ಇದೆ. ಕಳೆದ ವಾರ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿತ್ತು. ಇದೀಗ ಮತ್ತೊಂದು ಸುತ್ತಿನಲ್ಲಿ ಖಾದ್ಯ ತೈಲಗಳು ಮತ್ತು ಕೈಗಾರಿಕೆಗೆ ಅವಶ್ಯವಿರುವ ಕಚ್ಚಾ ವಸ್ತುಗಳ ಮೇಲಿನ ಆಮದು ಸುಂಕವನ್ನು ಕಡಿತಗೊಳಿಸುವ ಸಾಧ್ಯತೆ ಇದೆ. ಹಣಕಾಸು ಸಚಿವಾಲದ ಅಧಿಕಾರಿಗಳು ಪ್ರಧಾನಿಯವರ ಕಚೇರಿ ಜತೆಗೆ ಕಳೆದ ವಶರ ಬೆಲೆ ಏರಿಕೆ ನಿಯಂತ್ರಿಸುವ ಬಗ್ಗೆ ಚರ್ಚೆ ನಡೆಸಿದ್ದರು. ರಿಟೇಲ್ ಹಣದುಬ್ಬರ ಕಳೆದ ಏಪ್ರಿಲ್‌ನಲ್ಲಿ ಶೇ.7.79ಕ್ಕೆ ಏರಿದ್ದು, ಕಳೆದ 8 ವರ್ಷಗಳಲ್ಲಿಯೇ ಗರಿಷ್ಠ ಪ್ರಮಾಣವಾಗಿದೆ.
ಇದನ್ನೂ ಓದಿ: Wheat export ban: ಭಾರತದಿಂದ ಗೋಧಿ ರಫ್ತಿಗೆ ನಿಷೇಧ