ನವ ದೆಹಲಿ: ಟಾಟಾ ಸಮೂಹದ ಒಡೆತನದಲ್ಲಿರುವ ಏರ್ ಇಂಡಿಯಾ 1,000 ಪೈಲಟ್‌ಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ. (Air India) ಕ್ಯಾಪ್ಟನ್, ಟ್ರೈನರ್‌ಗಳನ್ನೂ ನೇಮಿಸಲಿದೆ. ಏರ್‌ಲೈನ್ ಪ್ರಸ್ತುತ 1,800 ಪೈಲಟ್‌ಗಳನ್ನು ಹೊಂದಿದೆ. ಏರ್‌ಲೈನ್ ತನ್ನ ವಿಮಾನಗಳ ನೆಟ್ ವರ್ಕ್ ಅನ್ನು ವಿಸ್ತರಿಸುತ್ತಿದೆ. ಬೋಯಿಂಗ್ ಮತ್ತು ಏರ್‌ಬಸ್‌ನಿಂದ 470 ವಿಮಾನಗಳನ್ನು ಖರೀದಿಸಲು ಆರ್ಡರ್ ಕೊಟ್ಟಿದೆ.
ಏರ್ ಇಂಡಿಯಾ ಹೊಸ ನೇಮಕಾತಿಗೆ ಸಂಬಂಧಿಸಿ ಗುರುವಾರ ಜಾಹೀರಾತು ಪ್ರಕಟಿಸಿದೆ. ತನ್ನ ಎ320, ಬಿ777, ಬಿ787 ಮತ್ತು ಬಿ737 ವಿಮಾನಗಳ ವಿಭಾಗಕ್ಕೆ ಪೈಲಟ್ ಮತ್ತು ಇತರ ಸಿಬ್ಬಂದಿಯನ್ನು ನೇಮಿಸಲಿದೆ. ಇತ್ತೀಚಿನ ಏರ್‌ಬಸ್ ಆರ್ಡರ್‌ನಲ್ಲಿ 210 ಎ320/321 ನಿಯೊ/ಎಕ್ಸ್‌ಎಲ್‌ಆರ್ ಮತ್ತು 40 ಎ350-900/100 ವಿಮಾನಗಳು ಇವೆ. ಬೋಯಿಂಗ್‌ಗೆ ನೀಡಿರುವ ಆರ್ಡರ್‌ನಲ್ಲಿ 190 737-ಮ್ಯಾಕ್ಸ್ ಸೇರಿದೆ. ಏರ್ ಇಂಡಿಯಾ ಇತ್ತೀಚೆಗೆ ಪೈಲಟ್‌ಗಳ ವೇತನ ಪರಿಷ್ಕರಿಸಿತ್ತು. ಆದರೆ ಇದರ ಬಗ್ಗೆ ಸಿಬ್ಬಂದಿಯ ಅಸಮಾಧಾನದ ನಡುವೆ ಹೊಸ ಪೈಲಟ್‌ಗಳ ನೇಮಕ ಮಾಡಲು ನಿರ್ಧರಿಸಿದೆ.
ಏರ್ ಇಂಡಿಯಾ, (Air India) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಬ್ಯಾಂಕ್ ಆಫ್ ಬರೋಡಾದಿಂದ 14,000 ಕೋಟಿ ರೂ. ಸಾಲವನ್ನು ಗಳಿಸಿದೆ. ಇದರಲ್ಲಿ ಹೊಸ ಸಾಲ ಹಾಗೂ ಹಾಲಿ ಸಾಲದ ಪುನಾರಚನೆ ಸೇರಿದೆ. ಸಾಲ ಪುನಾರಚನೆಯ ಭಾಗವಾಗಿ 12,500 ಕೋಟಿ ರೂ. ಹಾಗೂ ತುರ್ತು ಸಾಲದ ರೂಪದಲ್ಲಿ 1,500 ಕೋಟಿ ರೂ. ಸಿಗಲಿದೆ ಎಂದು ವರದಿಯಾಗಿದೆ.
ಈ ಸಾಲದಿಂದ ಏರ್ ಇಂಡಿಯಾಗೆ ಹೊಸ ಹಾಗೂ ಲೀಸ್‌ಗೆ ವಿಮಾನಗಳನ್ನು ಪಡೆದು ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮುಂದಿನ ಹಂತದ ವಿಸ್ತರಣೆಗೆ ನೆರವಾಗಲಿದೆ. ಏರ್ ಇಂಡಿಯಾ ಈಗಾಗಲೇ ತನ್ನ ಸಿಬ್ಬಂದಿಗೆ ಸ್ವಯಂ ನಿವೃತ್ತಿ ಯೋಜನೆಯನ್ನು (VRS) ಘೋಷಿಸಿದ್ದು, ಇದಕ್ಕೆ 200 ಕೋಟಿ ರೂ. ವೆಚ್ಚವಾಗುವ ನಿರೀಕ್ಷೆ ಇದೆ.
ಏರ್‌ಲೈನ್ ಈಗ (2021-22ರಲ್ಲಿ) ಒಟ್ಟು 15,317 ಕೋಟಿ ರೂ. ಸಾಲವನ್ನು ಒಳಗೊಂಡಿದೆ. 2020-21ರಲ್ಲಿ ಒಟ್ಟು 45,037 ಕೋಟಿ ರೂ. ಸಾಲವನ್ನು ಹೊಂದಿತ್ತು. 2022ರ ಜನವರಿಯಲ್ಲಿ ಟಾಟಾ ಗ್ರೂಪ್, ಏರ್ ಇಂಡಿಯಾದ ನಿಯಂತ್ರಣವನ್ನು ಗಳಿಸಿತ್ತು.