Site icon Vistara News

Repo rate | ಆರ್‌ಬಿಐನಿಂದ ಮತ್ತೆ 0.35% ಬಡ್ಡಿ ದರ ಏರಿಕೆ ಸಂಭವ, ಸಾಲದ ಇಎಂಐ ಹೆಚ್ಚಳ ಸನ್ನಿಹಿತ

repo rate

ಮುಂಬಯಿ: ಭಾರತದ ಗ್ರಾಹಕ ದರ ಆಧರಿತ ಹಣದುಬ್ಬರ (CPI Inflation) ಕಳೆದ ಅಕ್ಟೋಬರ್‌ನಲ್ಲಿ 6.77%ಕ್ಕೆ ಇಳಿಕೆಯಾಗಿದೆ. ಇದು ಮೂರು ತಿಂಗಳಿನಲ್ಲಿ ಕನಿಷ್ಠ ಮಟ್ಟವಾದರೂ, ಆರ್‌ಬಿಐನ ಸುರಕ್ಷತಾ ಮಟ್ಟಕ್ಕೆ ( ೪% ಗಿಂತ ಎರಡು ಪರ್ಸೆಂಟ್‌ ಹೆಚ್ಚು ಅಥವಾ ಕಡಿಮೆ ಇರಬಹುದು) ಇನ್ನೂ ಇಳಿದಿಲ್ಲ. ಹೀಗಾಗಿ ಡಿಸೆಂಬರ್‌ 7ರಂದು ಆರ್‌ಬಿಐನ ಮುಂದಿನ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ರೆಪೊ ದರ ಏರಿಕೆಯಾಗುವ ನಿರೀಕ್ಷೆ ಇದೆ.

ಆರ್‌ಬಿಐ ಈ ಹಿಂದೆ ಮೂರು ಸಲ ತನ್ನ ಹಣಕಾಸು ನೀತಿ ಪರಾಮರ್ಶೆಯ ಸಂದರ್ಭ, 0.50% ರ ಮಟ್ಟದಲ್ಲಿ ರೆಪೊ ದರವನ್ನು ಏರಿಸಿತ್ತು. ಹಣದುಬ್ಬರವನ್ನು ನಿಯಂತ್ರಿಸಲು ಕಳೆದ ಮೇನಿಂದ ಆರ್‌ಬಿಐ ಇದುವರೆಗೆ 1.90% ಬಡ್ಡಿ ದರ ಏರಿಸಿದೆ. ರೆಪೊ ದರ ಎಂದರೆ ಬ್ಯಾಂಕ್‌ಗಳು ಸಾಲ ವಿತರಣೆ ಸಲುವಾಗಿ ಆರ್‌ಬಿಐನಿಂದ ಪಡೆಯುವ ಫಂಡ್‌ ಅಥವಾ ಹಣಕ್ಕೆ ನೀಡುವ ಬಡ್ಡಿ ದರ.

ಸಗಟು ಮತ್ತು ರಿಟೇಲ್‌ ಹಣದುಬ್ಬರವು ಕಳೆದ ಅಕ್ಟೋಬರ್‌ನಿಂದ ಇಳಿಕೆಯ ಹಾದಿಯಲ್ಲಿದೆ. ಹೀಗಿದ್ದರೂ, ಇನ್ನೂ ಆರ್‌ಬಿಐನ ಸುರಕ್ಷತಾ ಮಟ್ಟಕ್ಕೆ ಇಳಿಯದಿರುವುದರಿಂದ ಬಡ್ಡಿ ದರ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆ ಇದೆ ಎಂದು ಕೋಟಕ್‌ ಇನ್‌ಸ್ಟಿಟ್ಯೂಷನಲ್‌ ಈಕ್ವಿಟೀಸ್‌ನ ಹಿರಿಯ ಆರ್ಥಿಕ ತಜ್ಞ ಸುಯುದೀಪ್‌ ರಕ್ಷಿತ್‌ ತಿಳಿಸಿದ್ದಾರೆ.

ಆರ್‌ಬಿಐ ತನ್ನ ರೆಪೊ ದರವನ್ನು ಏರಿಸಿದರೆ ಹಣದುಬ್ಬರ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ. ಆದರೆ ಇದೇ ವೇಳೆ ರೆಪೊ ದರ ಆಧರಿತ ಗೃಹ ಸಾಲ, ವಾಹನ ಸಾಲ, ಕಾರ್ಪೊರೇಟ್‌ ಸಾಲಗಳ ಬಡ್ಡಿ ದರಗಳೂ ಏರಿಕೆಯಾಗುತ್ತವೆ. ಸಾಲಗಳ ಇಎಂಐ ಸಂಖ್ಯೆ ಹೆಚ್ಚುತ್ತದೆ. ಇದೇ ವೇಳೆ ಠೇವಣಿದಾರರಿಗೆ ಎಫ್‌ಡಿ ಬಡ್ಡಿ ದರದಲ್ಲಿ ಅಲ್ಪ ಏರಿಕೆ ನಿರೀಕ್ಷಿಸಲಾಗಿದೆ.

Exit mobile version