ಜೈಪುರ : ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಕುಟುಂಬದಲ್ಲಿ ಈಗ ಸಂಭ್ರಮ. ಮುಕೇಶ್ ಅಂಬಾನಿಯ ಕಿರಿಯ ಪುತ್ರ ಅನಂತ್ ಅಂಬಾನಿ (೨೯) ಹಾಗೂ ಬಾಲ್ಯ ಸ್ನೇಹಿತೆ ರಾಧಿಕಾ ಮರ್ಚೆಂಟ್ (24) ಜತೆ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮ (Anant Ambani) ಗುರುವಾರ ನಡೆಯಿತು.
ರಾಜಸ್ಥಾನದ ನಾಥಡ್‌ವಾರಾದ ಶ್ರೀನಾಥ್‌ಜೀ ದೇವಾಲಯದಲ್ಲಿ ವಿವಾಹ ನಿಶ್ಚಿತಾರ್ಥ ನಡೆಯಿತು. ಈ ಸ್ಥಳ ಉದಯ್‌ಪುರದಿಂದ 48 ಕಿ.ಮೀ ದೂರದಲ್ಲಿದೆ.
ರಾಧಿಕಾ ಮರ್ಚೆಂಟ್ ಕುಟುಂಬದ ಮೂಲ ಗುಜರಾತ್‌ನ ಕಛ್. ಕುಟುಂಬವು ಮುಂಬಯಿಗೆ ಸ್ಥಳಾಂತರವಾಗಿತ್ತು. ಎನ್‌ಕೋರ್ ಹೆಲ್ತ್‌ಕೇರ್ ಸಿಇಒ ವೀರೇನ್ ಮರ್ಚೆಂಟ್ ಹಾಗೂ ಶೈಲಾ ಮರ್ಚೆಂಟ್ ದಂಪತಿಯ ಪುತ್ರಿ. ಅವರಿಗೆ ಅಂಜಲಿ ಮರ್ಚೆಂಟ್ ಎಂಬ ತಂಗಿ ಇದ್ದಾರೆ.
ಮುಂಬಯಿನ ಕೆಥಡ್ರಲ್ & ಜಾನ್ ಕ್ಯಾನನ್ ಸ್ಕೂಲ್‌ನಲ್ಲಿ ಶಾಲಾ ಶಿಕ್ಷಣ ಪಡೆದ ಬಳಿಕ ಅಮೆರಿಕದಲ್ಲಿ ಓದು ಮುಂದುವರಿಸಿದ್ದರು. ನ್ಯೂಯಾರ್ಕ್ ವಿಶ್ವವಿದ್ಯಾಲಯದಿಂದ ರಾಜಕೀಯ ಹಾಗೂ ಎಕನಾಮಿಕ್ಸ್‌ನಲ್ಲಿ ಪದವಿ ಗಳಿಸಿದ್ದಾರೆ. ಬಳಿಕ ಭಾರತಕ್ಕೆ ಮರಳಿ ಖಾಸಗಿ ಐಷಾರಾಮಿ ವಿಲ್ಲಾ ನೆಟ್ವರ್ಕ್ ಇಸ್ಟ್ರವಾದಲ್ಲಿ 2017ರಲ್ಲಿ ಸೇಲ್ಸ್ ಎಕ್ಸಿಕ್ಯುಟಿವ್ ಆಗಿ ವೃತ್ತಿ ಆರಂಭಿಸಿದ್ದರು. ಪ್ರಸ್ತುತ ಎನ್‌ಕೋರ್ ಹೆಲ್ತ್ ಕೇರ್‌ನ ನಿರ್ದೇಶಕಿಯಾಗಿದ್ದಾರೆ.
ರಾಧಿಕಾ ನೃತ್ಯ ಶಾಸ್ತ್ರದಲ್ಲೂ ನುರಿತ ಕಲಾವಿದೆ. ಎಂಟು ವರ್ಷಗಳ ಕಾಲ ಭರತ ನಾಟ್ಯ ಹಾಗೂ ನೃತ್ಯಾಭ್ಯಾಸ ನಡೆಸಿದ್ದಾರೆ. ಮುಂಬಯಿನ ಜಿಯೊ ವರ್ಲ್ಡ್ ಸೆಂಟರ್‌ನಲ್ಲಿ ಅವರ ಭರತ ನಾಟ್ಯ ರಂಗ ಪ್ರವೇಶ (ಅರಂಗೇಟ್ರಂ) ಆಯೋಜಿಸಲಾಗಿತ್ತು. ರಾಧಿಕಾ ಮತ್ತು ಅನಂತ್ ಬಾಲ್ಯದಿಂದಲೂ ಪರಿಚಯಸ್ಥರಾಗಿದ್ದರು. ಅನಂತ್ ಅಂಬಾನಿ ಈ ಹಿಂದೆ ಹಲವಾರು ಬಾರಿ ರಾಧಿಕಾ ಮರ್ಚೆಂಟ್ (24) ಜತೆ ಕಾಣಿಸಿಕೊಂಡಿದ್ದರು