Site icon Vistara News

Aircraft Industry | ವಿಮಾನಗಳ ಉತ್ಪಾದನೆಗೆ ಭಾರತದ ಸಿದ್ಧತೆ, ಏರ್‌ಪೋರ್ಟ್‌ ಬಳಿ ಸ್ಥಳ ಪರಿಶೀಲನೆ

aircraft

ನವ ದೆಹಲಿ: ಭಾರತ ಶೀಘ್ರದಲ್ಲಿಯೇ ವಿಮಾನಗಳನ್ನು ಉತ್ಪಾದಿಸಲು ಸಜ್ಜಾಗುತ್ತಿದೆ. ಏರ್‌ ಪೋರ್ಟ್‌ಗಳ ಬಳಿ ಪ್ಯಾಸೆಂಜರ್‌ ಏರ್‌ಕ್ರಾಫ್ಟ್‌ ಅಸೆಂಬ್ಲಿ ಲೈನ್‌ಗಳನ್ನು ನಿರ್ಮಿಸಲು (Aircraft Industry) ಸ್ಥಳ ಪರಿಶೀಲನೆ ನಡೆಸುತ್ತಿದೆ.

ವಿಮಾನಗಳ ನಿರ್ಮಾಣಕ್ಕೆ ಭಾರಿ ಸ್ಥಳಾವಕಾಶ ಹಾಗೂ ಮೂಲಭೂತ ಸೌಕರ್ಯಗಳು ಅನಿವಾರ್ಯವಾಗುತ್ತದೆ. ಅಸೆಂಬ್ಲಿ ಲೈನ್ಸ್‌, ಏರ್‌ ಕ್ರಾಫ್ಟ್‌ ಬಿಡಿಭಾಗಗಳು, ಸ್ಟೋರೇಜ್‌ಗಳ ನಿರ್ಮಾಣಕ್ಕೆ ಭಾರಿ ಸ್ಥಳಾವಕಾಶಗಳು ಬೇಕಾಗುತ್ತದೆ. ನಾನಾ ಏರ್‌ಪೋರ್ಟ್‌ಗಳ ಸುತ್ತಮುತ್ತಲಿನ ಸ್ಥಳಗಳ ಪರಿಶೀಲನೆಯನ್ನು ಕೇಂದ್ರ ಸರ್ಕಾರ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಗುಜರಾತ್‌ನ ವಡೋದರಾದಲ್ಲಿ ಸಿ-295 ಟ್ರಾನ್ಸ್‌ಪೋರ್ಟ್‌ ಏರ್‌ ಕ್ರಾಫ್ಟ್‌ ಉತ್ಪಾದನಾ ಘಟಕಕ್ಕೆ ಅಕ್ಟೋಬರ್‌ 30ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶಿಲಾನ್ಯಾಸ ನೆರವೇರಿಸಿದ್ದರು. ಖಾಸಗಿ ವಲಯದ ಮೊದಲ ಏರ್‌ ಕ್ರಾಫ್ಟ್‌ ಉತ್ಪಾದನಾ ಘಟಕ ಇದಾಗಿದೆ. ಟಾಟಾ ಅಡ್ವಾನ್ಸ್ಡ್‌ ಸಿಸ್ಟಮ್ಸ್‌ ಲಿಮಿಟೆಡ್‌ ಮತ್ತು ಸ್ಪೇನ್‌ ಮೂಲದ ಏರ್‌ಬಸ್‌ ಡಿಫೆನ್ಸ್‌ & ಸ್ಪೇಸ್‌ ಎಸ್.ಎ ಸಹಭಾಗಿತ್ವದಲ್ಲಿ ಮಿಲಿಟರಿ ವಿಮಾನಗಳನ್ನು ತಯಾರಿಸಲಾಗುವುದು. 21,935 ಕೋಟಿ ರೂ. ಯೋಜನೆ ಇದಾಗಿದೆ. ನಾಗರಿಕ ಉದ್ದೇಶಗಳಿಗೆ ಇಲ್ಲಿನ ವಿಮಾನಗಳನ್ನು ಬಳಸಬಹುದು. ಭಾರತ ಶೀಘ್ರದಲ್ಲಿಯೇ ಮೇಡ್‌ ಇನ್‌ ಇಂಡಿಯಾ ಪ್ರಯಾಣಿಕರ ವಿಮಾನಗಳನ್ನು ಉತ್ಪಾದಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.

ಟ್ರಾನ್ಸ್‌ಪೋರ್ಟ್‌ ಏರ್‌ ಕ್ರಾಫ್ಟ್‌ ಕೇವಲ ಸೇನೆಯನ್ನು ಬಲಪಡಿಸುವುದು ಮಾತ್ರವಲ್ಲದೆ, ಹೊಸ ವಿಮಾನಗಳ ಉತ್ಪಾದನೆಗೆ ಅವಶ್ಯವಿರುವ ವಾತಾವರಣವನ್ನೂ ಅಭಿವೃದ್ಧಿಪಡಿಸಲಿದೆ ಎಂದು ಪ್ರಧಾನಿ ಮೋದಿ ವಿವರಿಸಿದ್ದರು. ಭಾರತವು ಅಮೆರಿಕ ಮತ್ತು ಚೀನಾ ಬಳಿಕ ಮೂರನೇ ಅತಿ ದೊಡ್ಡ ವೈಮಾನಿಕ ಮಾರುಕಟ್ಟೆಯಾಗಿದೆ. ಪ್ರಸ್ತುತ ಭಾರತದಲ್ಲಿ 700 ವಿಮಾನಗಳು ಇವೆ. ವರ್ಷಕ್ಕೆ 125 ವಿಮಾನಗಳು ಸೇರ್ಪಡೆಯಾಗುತ್ತಿವೆ.

Exit mobile version