ನವ ದೆಹಲಿ: ಖಲಿಸ್ತಾನಿಗಳ ನಾಯಕ, ಬಂಧಿತ ಅಮೃತ್‌ಪಾಲ್ ಸಿಂಗ್‌ಗೆ (Amritpal Singh) ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಜತೆಗೆ ಇರುವ ಸಂಪರ್ಕಗಳ ಬಗ್ಗೆ ಕೇಂದ್ರ ತನಿಖಾ ಸಂಸ್ಥೆಗಳು ತಮ್ಮ ತನಿಖೆಯನ್ನು ಚುರುಕುಗೊಳಿಸಿವೆ. ಪಂಜಾಬ್‌ನ ಮೊಗಾ ಜಿಲ್ಲೆಯ ರೋಡ್ ಗ್ರಾಮದ ಗುರುದ್ವಾರದಿಂದ ಭಾನುವಾರ ಈತನನ್ನು ಪಂಜಾಬ್ ಪೊಲೀಸರು ಬಂಧಿಸಿದ್ದರು. ಇದೀಗ ಕೇಂದ್ರೀಯ ತನಿಖಾ ಸಂಸ್ಥೆಗಳು ಪಾಕಿಸ್ತಾನದ ಐಎಸ್‌ಐ ಅಮೃತ್‌ಪಾಲ್‌ಗೆ ಯಾವೆಲ್ಲ ರೀತಿಯಲ್ಲಿ ಬೆಂಬಲಿಸುತ್ತಿತ್ತು ಎಂಬುದನ್ನು ತಿಳಿದುಕೊಳ್ಳಲು ಮುಂದಾಗಿವೆ.
ಅಮೃತ್‌ಪಾಲ್ ಸಿಂಗ್ ಕಳೆದ ಭಾನುವಾರ ಪೊಲೀಸರ ಕೈಗೆ ಸಿಕ್ಕಿ ಬೀಳುವುದಕ್ಕೆ ಮುನ್ನ 36 ದಿನಗಳ ಕಾಲ ತಲೆ ಮರೆಸಿಕೊಂಡು ಓಡಾಡುತಿದ್ದ. ಪೊಲೀಸರು ಈತನ ಬೆನ್ನಿಗೆ ಬಿದ್ದಿದ್ದರು. ಭಾನುವಾರ ಬೆಳಗ್ಗೆ ಗ್ರಾಮದ ಗುರುದ್ವಾರಕ್ಕೆ ಸಿಂಗ್ ಬಂದಿದ್ದ. ಅಲ್ಲಿ ಪೊಲೀಸರಿಗೆ ಶರಣಾಗುವುದಾಗಿ ಕೆಲ ಭಕ್ತರಿಗೆ ತಿಳಿಸಿದ್ದ. ಈ ಗ್ರಾಮ ಭಿಂದ್ರನ್‌ವಾಲೆ ಜನ್ಮಸ್ಥಳ. ವಾರಿಸ್ ಪಂಜಾಬ್ ದೇ ಸಂಘಟನೆಯ ನಾಯಕನಾಗಿದ್ದ ಅಮೃತ್‌ಪಾಲ್ ಸಿಂಗ್, ಭಿಂದ್ರನ್‌ವಾಲೆಯ ಹುಟ್ಟೂರಿನಲ್ಲಿಯೇ ಅರೆಸ್ಟ್ ಆಗಿರುವುದನ್ನು ಗಮನಿಸಿದರೆ, ಆತ ಭಿಂದ್ರನ್ ವಾಲೆಯಂತೆ ತನ್ನನ್ನು ಬಿಂಬಿಸಿಕೊಳ್ಳಲು ಯತ್ನಿಸುತ್ತಿರುವುದನ್ನು ಗಮನಿಸಬಹುದು.
ಸರ್ಕಾರಿ ಮೂಲಗಳ ಪ್ರಕಾರ ಅಮೃತ್‌ಪಾಲ್ ಸಿಂಗ್‌ಗೆ ಪಾಕಿಸ್ತಾನದ ಐಎಸ್‌ಐ ಜತೆಗಿನ ನಂಟನ್ನು ಭೇದಿಸುವುದು, ಅದರ ಬಗ್ಗೆ ವಿಚಾರಿಸುವುದು ಕೇಂದ್ರೀಯ ತನಿಖಾ ಸಂಸ್ಥೆಗಳ ಆದ್ಯತೆಯಾಗಿದೆ. ದುಬೈನಿಂದ ಪಂಜಾಬ್‌ಗೆ ಆತ ಬರಲು ಐಎಸ್‌ಐ ನೆರವು ಪಡೆದಿರುವ ಬಗ್ಗೆ ತನಿಖೆ ನಡೆಯಲಿದೆ. ರಾಷ್ಟ್ರೀಯ ಭದ್ರತಾ ಕಾಯಿದೆ ಅಡಿಯಲ್ಲಿ (National security act ) ಅಡಿಯಲ್ಲಿ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದೆ. ಅಮೃತ್‌ಪಾಲ್ ಸಿಂಗ್ ತಲೆಮರೆಸಿಕೊಂಡು ಓಡಾಡಿದ್ದ 36 ದಿನಗಳಲ್ಲಿ ಬೇರೆ ಯಾರಾದರೂ ಆತನಿಗೆ ಸಹಾಯ ನೀಡಿದ್ದಾರೆಯೇ ಎಂಬುದರ ಬಗ್ಗೆಯೂ ಪೊಲೀಸರು ತನಿಖೆ ನಡೆಸಲಿದ್ದಾರೆ.
ಅಮೃತ್‌ಪಾಲ್‌ನನ್ನು ಕೊಲ್ಲಲು ಐಎಸ್‌ಐ ಯೋಜಿಸಿತ್ತೇ?
ಪಾಕ್ ಗುಪ್ತಚರ ಸಂಸ್ಥೆ ಐಎಸ್‌ಐನ ಸಂಪರ್ಕ ಗಳಿಸಿದ್ದ ಅಮೃತ್‌ಪಾಲ್ ಸಿಂಗ್‌ನನ್ನು ಕೊಲ್ಲಲೂ ಐಎಸ್‌ಐ ಯೋಜಿಸಿತ್ತು. ಯುಎಇನಲ್ಲಿ ಇದ್ದಾಗ ಐಎಸ್‌ಐ ಜತೆ ನಂಟು ಬೆಳೆಸಿದ್ದ. ಖಲಿಸ್ತಾನದ ಹೆಸರಿನಲ್ಲಿ ಪಂಜಾಬ್‌ನಲ್ಲಿ ಸಿಖ್ ಯುವಜನತೆಯನ್ನು ಎತ್ತಿಕಟ್ಟಲು ಅಮೃತ್ ಪಾಲ್ ಸಿಂಗ್‌ಗೆ ಐಎಸ್‌ಐ ಸಲಹೆ ನೀಡಿತ್ತು, ಹಣಕಾಸು ನೆರವು ನೀಡುವ ಭರವಸೆಯನ್ನೂ ಕೊಟ್ಟಿತ್ತು ಎಂದು ವರದಿಯಾಗಿದೆ.
ದುಬೈನಿಂದ ಕಳೆದ ವರ್ಷ ಪಂಜಾಬ್‌ಗೆ ಬಂದಿದ್ದ ಸಿಂಗ್:
ದುಬೈನಿಂದ ಕಳೆದ ವರ್ಷ ಹಿಂದಿರುಗಿದ್ದ ಅಮೃತ್‌ಪಾಲ್, ಪಾಕಿಸ್ತಾನದ ಐಎಸ್‌ಐ ಹಾಗೂ ಕೆನಡಾದಲ್ಲಿರುವ ಖಲಿಸ್ತಾನಿ ಭಯೋತ್ಪಾದಕರ ಸಂಪರ್ಕದಲ್ಲಿದ್ದಾನೆ. ಪಂಜಾಬ್‌ನಲ್ಲಿ ಯುವಕರ ಮನಸ್ಸು ಕೆಡಿಸಿ ಅವರನ್ನು ಆತ್ಮಹತ್ಯಾ ದಾಳಿಕೋರರಾಗುವಂತೆ ಪ್ರಚೋದಿಸುತ್ತಿದ್ದ. ಇದಕ್ಕಾಗಿ ತಯಾರಿಸಲಾಗಿದ್ದ ಶಸ್ತ್ರಾಸ್ತ್ರಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಯೂನಿಫಾರ್ಮ್‌ಗಳು ಹಾಗೂ ಜಾಕೆಟ್‌ಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಇವುಗಳ ಮೇಲೆ AKF ಎಂಬ ಮಾರ್ಕ್ ಹಾಕಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗಾದ ಗತಿಯೇ ಆಗಲಿದೆ ಎಂದು ಎಚ್ಚರಿಸಿದ್ದ ಹಿನ್ನೆಲೆಯಲ್ಲಿ, ಗಂಭೀರ ತನಿಖೆ ಆರಂಭವಾಗಿತ್ತು.