ಬಾರ್ಸಿಲೋನಾ: ಭಾರ್ತಿ ಏರ್‌ಟೆಲ್ ತನ್ನ ಮೊಬೈಲ್ ಫೋನ್ ಕರೆಗಳು ಮತ್ತು ಡೇಟಾ ದರಗಳನ್ನು ಈ ವರ್ಷ ಏರಿಸಲು ಚಿಂತನೆ ನಡೆಸುತ್ತಿದೆ (Airtel data rate hike) ಎಂದು ಕಂಪನಿಯ ಅಧ್ಯಕ್ಷ ಸುನಿಲ್ ಭಾರ್ತಿ ಮಿತ್ತಲ್ ತಿಳಿಸಿದ್ದಾರೆ. ಕಂಪನಿ ಕಳೆದ ತಿಂಗಳು ತನ್ನ 28 ದಿನಗಳ ಮೊಬೈಲ್ ಫೋನ್ ಸೇವೆಗಳ ಪ್ಲಾನ್ ದರದಲ್ಲಿ 57% ಏರಿಕೆ ಮಾಡಿತ್ತು. ಇದು 8 ಟೆಲಿಕಾಂ ವೃತ್ತಗಳಿಗೆ ಅನ್ವಯಿಸುತ್ತಿತ್ತು. ಹೀಗಾಗಿ ದರ 155 ರೂ.ಗೆ ವೃದ್ಧಿಸಿತ್ತು.
ಕಂಪನಿಯ ಬ್ಯಾಲೆನ್ಸ್‌ಶೀಟ್ ಉತ್ತಮವಾಗಿರುವ ಹಂತದಲ್ಲಿಯೇ ದರ ಏರಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಟೆಲಿಕಾಂ ಬಿಸಿನೆಸ್‌ನಲ್ಲಿ ಹಾಕಿದ ಬಂಡವಾಳಕ್ಕೆ ಬರುವ ಪ್ರತಿಫಲ ಕಡಿಮೆ. ಹೀಗಾಗಿ ದರ ಏರಿಕೆ ಅನಿವಾರ್ಯ ಎಂದು ಇಲ್ಲಿ ನಡೆದ ಮೊಬೈಲ್ ವರ್ಲ್ಡ್ ಕಾಂಗ್ರೆಸ್ (Mobile world congress) ಹೇಳಿದರು.
ಭಾರತೀಯ ಗ್ರಾಹಕರ ಹಿತಾಸಕ್ತಿ ದೃಷ್ಟಿಯಿಂದ ಸಣ್ಣ ಪ್ರಮಾಣದಲ್ಲಿ ದರ ಏರಿಕೆಯಾಗಲಿದೆ. ಜನರ ವೇತನ, ಆದಾಯ ಏರಿಕೆಯಾಗುತ್ತಿದೆ. ಮನೆ ಬಾಡಿಗೆ ಹೆಚ್ಚುತ್ತಿದೆ. ಅದರ ಬಗ್ಗೆ ಯಾರೂ ದೂರುವುದಿಲ್ಲ. ಆದರೆ ನಾವು ಸಣ್ಣ ಪ್ರಮಾಣದ ದರ ಏರಿಕೆ ಮಾಡಲು ಬಯಸಿದ್ದೇವೆ. ದೇಶದಲ್ಲಿ ಮತ್ತೊಂದು ವೊಡಾಫೋನ್ ಐಡಿಯಾ ಮಾದರಿಯ ಸಂದರ್ಭ ಸೃಷ್ಟಿಯಾಗಬಾರದು ಎಂದು ಮಿತ್ತಲ್ ಹೇಳಿದರು. ಕಂಪನಿಯು 99 ರೂ. ರಿಚಾರ್ಜ್ ಪ್ಲಾನ್ ಅನ್ನು ರದ್ದುಪಡಿಸಿದೆ. ಅದರ ಅಡಿಯಲ್ಲಿ 200 ಎಂಬಿ ಡೇಟಾ ಸಿಗುತ್ತಿತ್ತು.