ಮುಂಬಯಿ: ಟಾಟಾ ಸಮೂಹದ ಏರ್ ಇಂಡಿಯಾವು ಏರ್ ಏಷ್ಯಾ ಇಂಡಿಯಾದಲ್ಲಿನ (Air Asia) ೧೦೦% ಷೇರುಗಳನ್ನು ಖರೀದಿಸಲು ಮುಂದಾಗಿದೆ. ಏರ್ ಏಷ್ಯಾ ಇಂಡಿಯಾದ ೨,೦೦೦ ಕೋಟಿ ರೂ. ನಷ್ಟವನ್ನು ರೈಟ್ ಆಫ್ ಮಾಡಲು ಕೂಡ ನಿರ್ಧರಿಸುವ ಸಾಧ್ಯತೆ ಇದೆ. ಕೊನೆಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಜತೆ ವಿಲೀನ ಮಾಡುವ ನಿರೀಕ್ಷೆ ಇದೆ.
ಏರ್ ಏಷ್ಯಾ ಇಂಡಿಯಾ ಭಾರಿ ನಷ್ಟದಲ್ಲಿದ್ದು, ಇದರ ನಿವ್ವಳ ಸಂಪತ್ತಿಗಿಂತ ಸಾಲದ ಭಾರವೇ ಹೆಚ್ಚಾಗಿದೆ. ಪ್ರಸ್ತುತ ಟಾಟಾ ಸನ್ಸ್ ಇದರಲ್ಲಿ ೮೩.೬೭% ಷೇರುಗಳನ್ನು ಹೊಂದಿದೆ. ಮಲೇಷ್ಯಾದ ಏರ್ ಏಷ್ಯಾ ಗ್ರೂಪ್ ೧೬.೩೩ % ಷೇರುಗಳನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಏರ್ ಇಂಡಿಯಾವು ಏರ್ ಏಷ್ಯಾ ಇಂಡಿಯಾದ ೧೦೦% ಷೇರುಗಳನ್ನು ಖರೀದಿಸಲು ಸ್ಪರ್ಧಾತ್ಮಕ ಆಯೋಗದ (ಸಿಸಿಎ) ಅನುಮತಿ ಕೋರಿದೆ.
ಏರ್ ಇಂಡಿಯಾ ಎಕ್ಸ್‌ಪ್ರೆಸ್ ಬೋಯಿಂಗ್ ೭೩೭ ವಿಮಾನವನ್ನು ಹೊಂದಿದೆ. ಏರ್ ಏಷ್ಯಾ ಇಂಡಿಯಾ ಏರ್‌ಬಸ್ ೩೨೦ ಅನ್ನು ಒಳಗೊಂಡಿದೆ.