ನವ ದೆಹಲಿ: ಖಾಸಗಿ ವಲಯದ ಟೆಲಿಕಾಂ ಕಂಪನಿ ಏರ್‌ಟೆಲ್ (Airtel) ಆಗಸ್ಟ್‌ನಲ್ಲಿಯೇ ತನ್ನ ೫ಜಿ ಸೇವೆಯನ್ನು ಆರಂಭಿಸುವುದಾಗಿ ತಿಳಿಸಿದೆ.
ಆಗಸ್ಟ್ ಅಂತ್ಯದೊಳಗೆ ೫ಜಿ ಸೇವೆ ಆರಂಭಿಸಲಾಗುವುದು. ೫ಜಿ ನೆಟ್ ವರ್ಕ್ ಅಳವಡಿಸುವುದಕ್ಕೆ ಸಂಬಂಧಿಸಿ ಎರಿಕ್ಸನ್, ನೋಕಿಯಾ ಮತ್ತು ಸ್ಯಾಮ್‌ಸಂಗ್ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಏರ್‌ಟೆಲ್ ತಿಳಿಸಿದೆ. ಇದರೊಂದಿಗೆ ದೇಶದಲ್ಲಿ ೫ಜಿ ಸೇವೆಯನ್ನು ಮೊದಲ ಬಾರಿಗೆ ಏರ್‌ಟೆಲ್ ಆರಂಭಿಸಲಿದೆ.
ಇತ್ತೀಚೆಗೆ ಮುಕ್ತಾಯವಾದ ೫ಜಿ ಸ್ಪೆಕ್ಟ್ರಮ್ ಹರಾಜಿನಲ್ಲಿ ಏರ್‌ಟೆಲ್, 19867.8 ಮೆಗಾ ಹರ್ಟ್ಸ್ ಸ್ಪೆಕ್ಟ್ರಮ್ ಅನ್ನು ಖರೀದಿಸಲು ೪೩,೦೮೪ ಕೋಟಿ ರೂ.ಗಳನ್ನು ವೆಚ್ಚ ಮಾಡುತ್ತಿದೆ. ” ಏರ್‌ಟೆಲ್ ಆಗಸ್ಟ್‌ನಲ್ಲಿ ೫ಜಿ ಸೇವೆಯನ್ನು ಆರಂಭಿಸಲಿದೆ. ನೆಟ್ ವರ್ಕ್‌ಗೆ ಸಂಬಂಧಿಸಿ ನಮ್ಮ ಒಪ್ಪಂದಗಳು ಅಂತಿಮವಾಗಿದೆ. ಅತ್ಯುತ್ತಮ ತಂತ್ರಜ್ಞಾನ ಪಾಲುದಾರಿಕೆಯನ್ನು ನಾವು ಗಳಿಸಿದ್ದೇವೆ. ಇದರ ಪ್ರಯೋಜನ ನಮ್ಮ ಗ್ರಾಹಕರಿಗೆ ಸಿಗಲಿದೆ. ಉದ್ದಿಮೆ ವಲಯಕ್ಕೂ ಇದರಿಂದ ಲಾಭವಾಗಲಿದೆʼʼ ಎಂದು ಏರ್‌ಟೆಲ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಗೋಪಾಲ್ ವಿಠಲ್ ಅವರು ತಿಳಿಸಿದ್ದಾರೆ. 5,000 ಪಟ್ಟಣಗಳಲ್ಲೂ ೫ಜಿ ವಿಸ್ತರಣೆಗೆ ಏರ್‌ಟೆಲ್ ಸಜ್ಜಾಗಿದೆ.
ಎರಿಕ್ಸನ್, ನೋಕಿಯಾ ಜತೆ ೧೯,೭೫೦ ಕೋಟಿ ರೂ. ಒಪ್ಪಂದ: ಭಾರ್ತಿ ಏರ್‌ಟೆಲ್ ಸ್ವೀಡನ್ ಮೂಲದ ಎರಿಕ್ಸನ್ ಮತ್ತು ಫಿನ್ಲೆಂಡ್ ಮೂಲದ ನೋಕಿಯಾ ಜತೆಗೆ ೫ಜಿ ನೆಟ್‌ವರ್ಕ್ ಅಳವಡಿಕೆಗೆ ಸಂಬಂಧಿಸಿ ೧೯,೭೫೦ ಕೋಟಿ ರೂ.ಗಳ ಒಪ್ಪಂದ ಮಾಡಿಕೊಂಡಿದೆ. ಕರ್ನಾಟಕ, ದಿಲ್ಲಿ, ರಾಜಸ್ಥಾನ, ತಮಿಳುನಾಡಿನಲ್ಲಿ ಏರ್‌ಟೆಲ್ ಪರವಾಗಿ ಎರಿಕ್ಸನ್ ೫ಜಿ ನೆಟ್ ವರ್ಕ್ ಅನ್ನು ಅಳವಡಿಸಲಿದೆ. ಮುಂಬಯಿ ಸೇರಿ ೯ ಟೆಲಿಕಾಂ ವೃತ್ತಗಳಲ್ಲಿ ನೋಕಿಯಾ ಅಳವಡಿಸಲಿದೆ. ಪಂಜಾಬ್ ಮತ್ತು ಕೋಲ್ಕತಾದಲ್ಲಿ ಸ್ಯಾಮ್‌ಸಂಗ್ ಅಳವಡಿಸಲಿದೆ.
೫ಜಿ ಸ್ಪೆಕ್ಟ್ರಮ್ ಹರಾಜಿನಲ್ಲಿ ಭಾರ್ತಿ ಏರ್‌ಟೆಲ್ ಎರಡನೇ ಅತಿ ದೊಡ್ಡ ಬಿಡ್ಡರ್ ಆಗಿ ಹೊರಹೊಮ್ಮಿತ್ತು. ರಿಲಯನ್ಸ್ ಜಿಯೊ ಮೊದಲ ಸ್ಥಾನದಲ್ಲಿತ್ತು. ಜಿಯೊ ೧೫೦,೧೭೩ ಕೋಟಿ ರೂ. ವೆಚ್ಚದಲ್ಲಿ ೫೮.೬೫% ಸ್ಪೆಕ್ಟ್ರಮ್ ಅನ್ನು ತನ್ನದಾಗಿಸಿತ್ತು. ಆಗಸ್ಟ್ ೧೫ಕ್ಕೆ ಮುನ್ನ ಸ್ಪೆಕ್ಟ್ರಮ್ ಮಂಜೂರಾಗುವ ನಿರೀಕ್ಷೆ ಇದೆ.