ಮುಂಬಯಿ: ಟಾಟಾ ಸಮೂಹದ ಭಾಗವಾಗಿರುವ ಏರ್ ಇಂಡಿಯಾ (Air India) ತನ್ನ ಪೈಲಟ್ ಮತ್ತು ಸಿಬ್ಬಂದಿಯ ವೇತನವನ್ನು ಪರಿಷ್ಕರಿಸಿದೆ. ಈ ಪರಿಷ್ಕರಣೆಯ ಬಳಿಕ ಟ್ರೈನಿ ಪೈಲಟ್ ಕನಿಷ್ಠ ವೇತನ ಮಾಸಿಕ 50,000 ರೂ.ಗಳಾಗಿದೆ. ಹಿರಿಯ ಪೈಲಟ್ ವೇತನ ಮಾಸಿಕ 8.50 ಲಕ್ಷ ರೂ.ಗೆ ವೃದ್ಧಿಸಿದೆ.
ಹೊಸ ಕ್ಯಾಬಿನ್ ಸಿಬ್ಬಂದಿ ಮಾಸಿಕ 25,000 ರೂ. ವೇತನ ಪಡೆಯಲಿದ್ದಾರೆ. ಕ್ಯಾಬಿನ್ ಎಕ್ಸಿಕ್ಯುಟಿವ್ ಮಾಸಿಕ 78,000 ರೂ. ವೇತನ ಪಡೆಯಲಿದ್ದಾರೆ. ಏರ್ ಇಂಡಿಯಾ, ಏರ್ ಏಷ್ಯಾ, ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಕನಿಷ್ಠ 2,700 ಪೈಲಟ್‌ಗಳು ಹಾಗೂ ಏರ್ ಇಂಡಿಯಾದ 5600 ಸಿಬ್ಬಂದಿಗೆ ಅನುಕೂಲ ಆಗಲಿದೆ. ಏಪ್ರಿಲ್ 1ರಿಂದ ಪರಿಷ್ಕೃತ ವೇತನ ಅನ್ವಯವಾಗಲಿದೆ.
ಕಿರಿಯ ಪೈಲಟ್ ಮಾಸಿಕ 50,000 ರೂ, ಜ್ಯೂನಿಯರ್ ಫಸ್ಟ್ ಆಫೀಸರ್ ಮಾಸಿಕ 2.35 ಲಕ್ಷ ರೂ, ಫಸ್ಟ್ ಆಫೀಸರ್ ಮಾಸಿಕ 3.45 ಲಕ್ಷ ರೂ, ಕ್ಯಾಪ್ಟನ್ ಮಾಸಿಕ 4.75 ಲಕ್ಷ ರೂ. ವೇತನ ಪಡೆಯಲಿದ್ದಾರೆ. ಏರ್ ಕ್ರಾಫ್ಟ್ ಮಾದರಿಯನ್ನು ಅನುಸರಿಸಿ ಮಾಸಿಕ 8.50 ಲಕ್ಷ ರೂ. ತನಕ ಹಿರಿಯ ಪೈಲಟ್ ವೇತನ ಏರಿಕೆಯಾಗಲಿದೆ. ಪೈಲಟ್‌ಗಳಿಗೆ ಅವರ ಹಿರಿತನ ಆಧರಿಸಿ 1,500 ರೂ.ಗಳಿಂದ 9,230 ರೂ. ತನಕ ಭತ್ಯೆಯೂ ಸಿಗಲಿದೆ.
ಟಾಟಾ ಸಮೂಹದ ಮಾಲಿಕತ್ವದ ಏರ್ ಇಂಡಿಯಾ, (Air India) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಬ್ಯಾಂಕ್ ಆಫ್ ಬರೋಡಾದಿಂದ 14,000 ಕೋಟಿ ರೂ. ಸಾಲವನ್ನು ಗಳಿಸಿದೆ. ಇದರಲ್ಲಿ ಹೊಸ ಸಾಲ ಹಾಗೂ ಹಾಲಿ ಸಾಲದ ಪುನಾರಚನೆ ಸೇರಿದೆ. ಸಾಲ ಪುನಾರಚನೆಯ ಭಾಗವಾಗಿ 12,500 ಕೋಟಿ ರೂ. ಹಾಗೂ ತುರ್ತು ಸಾಲದ ರೂಪದಲ್ಲಿ 1,500 ಕೋಟಿ ರೂ. ಸಿಗಲಿದೆ ಎಂದು ವರದಿಯಾಗಿದೆ.
ಈ ಸಾಲದಿಂದ ಏರ್ ಇಂಡಿಯಾಗೆ ಹೊಸ ಹಾಗೂ ಲೀಸ್‌ಗೆ ವಿಮಾನಗಳನ್ನು ಪಡೆದು ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮುಂದಿನ ಹಂತದ ವಿಸ್ತರಣೆಗೆ ನೆರವಾಗಲಿದೆ. ಏರ್ ಇಂಡಿಯಾ ಈಗಾಗಲೇ ತನ್ನ ಸಿಬ್ಬಂದಿಗೆ ಸ್ವಯಂ ನಿವೃತ್ತಿ ಯೋಜನೆಯನ್ನು (VRS) ಘೋಷಿಸಿದ್ದು, ಇದಕ್ಕೆ 200 ಕೋಟಿ ರೂ. ವೆಚ್ಚವಾಗುವ ನಿರೀಕ್ಷೆ ಇದೆ.
ಏರ್‌ಲೈನ್ ಈಗ (2021-22ರಲ್ಲಿ) ಒಟ್ಟು 15,317 ಕೋಟಿ ರೂ. ಸಾಲವನ್ನು ಒಳಗೊಂಡಿದೆ. 2020-21ರಲ್ಲಿ ಒಟ್ಟು 45,037 ಕೋಟಿ ರೂ. ಸಾಲವನ್ನು ಹೊಂದಿತ್ತು. 2022ರ ಜನವರಿಯಲ್ಲಿ ಟಾಟಾ ಗ್ರೂಪ್, ಏರ್ ಇಂಡಿಯಾದ ನಿಯಂತ್ರಣವನ್ನು ಗಳಿಸಿತ್ತು.
ಹೊಸ ಪೈಲಟ್, ಸಿಬ್ಬಂದಿ ನೇಮಕ: ಟಾಟಾ ಸಮೂಹದ ಏರ್ ಇಂಡಿಯಾ 900 ಪೈಲಟ್‌ಗಳು ಹಾಗೂ 4,200 ಸಿಬ್ಬಂದಿಯನ್ನು ಶೀಘ್ರದಲ್ಲಿಯೇ ನೇಮಕ ಮಾಡಲಿದೆ. (Air India hiring) ಹೀಗಾಗಿ ಒಟ್ಟು 5,100 ಮಂದಿಗೆ ಏರ್‌ಲೈನ್‌ನಲ್ಲಿ ಉದ್ಯೋಗಾವಕಾಶ ಸಿಗಲಿದೆ. ದೇಶದ ನಾನಾ ಸ್ಥಳಗಳಲ್ಲಿ ನೇಮಕಾತಿ ನಡೆಯಲಿದೆ. ಬಳಿಕ 15 ದಿನಗಳ ತರಬೇತಿ ನೀಡಲಾಗುವುದು. 2022ರ ಮೇ ಮತ್ತು 2023ರ ಫೆಬ್ರವರಿ ನಡುವೆ ಏರ್ ಇಂಡಿಯಾ 1900 ಕ್ಯಾಬಿನ್ ಸಿಬ್ಬಂದಿಯನ್ನು ನೇಮಿಸಿತ್ತು.
ಏರ್ ಇಂಡಿಯಾ ಮುಂದಿನ 10 ವರ್ಷಗಳಲ್ಲಿ 470 ವಿಮಾನಗಳನ್ನು ಖರೀದಿಸಲು ಏರ್‌ಬಸ್ ಮತ್ತು ಬೋಯಿಂಗ್ ಜತೆ ಇತ್ತೀಚೆಗೆ ಒಪ್ಪಂದ ಮಾಡಿಕೊಂಡಿದೆ. ಈ ವಿಮಾನ ಖರೀದಿ 840ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಏರ್‌ಬಸ್ ಫ್ರಾನ್ಸ್ ಮೂಲದ ಏರ್‌ಲೈನ್ ಆಗಿದ್ದರೆ, ಬೋಯಿಂಗ್ ಅಮೆರಿಕ ಮೂಲದ ಏರ್‌ಲೈನ್ ಕಂಪನಿಯಾಗಿದೆ. ಏರ್ ಇಂಡಿಯಾವು ಏರ್‌ಬಸ್‌ನಿಂದ ಕಳೆದ 17 ವರ್ಷಗಳ ಬಳಿಕ ಮೊದಲ ಸಲ ವಿಮಾನವನ್ನು ಖರೀದಿಸುತ್ತಿದೆ. ಈ ಡೀಲ್ ಪರಿಣಾಮ ಅಮೆರಿಕದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಭಾರತಕ್ಕೆ ಮುಂದಿನ 15 ವರ್ಷಗಳಲ್ಲಿ 2,000 ವಿಮಾನಗಳ ಅಗತ್ಯವಿದೆ. ಏರ್ ಇಂಡಿಯಾದ ಐತಿಹಾಸಿಕ ವಿಮಾನಗಳ ಖರೀದಿ ಡೀಲ್‌ನ ಮೌಲ್ಯ 115 ಶತಕೋಟಿ ಡಾಲರ್ ( 9.43 ಲಕ್ಷ ಕೋಟಿ ರೂ.) ಹೀಗಾಗಿ ಭಾರತದಲ್ಲೂ ಮುಂದಿನ ದಶಕದಲ್ಲಿ ಏರ್ ಇಂಡಿಯಾ ಒಂದರಲ್ಲಿಯೇ ಸಾವಿರಾರು ಉದ್ಯೋಗ ಸೃಷ್ಟಿಯಾಗಲಿದೆ.