Site icon Vistara News

Adani Stocks : ವಂಚನೆಯ ಆರೋಪ, ಅದಾನಿ ಗ್ರೂಪ್‌ ಷೇರುಗಳಿಗೆ 46,000 ಕೋಟಿ ರೂ. ನಷ್ಟ, ಸಮೂಹ ಹೇಳಿದ್ದೇನು?

Allegation of fraud, Rs 46,000 crore for Adani Group shares. Loss, what did the group say?

ನವ ದೆಹಲಿ: ಅದಾನಿ ಗ್ರೂಪ್‌ ಕಂಪನಿಗಳ ಷೇರುಗಳು ಬುಧವಾರ ನಷ್ಟಕ್ಕೀಡಾಗಿದೆ. ಅಮೆರಿಕ ಮೂಲದ ಹಿಂಡೆನ್‌ಬರ್ಗ್‌ ರಿಸರ್ಚ್‌ ಸಂಸ್ಥೆಯು ಅದಾನಿ ಸಮೂಹವು (Gautam Adani) ಷೇರು ವ್ಯವಹಾರದಲ್ಲಿ ಅಕ್ರಮ ನಡೆಸಿದೆ ಎಂದು ಆರೋಪಿಸಿದೆ. ಇದರ ಬೆನ್ನಲ್ಲೇ ಗ್ರೂಪ್‌ನ ಷೇರುಗಳ ಮೌಲ್ಯದಲ್ಲಿ ಕುಸಿತ ಕಂಡುಬಂದಿದೆ. ( Adani Stocks) ಕಳೆದ ಎರಡು ವರ್ಷಗಳಿಂದ ಹಿಂಡೆನ್‌ಬರ್ಗ್‌ನ ವಿಧಿವಿಜ್ಞಾನ ಆರ್ಥಿಕ ಸಂಶೋಧನಾ ತಂಡ ತನ್ನ ತನಿಖೆಯನ್ನು ನಡೆಸುತ್ತಿತ್ತು.

ಆರೋಪವೇನು?

ಗೌತಮ್‌ ಅದಾನಿ ಹಾಗೂ ಹಿರಿಯ ಸೋದರ ವಿನೋದ್‌ ಅದಾನಿ

ಅದಾನಿ ಕುಟುಂಬದ ಸದಸ್ಯರು ಮಾರಿಷಸ್‌, ಯುಎಇ, ಕೆರಿಬಿಯನ್‌ ದ್ವೀಪಗಳು ಮೊದಲಾದ ಟ್ಯಾಕ್ಸ್-ಹೆವೆನ್‌ ಸ್ಥಳಗಳಲ್ಲಿ ನಕಲಿ ಕಂಪನಿಗಳನ್ನು ಸ್ಥಾಪಿಸುವಲ್ಲಿ ಷಾಮೀಲಾಗಿದ್ದಾರೆ. ನಕಲಿ ಆಮದು-ರಫ್ತು ದಾಖಲಾತಿಗಳ ಮೂಲಕ ನಕಲಿ ವಹಿವಾಟು ವಿವರಗಳನ್ನು ತೋರಿಸಿದ್ದಾರೆ. ಹಾಗೂ ಷೇರು ಮಾರುಕಟ್ಟೆಯಲ್ಲಿ ನೋಂದಾಯಿತ ಕಂಪನಿಗಳಿಂದ ಹಣ ದೋಚಿದ್ದಾರೆ ಎಂದು ಹಿಂಡೆನ್‌ ಬರ್ಗ್‌ ರಿಸರ್ಚ್‌ (Hindenburg Research) ತನ್ನ ವರದಿಯಲ್ಲಿ ಆರೋಪಿಸಿದೆ.

ಷೇರು ಮಾರುಕಟ್ಟೆಯಲ್ಲಿ ಬುಧವಾರ ಅದಾನಿ ಟೋಟಲ್‌ ಗ್ಯಾಸ್‌ 12,366 ಕೋಟಿ ರೂ, ಅದಾನಿ ಪೋರ್ಟ್ಸ್‌ 8,342 ಕೋಟಿ ರೂ, ಅದಾನಿ ಟ್ರಾನ್ಸ್‌ಮಿಶನ್‌ 8,039 ಕೋಟಿ ರೂ.ಗಳನ್ನು ಕಳೆದುಕೊಂಡಿದೆ.

ರಾಜೇಶ್‌ ಅದಾನಿ

ಗೌತಮ್‌ ಅದಾನಿಯವರ ಕಿರಿಯ ಸೋದರ ರಾಜೇಶ್‌ ಅದಾನಿ, 2004-05ರಲ್ಲಿ ಸಮೂಹದ ವಜ್ರದ ಆಮದು-ರಫ್ತು ವ್ಯವಹಾರದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ವಿದೇಶಗಳಲ್ಲಿ ನಕಲಿ ಕಂಪನಿ ಸ್ಥಾಪಿಸಿ ನಕಲಿ ವಹಿವಾಟು ಲೆಕ್ಕಾಚಾರ ತೋರಿಸುವಲ್ಲಿ ಪಾತ್ರ ವಹಿಸಿದ್ದರು. ಈ ಹಿಂದೆ ಅವ್ಯವಹಾರಕ್ಕೆ ಸಂಬಂಧಿಸಿ ಎರಡು ಸಲ ಅರೆಸ್ಟ್‌ ಕೂಡ ಆಗಿದ್ದರು. ಗೌತಮ್‌ ಅದಾನಿಯ ಹಿರಿಯ ಸೋದರ ವಿನೋದ್‌ ಅದಾನಿ ಅವರು 38 ನಕಲಿ ಕಂಪನಿಗಳನ್ನು ನಿಯಂತ್ರಿಸುತ್ತಿದ್ದಾರೆ ಎಂದು ಹಿಂಡೆನ್‌ ಬರ್ಗ್‌ ತನ್ನ ವರದಿಯಲ್ಲಿ ಆರೋಪಿಸಿದೆ.

ಆರೋಪಗಳನ್ನು ನಿರಾಕರಿಸಿದ ಅದಾನಿ ಗ್ರೂಪ್:

ಹಿಂಡೆನ್‌ಬರ್ಗ್‌ ಪ್ರಕಟಿಸಿರುವ ವರದಿ ಹಾಗೂ ಆರೋಪಗಳನ್ನು ಅದಾನಿ ಗ್ರೂಪ್‌ ತಳ್ಳಿ ಹಾಕಿದೆ. ಈ ಸಂಬಂಧ ಬುಧವಾರ ಹೇಳಿಕೆ ಬಿಡುಗಡೆಗೊಳಿಸಿರುವ ಗ್ರೂಪ್‌, ಹಿಂಡೆನ್‌ಬರ್ಗ್‌ ಆರೋಪಗಳು ನಿರಾಧಾರವಾಗಿವೆ. ವಾಸ್ತವಾಂಶಗಳನ್ನು ಪರಿಶೀಲಿಸದೆಯೇ ಕಪೋಲಕಲ್ಪಿತ ಆರೋಪಗಳನ್ನು ಮಾಡಲಾಗಿದೆ. ಇಂಥ ಆರೋಪಗಳನ್ನು ದೇಶದ ಉಚ್ಚ ನ್ಯಾಯಾಲಯ ಕೂಡ ನಿರಾಕರಿಸಿದೆ. ಹೀಗಿದ್ದರೂ, ಮಾಡಿರುವುದು ಆಘಾತಕಾರಿಯಾಗಿದೆ. ಈ ಬಗ್ಗೆ ಕಾನೂನು ಸಮರ ಕೈಗೊಳ್ಳಲಾಗುವುದು ಎಂದು ಸಮೂಹದ ಸಿಎಫ್‌ಒ ಜುಗೆಶಿಂದರ್‌ ಸಿಂಗ್‌ ತಿಳಿಸಿದ್ದಾರೆ.

ಅದಾನಿ ಎಂಟರ್‌ಪ್ರೈಸಸ್‌ ಹೆಚ್ಚುವರಿ ಷೇರು ಬಿಡುಗಡೆಗೆ (FPO ) ಸಜ್ಜಾಗಿರುವ ಸಂದರ್ಭದಲ್ಲಿಯೇ ಈ ವರದಿ ಪ್ರಕಟವಾಗಿರುವುದನ್ನು ಗಮನಿಸಿದರೆ, ಎಫ್‌ಪಿಒದ ದಿಕ್ಕು ತಪ್ಪಿಸುವ ಷಡ್ಯಂತ್ರದ ಭಾಗದಂತೆ ಕಾಣುತ್ತಿದೆ. ಹೂಡಿಕೆದಾರರು ಅದಾನಿ ಸಮೂಹದ ಬಗ್ಗೆ ಅಪಾರವಾದ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಮೂಹವು ಭಾರತದ ಮೂಲಸೌಕರ್ಯ ಅಭಿವೃದ್ಧಿ ವಲಯದಲ್ಲಿ ಮುಂಚೂಣಿಯಲ್ಲಿದ್ದು, ಉದ್ಯೋಗಗಳನ್ನೂ ಸೃಷ್ಟಿಸಿದೆ. ವೃತ್ತಿಪರ ಸಿಇಒಗಳು ಸಮೂಹದ ಕಂಪನಿಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಕಾರ್ಪೊರೇಟ್‌ ಆಡಳಿತದ ಚೌಕಟ್ಟಿನಲ್ಲಿ ಕಂಪನಿಗಳು ನಡೆಯುತ್ತಿವೆ ಎಂದು ಅವರು ವಿವರಿಸಿದ್ದಾರೆ.

Exit mobile version