ನವ ದೆಹಲಿ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಉದ್ಯಮಿ ಅನಿಲ್ ಅಂಬಾನಿ ಅವರು ಎರಡು ಸ್ವಿಸ್ ಬ್ಯಾಂಕ್ ಖಾತೆಗಳಲ್ಲಿ ೮೧೪ ಕೋಟಿ ರೂ. ಅಘೋಷಿತ ಸಂಪತ್ತು (Black money) ಹೊಂದಿರುವುದನ್ನು ಪತ್ತೆ ಹಚ್ಚಿದ್ದು, ಈ ಸಂಬಂಧ ನೋಟಿಸ್ ಜಾರಿಗೊಳಿಸಿದ್ದಾರೆ.
ಈ ೮೧೪ ಕೋಟಿ ರೂ.ಗಳಿಗೆ ಸಂಬಂಧಿಸಿ ೪೨೦ ಕೋಟಿ ರೂ. ತೆರಿಗೆಯನ್ನು ಅನಿಲ್ ಅಂಬಾನಿ ಪಾವತಿಸಿಲ್ಲ ಎಂದು ಆರೋಪಿಸಲಾಗಿದ್ದು, ವಿಚಾರಣೆ ನಡೆಸಲು ಆದಾಯ ತೆರಿಗೆ ಇಲಾಖೆ ಸಿದ್ಧತೆ ನಡೆಸಿದೆ.
ತಾನು ಉದ್ದೇಶಪೂರ್ವಕವಾಗಿ ಸ್ವಿಸ್ ಖಾತೆ ವಿವರಗಳನ್ನು ಬಚ್ಚಿಟ್ಟಿಲ್ಲ ಎಂದು ಅನಿಲ್ ಅಂಬಾನಿ ಹೇಳಿದ್ದಾರೆ. ಆದರೆ ಐಟಿ ಇಲಾಖೆಯ ಪ್ರಕಾರ ಅನಿಲ್ ಅಂಬಾನಿ ಉದ್ದೇಶಪೂರ್ವಕವಾಗಿ ಸ್ವಿಸ್ ಬ್ಯಾಂಕ್ ಖಾತೆಯಲ್ಲಿರುವ ಸಂಪತ್ತಿನ ವಿವರಗಳನ್ನು ಗೌಪ್ಯವಾಗಿಟ್ಟಿದ್ದಾರೆ.
ಆದಾಯ ತೆರಿಗೆ ಇಲಾಖೆಯ ಕಪ್ಪುಹಣ (ಅಘೋಷಿತ ವಿದೇಶಿ ಮೂಲದ ಆದಾಯ) ಹೇರಿಕೆ ಕಾಯಿದೆ-೨೦೧೫ ಅಡಿಯಲ್ಲಿ, ಅನಿಲ್ ಅಂಬಾನಿ ಅವರನ್ನು ವಿಚಾರಣೆಗೆ ಒಳಪಡಿಸಬಹುದು ಎಂದು ಇಲಾಖೆ ತಿಳಿಸಿದೆ. ಈ ಕಾಯಿದೆಯ ಅಡಿಯಲ್ಲಿ ತಪ್ಪಿತಸ್ಥರಿಗೆ ಗರಿಷ್ಠ ೧೦ ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು. ಆಗಸ್ಟ್ ೩೧ರೊಳಗೆ ಉತ್ತರಿಸುವಂತೆ ಅನಿಲ್ ಅಂಬಾನಿಯವರಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಅನಿಲ್ ಅಂಬಾನಿ ಅವರು ರಿಲಯನ್ಸ್ ಎಡಿಎ ಗ್ರೂಪ್‌ನ ಅಧ್ಯಕ್ಷರಾಗಿದ್ದಾರೆ.