ನ್ಯೂಯಾರ್ಕ್: ಅಮೆರಿಕದಲ್ಲಿ ಮೇಕಪ್ ಉತ್ಪನ್ನಗಳ ದಿಗ್ಗಜ ಕಂಪನಿ, 90 ವರ್ಷ ಹಳೆದ ರೆವ್ಲೊನ್ ದಿವಾಳಿಯಾಗಿದೆ.
ಭಾರಿ ಸಾಲದ ಹೊರೆಗೆ ತತ್ತರಿಸಿರುವ ರೆವ್ಲೊನ್, ಸಾಲವನ್ನು ಮರು ಪಾವತಿಸಲಾಗದೆ ದಿವಾಳಿ ಅರ್ಜಿ ಸಲ್ಲಿಸಿದೆ.
ಕೋವಿಡ್ ಬಿಕ್ಕಟ್ಟಿನ ವೇಳೆ ವ್ಯಾಪಾರ ಕುಸಿದು ಹೋಗಿತ್ತು. ಆಗ ಭಾರಿ ಹಣದುಬ್ಬರ ಮತ್ತು ಕಚ್ಚಾ ವಸ್ತುಗಳ ಪೂರೈಕೆ ಅಸ್ತವ್ಯಸ್ತವಾಗಿರುವುದರಿಂದ ಆರ್ಥಿಕವಾಗಿ ದಿವಾಳಿಯಾಗಿರುವುದಾಗಿ ಕಂಪನಿ ತಿಳಿಸಿದೆ.
ರೆವ್ಲೊನ್ ಮಾಲೀಕ ರೊನ್ ಪೆರೆಲ್‌ಮನ್ ಅವರು ನ್ಯೂಯಾರ್ಕ್ ಕೋರ್ಟ್‌ನಲ್ಲಿ ರಕ್ಷಣೆ ನಿರೀಕ್ಷಿಸಿದ್ದಾರೆ. ಕೋರ್ಟ್ ದಾಖಲೆಗಳ ಪ್ರಕಾರ ಕಂಪನಿ ೩.೩೧ ಶತಕೋಟಿ ಡಾಲರ್ (೨೫,೮೧೮ ಕೋಟಿ ರೂ.) ಸುಸ್ತಿ ಸಾಲವನ್ನು ಹೊಂದಿದೆ.
90 ವರ್ಷಗಳಷ್ಟು ಹಳೆಯ ರೆವ್ಲೊನ್ ಕಂಪನಿ 1932ರ ಆರಂಭದಲ್ಲಿ ನೈಲ್ ಪಾಲೀಶ್‌ಗಳನ್ನು ಮಾರುತ್ತಿತ್ತು. 1955ರ ಬಳಿಕ ನಾನಾ ಬಗೆಯ ಲಿಪ್‌ಸ್ಟಿಕ್‌ಗಳನ್ನು ಮಾರಾಟ ಮಾಡಲಾರಂಭಿಸಿತ್ತು. ಇತ್ತೀಚಿನ ವರ್ಷಗಳಲ್ಲಿ ಹೊಸ ಬ್ರ್ಯಾಂಡ್‌ಗಳ ಪೈಪೋಟಿಯೂ ಇತ್ತು. ಪ್ರಸ್ತುತ 150 ರಾಷ್ಟ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಲಿಪ್ ಸ್ಟಿಕ್ ಉತ್ಪಾದನೆಯಲ್ಲಿ ಜಾಗತಿಕ ಮಟ್ಟದಲ್ಲಿ ರೆವ್ಲೊನ್ ಪ್ರಸಿದ್ಧಿ ಪಡೆದಿತ್ತು.