Site icon Vistara News

Anil Ambani: ಅನಿಲ್‌ ಅಂಬಾನಿಗೆ ಸೆಬಿ ಶಾಕ್‌; 5 ವರ್ಷ ಸೆಕ್ಯೂರಿಟೀಸ್‌ ಮಾರುಕಟ್ಟೆಯಿಂದ ನಿಷೇಧ, 25 ಕೋಟಿ ರೂ. ದಂಡ

Anil Ambani

ಮುಂಬೈ: ಭಾರತದ ಖ್ಯಾತ ಉದ್ಯಮಿ ಅನಿಲ್‌ ಅಂಬಾನಿ (Anil Ambani) ಅವರಿಗೆ ಷೇರು ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿ (SEBI) ಬಹುದೊಡ್ಡ ಶಾಕ್‌ ನೀಡಿದೆ. ಅನಿಲ್‌ ಅಂಬಾನಿ ಮತ್ತು ಅವರಿಗೆ ಸೇರಿದ 24 ಘಟಕಗಳಿಗೆ ಭಾರೀ ಮೊತ್ತದ ದಂಡ ವಿಧಿಸಿದೆ. ಜತೆಗೆ ಐದು ವರ್ಷಗಳ ಕಾಲ ಸೆಕ್ಯೂರಿಟೀಸ್‌ ಮಾರುಕಟ್ಟೆ (ಷೇರುಪೇಟೆ)ಯಿಂದ ನಿಷೇಧ ಹೇರಿದೆ.

ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್‌ ಹೋಮ್‌ ಫೈನಾನ್ಸ್‌ (Reliance Home Finance Limited-RHFL) ಕಂಪನಿಯಿಂದ ಹಣವನ್ನು ಬೇರೆಡೆಗೆ ಅಕ್ರಮವಾಗಿ ವರ್ಗಾಯಿಸಿದ ಪ್ರಕರಣದಲ್ಲಿ ಸೆಬಿ ಈ ಮಹತ್ವದ ಆದೇಶ ನೀಡಿದೆ. ಅನಿಲ್‌ ಅಂಬಾನಿಗೆ 25 ಕೋಟಿ ರೂ. ದಂಡ ವಿಧಿಸಲಾಗಿದ್ದು, ಉಳಿದವರಿಗೂ ಭಾರೀ ಮೊತ್ತದ ದಂಡ ಹಾಕಲಾಗಿದೆ. ಕ್ರಮ ಎದುರಿಸಿದವರಲ್ಲಿ ರಿಲಯನ್ಸ್‌ ಹೋಮ್‌ನ ಮಾಜಿ ಅಧಿಕಾರಿಗಳೂ ಸೇರಿದ್ದಾರೆ.

ಸೆಬಿ ಹೇಳಿದ್ದೇನು?

ಅನಿಲ್‌ ಅಂಬಾನಿ 5 ವರ್ಷಗಳ ಕಾಲ ಸೆಕ್ಯುರಿಟೀಸ್ ಮಾರುಕಟ್ಟೆಯೊಂದಿಗೆ ಯಾವುದೇ ರೀತಿಯಲ್ಲಿ ಸಂಬಂಧ ಹೊಂದಬಾರದು ಎಂದು ಸೂಚಿಸಿರುವ ಸೆಬಿ, ಯಾವುದೇ ಪಟ್ಟಿ ಮಾಡಲಾದ ಕಂಪನಿಯ ನಿರ್ದೇಶಕ ಅಥವಾ ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿ ಹುದ್ದೆ ಹೊಂದುವುದಾಗಲಿ ಅಥವಾ ಸೆಬಿಯಲ್ಲಿ ನೋಂದಾಯಿಸಲಾದ ಯಾವುದೇ ಮಧ್ಯವರ್ತಿ ಜತೆ ಸಂಪರ್ಕ ಸಾಧಿಸುವುದಾಗಲಿ ಮಾಡಬಾರದು ಎಂದು ಹೇಳಿದೆ. ಜತೆಗೆ ರಿಲಯನ್ಸ್‌ ಹೋಮ್‌ ಫೈನಾನ್ಸ್‌ ಅನ್ನೂ ಸೆಕ್ಯೂರಿಟೀಸ್‌ ಮಾರುಕಟ್ಟೆಯಿಂದ 6 ತಿಂಗಳ ಕಾಲ ನಿರ್ಬಂಧಿಸಲಾಗಿದ್ದು, 6 ಲಕ್ಷ ರೂ. ದಂಡ ವಿಧಿಸಲಾಗಿದೆ. ಈ ಘಟಕಗಳು ಹಣವನ್ನು ದುರುಪಯೋಗಪಡಿಸಿಕೊಳ್ಳುವ ವಂಚನೆಯಲ್ಲಿ ಭಾಗಿಯಾಗಿವೆ. ಇದು ಸೆಕ್ಯುರಿಟೀಸ್ ಕಾನೂನುಗಳ ಉಲ್ಲಂಘನೆ ಮತ್ತು ಹೂಡಿಕೆದಾರರ ನಂಬಿಕೆಯ ಉಲ್ಲಂಘನೆಗೆ ಕಾರಣವಾಗುತ್ತದೆ ಎಂದು ಸೆಮಿ ತೀರ್ಮಾನಿಸಿ ಈ ನಿರ್ಧಾರ ಪ್ರಕಟಿಸಿದೆ.

222 ಪುಟಗಳ ಅಂತಿಮ ಆದೇಶದಲ್ಲಿ ಸೆಬಿಯು, ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿ ಸಹಾಯದಿಂದ ಅನಿಲ್ ಅಂಬಾನಿಯು ಆರ್‌ಎಚ್‌ಎಫ್‌ಎಲ್‌ನಿಂದ ಹಣವನ್ನು ಬೇರೆಡೆಗೆ ವರ್ಗಾಯಿಸುವ ವಂಚನೆಯ ಯೋಜನೆ ರೂಪಿಸಿದ್ದರು. ಸಾಲ ಎಂದು ಹೇಳಿ ಅವರು ತಮಗೆ ಸಂಬಂಧಿಸಿದ ಕಂಪನಿಗಳಿಗೆ ಹಣ ವರ್ಗಾಯಿಸಿಕೊಂಡಿದ್ದರು ಎಂದು ಹೇಳಿದೆ.

ಆರ್‌ಎಚ್‌ಎಫ್‌ಎಲ್‌ನ ನಿರ್ದೇಶಕರ ಮಂಡಳಿ ಸಾಲ ನೀಡುವ ಅಭ್ಯಾಸಗಳನ್ನು ತಕ್ಷಣವೇ ನಿಲ್ಲಿಸುವಂತೆ ಹೇಳಿದ್ದಲ್ಲದೆ, ಕಾರ್ಪೊರೇಟ್ ಸಾಲಗಳನ್ನು ನಿಯಮಿತವಾಗಿ ಪರಿಶೀಲನೆ ನಡೆಸುವಂತೆ ತಿಳಿಸಿತ್ತು. ಆದರೆ ಕಂಪನಿಯ ಆಡಳಿತ ಈ ಆದೇಶಗಳನ್ನೆಲ್ಲ ನಿರ್ಲಕ್ಷಿಸಿತ್ತು. ಇದಲ್ಲದೆ ರಿಲಯನ್ಸ್ ಯೂನಿಕಾರ್ನ್ ಎಂಟರ್‌ಪ್ರೈಸಸ್, ರಿಲಯನ್ಸ್ ಎಕ್ಸ್‌ಚೇಂಜ್ ನೆಕ್ಸ್ಟ್ ಲಿಮಿಟೆಡ್, ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಲಿಮಿಟೆಡ್, ರಿಲಯನ್ಸ್ ಕ್ಲೀನನ್ ಲಿಮಿಟೆಡ್, ರಿಲಯನ್ಸ್ ಬ್ಯುಸಿನೆಸ್ ಬ್ರಾಡ್‌ಕಾಸ್ಟ್ ನ್ಯೂಸ್ ಹೋಲ್ಡಿಂಗ್ಸ್ ಲಿಮಿಟೆಡ್ ಮತ್ತು ರಿಲಯನ್ಸ್ ಬಿಗ್ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಸೇರಿದಂತೆ 21 ಘಟಕಗಳಿಗೆ ತಲಾ 25 ಕೋಟಿ ರೂ. ದಂಡ ವಿಧಿಸಲಾಗಿದೆ.

ಇದನ್ನೂ ಓದಿ: SEBI: ಅದಾನಿ ವರದಿ: ಹಿಂಡನ್‌ಬರ್ಗ್‌ಗೆ ಸೆಬಿಯಿಂದ ಶೋಕಾಸ್ ನೋಟಿಸ್

2022ರ ಫೆಬ್ರವರಿಯಲ್ಲಿ ಸೆಬಿ ಮಧ್ಯಂತರ ಆದೇಶವನ್ನು ಹೊರಡಿಸಿ ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್, ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಮತ್ತು ಅಮಿತ್ ಬಾಪ್ನಾ, ರವೀಂದ್ರ ಸುಧಾಕರ್ ಮತ್ತು ಪಿಂಕೇಶ್ ಆರ್. ಶಾ ಅವರನ್ನು ಮುಂದಿನ ಆದೇಶದವರೆಗೆ ಸೆಕ್ಯುರಿಟೀಸ್ ಮಾರುಕಟ್ಟೆಯಿಂದ ನಿರ್ಬಂಧಿಸಿತ್ತು. ಇದೀಗ ಇದೀಗ ಅಂತಿಮ ಆದೇಶ ಹೊರಡಿಸಿದೆ.

Exit mobile version