ವಾಷಿಂಗ್ಟನ್: ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಅವರು ಗಗನಸಖಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದಾರೆ. ಮಾತ್ರವಲ್ಲದೆ ಪ್ರಕರಣದ ಬಗ್ಗೆ ಸುಮ್ಮನಿರಲು 2.50 ಲಕ್ಷ ಡಾಲರ್ (ಅಂದಾಜು 1.92 ಕೋಟಿ ರೂ.) ಹಣವನ್ನು ಮಸ್ಕ್ ಅವರ ಸ್ಪೇಸ್ ಎಕ್ಸ್ ಕಂಪನಿ ನೀಡಿದೆ ಎಂದೂ ವರದಿಯಾಗಿದೆ.
ಎಲಾನ್ ಮಸ್ಕ್ ಅವರು 2016ರಲ್ಲಿ ವಿಮಾನ ಪ್ರಯಾಣ ಮಾಡುತ್ತಿದ್ದ ಸಂದರ್ಭದಲ್ಲಿ ಗಗನಸಖಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದಾರೆ. 2018ರಲ್ಲಿ ಗಗನಸಖಿಗೆ ಹಣ ನೀಡಲಾಯಿತು. ಸ್ಪೇಸ್ ಎಕ್ಸ್‌ಗೆ ಗುತ್ತಿಗೆ ಆಧಾರದಲ್ಲಿ ನೀಡಿದ್ದ ಜೆಟ್ ವಿಮಾನದಲ್ಲಿ ಪ್ರಕರಣ ನಡೆದಿದೆ.
ಜೆಟ್ ವಿಮಾನದಲ್ಲಿ ತಮ್ಮ ಖಾಸಗಿ ಕೊಠಡಿಯಲ್ಲಿ ಮಸ್ಕ್ ಅವರು ಗಗನಸಖಿಯ ಜತೆಗೆ ಅನುಚಿತವಾಗಿ ವರ್ತಿಸಿದ್ದರು. ಸಂಪೂರ್ಣ ಬಾಡಿ ಮಸಾಜ್ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ್ದರು. ಹಾಗೂ ಇದಕ್ಕೆ ಪ್ರತಿಯಾಗಿ ಕುದುರೆಯನ್ನು ಕೊಡುವುದಾಗಿ ಆಮಿಷ ಒಡ್ಡಿದ್ದರು ಎಂದು ವರದಿಯಾಗಿದೆ.
ಸಾಮಾಜಿಕ ಜಾಲತಾಣ ದಿಗ್ಗಜ ಟ್ವಿಟರ್ ಅನ್ನು 44 ಶತಕೋಟಿ ಡಾಲರ್‌ಗೆ (3.38 ಲಕ್ಷ ಕೋಟಿ ರೂ.) ಮೆಗಾ ಡೀಲ್‌ನಲ್ಲಿ ಖರೀದಿಸಲು ಮುಂದಾಗಿ, ಬಳಿಕ ವ್ಯವಹಾರವನ್ನು ತಡೆದು ವಿವಾದಕ್ಕೆ ಸಿಲುಕಿರುವ ಮಸ್ಕ್, ಇದೀಗ ಮತ್ತೊಂದು ವಿವಾದಕ್ಕೆ ಸಿಲುಕಿದಂತಾಗಿದೆ.
ಆದರೆ ಲೈಂಗಿಕ ಕಿರುಕುಳ ಆರೋಪಗಳನ್ನು ಎಲಾನ್ ಮಸ್ಕ್ ಅಲ್ಲಗಳೆದಿದ್ದಾರೆ. ಇದರ ಹಿಂದೆ ರಾಜಕೀಯ ಪಿತೂರಿ ಇದೆ. ಆದರೆ ವಾಕ್ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಹೋರಾಟವನ್ನು ಮುಂದುವರಿಸುವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Twitter ಖರೀದಿಸುವ ಮೆಗಾ ಡೀಲ್‌ಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕಿದ ಎಲನ್ ಮಸ್ಕ್!