ವಾಷಿಂಗ್ಟನ್: ಅಮೆರಿಕದಲ್ಲಿ ಕಳೆದ ಆಗಸ್ಟ್‌ನಲ್ಲಿ ಹಣದುಬ್ಬರ 8.3%ರ ಉನ್ನತ ಮಟ್ಟದಲ್ಲಿ ಮುಂದುವರಿದಿದೆ. ದಿನ ನಿತ್ಯ ಬಳಕೆಯ ವಸ್ತುಗಳು ಮತ್ತು ಸೇವೆಗಳ ಬೆಲೆ ಏರಿಕೆಗೆ ಅಲ್ಲಿಯೂ ಜನ ತತ್ತರಿಸಿದ್ದಾರೆ. (US Inflation) ಆಗಸ್ಟ್ ತಿಂಗಳಿನ ಹಣದುಬ್ಬರದ ಅಂಕಿ ಅಂಶಗಳು ಪ್ರಕಟವಾದ ಬೆನ್ನಲ್ಲೇ ಷೇರು ಮಾರುಕಟ್ಟೆಗಳಲ್ಲಿ ಸೂಚ್ಯಂಕಗಳು ಕುಸಿದಿವೆ. ಹಣದುಬ್ಬರವನ್ನು ಹತ್ತಿಕ್ಕಲು ಅಮೆರಿಕದ ಸೆಂಟ್ರಲ್ ಬ್ಯಾಂಕ್ (ನಮ್ಮಲ್ಲಿ ಆರ್‌ಬಿಐ ಇರುವಂತೆ) ಬಡ್ಡಿ ದರವನ್ನು ಮುಂದಿನ ವಾರ ಏರಿಸುವ ಸಾಧ್ಯತೆ ದಟ್ಟವಾಗಿದೆ. ಇದು ಜಾಗತಿಕ ಷೇರು ಮಾರುಕಟ್ಟೆ ಮೇಲೆ ಬೀರುವ ಪ್ರಭಾವವನ್ನು ಕಾದು ನೋಡಬೇಕಾಗಿದೆ.
ಪೆಟ್ರೋಲ್ ದರ ಇಳಿಕೆಯ ಪರಿಣಾಮ ಕಳೆದ ಎರಡು ತಿಂಗಳಿಗೆ ಹೋಲಿಸಿದರೆ ಹಣದುಬ್ಬರ ಅಲ್ಪ ಇಳಿಕೆಯಾಗಿದ್ದರೂ, ಇನ್ನೂ ಉನ್ನತ ಮಟ್ಟದಲ್ಲಿಯೇ ಇದೆ. ಜುಲೈನಲ್ಲಿ 8.5%ರ ಮಟ್ಟದಲ್ಲಿತ್ತು. ಜೂನ್‌ನಲ್ಲಿ 9.1%ರ ಐತಿಹಾಸಿಕ ಜಿಗಿತಕ್ಕೀಡಾಗಿತ್ತು. ಒಟ್ಟಾರೆಯಾಗಿ ಕಳೆದ 40 ವರ್ಷದಲ್ಲಿಯೇ ಗರಿಷ್ಠ ಮಟ್ಟದ ಬೆಲೆ ಏರಿಕೆ ದಾಖಲಾಗಿದೆ.
ಆಹಾರ ವಸ್ತುಗಳ ದರ ಅಮೆರಿಕದಲ್ಲಿ 13.5% ಏರಿಕೆಯಾಗಿಎ. ವಿದ್ಯುತ್ (15.8%), ಬಾಡಿಗೆ (6.8%), ಆರೋಗ್ಯ ವಿಮೆ (24.3%) ದುಬಾರಿಯಾಗಿದೆ.
ಹಣದುಬ್ಬರ ಜಿಗಿತದ ಅಂಕಿ ಅಂಶಗಳು ಪ್ರಕಟವಾದ ಬೆನ್ನಲ್ಲೇ ಡವ್ ಜಾನ್ಸ್ ಇಂಡಸ್ಟ್ರಿಯಲ್ ಎವರೇಜ್ ಸೂಚ್ಯಂಕ 4% ಅಥವಾ 1,300 ಅಂಕಗಳ ಕುಸಿತಕ್ಕೀಡಾಯಿತು. ಎಸ್&ಪಿ ಸೂಚ್ಯಂಕ 500 ಅಂಕ ಪತನವಾಯಿತು. ನಾಸ್‌ಡಾಕ್ ಕಂಪಫಸಿಟ್ ಸೂಚ್ಯಂಕ 632 ಅಂಕ ಇಳಿಯಿತು. ಇದರೊಂದಿಗೆ ಅಮೆರಿಕದ ಮೂರೂ ಪ್ರಮುಖ ಷೇರು ಸೂಚ್ಯಂಕಗಳು ಕುಸಿದಂತಾಯಿತು.