ಸ್ಯಾನ್ ಫ್ರಾನ್ಸಿಸ್ಕೊ: ಟ್ವಿಟರ್ ಮತ್ತು ಮೆಟಾದ ಬಳಿಕ ಅಮೆಜಾನ್‌ನಲ್ಲಿ (Amazon layoff) ಸಾಮೂಹಿಕವಾಗಿ ಉದ್ಯೋಗ ಕಡಿತ ಆರಂಭವಾಗಿದೆ. ಉದ್ಯೋಗ ಕಡಿತ ಆರಂಭಿಸಿರುವುದನ್ನು ಕಂಪನಿ ದೃಢಪಡಿಸಿದೆ.
ಇ-ಕಾಮರ್ಸ್ ದಿಗ್ಗಜನ ಹಿರಿಯ ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡಲಾಗುತ್ತಿದೆ. ಇದರೊಂದಿಗೆ ಆರ್ಥಿಕ ಹಿಂಜರಿತದ ಭೀತಿ ತಲೆದೋರಿದೆ. ಕ್ಯಾಲಿಫೋರ್ನಿಯಾದಲ್ಲಿ 260 ಉದ್ಯೋಗಿಗಳನ್ನು ಒಟ್ಟಿಗೆ ವಜಾಗೊಳಿಸಲಾಗಿದೆ.
ಉದ್ಯೋಗಿಗಳ ಡೇಟಾ ಸೈಂಟಿಸ್ಟ್‌ಗಳು, ಸಾಫ್ಟ್‌ವೇರ್ ಎಂಜಿನಿಯರ್ ಹಾಗೂ ಇತರ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಜನವರಿ 17ರಿಂದ ಉದ್ಯೋಗ ಕಡಿತ ಅನ್ವಯವಾಗುತ್ತಿದೆ. ಅಮೆಜಾನ್ ಜಗತ್ತಿನಾದ್ಯಂತ ತನ್ನ ಕಚೇರಿಗಳಲ್ಲಿ ಒಟ್ಟು 10,000 ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ. ಕಂಪನಿಯ ಇತಿಹಾಸದಲ್ಲೇ ಈ ರೀತಿ ಉದ್ಯೋಗ ಕಡಿತ ಇದೇ ಮೊದಲು.
ಕಳೆದ ಕೆಲ ವರ್ಷಗಳಿಂದ ನೇಮಕಾತಿಯನ್ನು ಚುರುಕುಗೊಳಿಸಲಾಗಿತ್ತು. ಆದರೆ ಪ್ರಸಕ್ತ ಬಿಸಿನೆಸ್ ವಾತಾವರಣ ಮಂದಗತಿಯಲ್ಲಿ ಇರುವುದರಿಂದ ಉದ್ಯೋಗ ಕಡಿತ ಅನಿವಾರ್ಯವಾಗಿದೆ ಎಂದು ಅಮೆಜಾನ್ ತಿಳಿಸಿದೆ. ಉದ್ಯೋಗ ಕಳೆದುಕೊಳ್ಳುತ್ತಿರುವ ಸಿಬ್ಬಂದಿಗೆ ಅಗತ್ಯವಿರುವ ಎಲ್ಲ ನೆರವು ನೀಡುವುದಾಗಿ ತಿಳಿಸಿದೆ. ಸೆಪರೇಷನ್ ಪೇಮೆಂಟ್, ಟ್ರಾನ್ಸಿಶನಲ್ ಬೆನಿಫಿಟ್ಸ್, ಎಕ್ಸ್ ಟರ್ನಲ್ ಜಾಬ್ ಪ್ಲೇಸ್‌ಮೆಂಟ್ ಸಪೋರ್ಟ್ ನೀಡುವುದಾಗಿ ಅಮೆಜಾನ್ ಭರವಸೆ ನೀಡಿದೆ. ಅಮೆಜಾನ್ ನಿರ್ಧರಕ್ಕೆ ಉದ್ಯೋಗಿಗಳು ಆಘಾತ ವ್ಯಕ್ತಪಡಿಸಿದ್ದಾರೆ.