ನವ ದೆಹಲಿ: ಏರ್‌ಲೈನ್‌ಗಳು ವಿಕಲ ಚೇತನ ಮತ್ತು ಅಶಕ್ತ ಪ್ರಯಾಣಿಕರಿಗೆ ತಾವಾಗಿಯೇ ನಿರ್ಬಂಧ ಹೇರುವಂತಿಲ್ಲ. ಒಂದು ವೇಳೆ ಪ್ರಯಾಣ ನಿರಾಕರಿಸುವುದಿದ್ದರೆ, ಅದಕ್ಕೂ ಮುನ್ನ ಏರ್‌ಪೋರ್ಟ್‌ನಲ್ಲಿರುವ ವೈದ್ಯರ ಅಭಿಪ್ರಾಯವನ್ನು ಪಡೆಯಬೇಕು ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯವು (DGCA) ಹೊಸ ನಿಯಮವನ್ನು ಜಾರಿಗೊಳಿಸಿದೆ.
ಅಂಗ ವೈಕಲ್ಯ ಅಥವಾ ನಿಧಾನಗತಿಯ ನಡಿಗೆಯ ಕಾರಣಕ್ಕಾಗಿ ಪ್ರಯಾಣಿಕರನ್ನು ಏರ್‌ಲೈನ್‌ಗಳು ತಡೆಯಬಾರದು. ಒಂದು ವೇಳೆ ತಡೆಯಲೇಬೇಕಿದ್ದರೆ, ಅದಕ್ಕೆ ಮುನ್ನ ಏರ್‌ಪೋರ್ಟ್‌ನಲ್ಲಿರುವ ವೈದ್ಯರ ಅಭಿಪ್ರಾಯ ಪಡೆಯಬೇಕು. ಅಂಥ ಪ್ರಯಾಣೀಕರು ವಿಮಾನ ಪ್ರಯಾಣ ಮಾಡಿದರೆ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸುವ ಸಾಧ್ಯತೆ ಇದೆ ಎಂಬುದನ್ನು ವೈದ್ಯರೇ ದೃಢಪಡಿಸಬೇಕು. ವೈದ್ಯರ ಅಭಿಪ್ರಾಯ ಪಡೆದ ಬಳಿಕ ಏರ್‌ಲೈನ್ ಸೂಕ್ತ ನಿರ್ಧಾರ ಕೈಗೊಳ್ಳಬಹುದುʼʼ ಎಂದು ಡಿಜಿಸಿಎ ತಿಳಿಸಿದೆ.
ಇಂಡಿಗೊ ಏರ್‌ಲೈನ್ ಅಧಿಕಾರಿಗಳು ಕಳೆದ ಮೇ ೭ರಂದು ರಾಂಚಿಯ ವಿಮಾನ ನಿಲ್ದಾಣದಲ್ಲಿ ವಿಕಲಚೇತನ ಮಗುವನ್ನು ವಿಮಾನಕ್ಕೆ ಪ್ರವೇಶಿಸಲು ಬಿಟ್ಟಿರಲಿಲ್ಲ. ಮಗುವನ್ನು ವಿಮಾನಕ್ಕೆ ಸೇರಿಸಲು ಬಿಡದ ಕಾರಣ ಪೋಷಕರೂ ಪ್ರಯಾಣಿಸಲು ನಿರಾಕರಿಸಿದ್ದರು. ಇದು ವಿವಾದವಾಗಿ ಪರಿಣಮಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಡಿಜಿಸಿಎ, ಏರ್‌ಲೈನ್‌ಗೆ ೫ ಲಕ್ಷ ರೂ. ದಂಡ ವಿಧಿಸಿತ್ತು. ಬಳಿಕ ಏರ್‌ಲೈನ್ ಕ್ಷಮೆ ಯಾಚಿಸಿತ್ತು. ಈ ಘಟನೆಯ ಬಳಿಕ ಡಿಜಿಸಿಎ ಸ್ಪಷ್ಟವಾದ ಮಾರ್ಗದರ್ಶನವನ್ನು ಇದೀಗ ನೀಡಿದೆ.