Site icon Vistara News

‌Amul : ನಂದಿನಿ ಜತೆ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ: ಅಮುಲ್‌ ಎಂಡಿ

milk

#image_title

ನವ ದೆಹಲಿ: ಕರ್ನಾಟಕದಲ್ಲಿ ಸಹಕಾರ ಕ್ಷೇತ್ರದ ಡೇರಿ ಬ್ರಾಂಡ್‌ ಆಗಿರುವ ನಂದಿನಿ ಜತೆಗೆ ‌ಅಮುಲ್ (Amul) ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಯೇನ್‌ ಮೆಹ್ತಾ ತಿಳಿಸಿದ್ದಾರೆ. ಹೇಗೆ ಗುಜರಾತ್‌ನಲ್ಲಿ ಅಮುಲ್‌ ಸಹಕಾರ ಕ್ಷೇತ್ರದ ರೈತರ ಸಂಸ್ಥೆಯಾಗಿದೆಯೋ, ಅದೇ ರೀತಿ ಕರ್ನಾಟಕದಲ್ಲಿ ಕರ್ನಾಟಕ ಮಿಲ್ಕ್‌ ಫೆಡರೇಷನ್‌ನ (KMF) ಬ್ರಾಂಡ್‌ ನಂದಿನಿಯಾಗಿದೆ.(milk production) ಈ ಎರಡು ಸಹಕಾರಿ ಬ್ರಾಂಡ್‌ಗಳ ನಡುವೆ ಸ್ಪರ್ಧೆಯ ಸಾಧ್ಯತೆಯೇ ಇಲ್ಲ ಎಂದು ಅವರು ಹೇಳಿದರು.

ಅಮುಲ್‌ ಎಂಡಿ ಜಯೇನ್‌ ಮೆಹ್ತಾ ಹೇಳಿದ್ದೇನು?

ಅಮುಲ್‌ ಸಂಸ್ಥೆಯು ಯಾವಾಗಲೂ ಕರ್ನಾಟಕದಲ್ಲಿ ಡೇರಿ ಅಭಿವೃದ್ಧಿಗೆ ಸಹಕಾರಿಯಾಗಿದೆ. ಅಮುಲ್‌ನ ತಾಜಾ ಹಾಲು ಮತ್ತು ಮೊಸರನ್ನು ಕೇವಲ ಇ-ಕಾಮರ್ಸ್‌ ಮತ್ತು ಕ್ವಿಕ್‌ ಕಾಮರ್ಸ್‌ ಮೂಲಕ ಮಾತ್ರ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಅದಕ್ಕೆ ಶೀಘ್ರ ಚಾಲನೆ ನೀಡಲಾಗುವುದು. ಬೆಂಗಳೂರಿನಲ್ಲಿರುವ ನಮ್ಮ ಪಾರ್ಲರ್‌ನಲ್ಲಿ ಕೂಡ ಅದನ್ನು ನಾವು ಮಾರಾಟ ಮಾಡುವುದಿಲ್ಲ ಎಂದು ಜಯೇನ್‌ ಮೆಹ್ತಾ ಹೇಳಿದ್ದಾರೆ.

ಅಮುಲ್‌ ಕರ್ನಾಟಕದಲ್ಲಿ ಹಲವು ವರ್ಷಗಳಿಂದ ಅಸ್ತಿತ್ವದಲ್ಲಿದೆ. ಅಮುಲ್‌ ಐಸ್‌ಕ್ರೀಮ್‌ ಅನ್ನು ಕೆಎಂಎಫ್‌ನ ಬೆಂಗಳೂರು ಘಟಕದಲ್ಲಿ ದಶಕದಿಂದ ತಯಾರಿಸಲಾಗುತ್ತಿದೆ. ಇದಕ್ಕಾಗಿ ಹಾಲನ್ನು ರಾಜ್ಯದ ರೈತರಿಂದ ಖರೀದಿಸಲಾಗುತ್ತಿದೆ. ಈ ಹಿಂದೆ ಕೆಎಂಎಫ್‌ನಿಂದ ಭಾರಿ ಪ್ರಮಾಣದಲ್ಲಿ ಚೀಸ್‌ ಅನ್ನೂ ಖರೀದಿಸಲಾಗುತ್ತಿತ್ತು. ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ 2015ರಿಂದ ಪ್ಯಾಕೇಟ್‌ ಹಾಲು ಮತ್ತು ತಾಜಾ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಹೀಗಾಗಿ ಅಮುಲ್‌ ಕರ್ನಾಟಕದಲ್ಲಿ ಡೇರಿ ಅಭಿವೃದ್ಧಿಗೆ ಪೂರಕವಾಗಿದೆ ಎಂದು ವಿವರಿಸಿದ್ದಾರೆ.

ವಿವಾದ ಆಗಿದ್ದು ಹೇಗೆ?

ಅಮುಲ್‌ ಕಳೆದ ಏಪ್ರಿಲ್‌ 5ರಂದು #LaunchAlert ಎಂಬ ಹ್ಯಾಷ್‌ ಟ್ಯಾಗ್‌ನ ಟ್ವೀಟ್‌ನಲ್ಲಿ ಬೆಂಗಳೂರಿಗೆ ಅಮುಲ್‌ ತಾಜಾ ಹಾಲು, ಮೊಸರನ್ನು ತರಲಿದೆ. ಹೆಚ್ಚಿನ ಮಾಹಿತಿ ಬರಲಿದೆ ಎಂದು ತಿಳಿಸಿತ್ತು. ಇದು ಕರ್ನಾಟಕದಲ್ಲಿ ಪ್ರತಿಪಕ್ಷಗಳು ಹಾಗೂ ಸ್ಥಳೀಯ ಕೆಲವರಿಂದ ತೀವ್ರ ವಿರೋಧಕ್ಕೆ ಗುರಿಯಾಗಿತ್ತು. ಪರ-ವಿರೋಧ ಚರ್ಚೆ, ಪ್ರತಿಭಟನೆಗೂ ಕಾರಣವಾಗಿತ್ತು. #saveNandini, #GobackAmul ಇತ್ಯಾದಿ ಹ್ಯಾಷ್‌ ಟ್ಯಾಗ್‌ ಸಹಿತ ಅಭಿಯಾನ ಶುರುವಾಗಿತ್ತು.

ನಂದಿನಿ ಬ್ರಾಂಡ್‌ನ ಹಾಲು ಮತ್ತು ಹಾಲಿನ ಉತ್ಪನ್ನ ಮಾರಾಟ ಮಾಡುವ ಕೆಎಂಎಫ್‌ ದೇಶದಲ್ಲಿ ಎರಡನೇ ಅತಿ ದೊಡ್ಡ ಸಹಕಾರಿ ಡೇರಿ ಸಂಸ್ಥೆಯಾಗಿದೆ. ಅಮುಲ್‌ ದೇಶದ ಅತಿ ದೊಡ್ಡ ಹಾಲಿನ ಬ್ರಾಂಡ್‌ ಆಗಿದೆ. ದೇಶಾದ್ಯಂತ 94 ಹಾಲಿನ ಸಂಸ್ಕರಣೆ ಘಟಕಗಳನ್ನು ಒಳಗೊಂಡಿದೆ.

Exit mobile version