ಮುಂಬಯಿ: ರಿಸರ್ವ್ ಬ್ಯಾಂಕ್ ಜೂನ್ 8ಕ್ಕೆ ಮತ್ತೊಮ್ಮೆ ಬಡ್ಡಿ ದರದಲ್ಲಿ 0.40% ಏರಿಕೆ ಮಾಡುವ ಸಾಧ್ಯತೆ ಇದೆ. ಇದರ ಪರಿಣಾಮ ಗೃಹ ಸಾಲ, ವಾಹನ ಸಾಲ, ಕಾರ್ಪೊರೇಟ್ ಸಾಲಗಳ ಬಡ್ಡಿ ದರಗಳೂ ಹೆಚ್ಚಳವಾಗಲಿದೆ. ಇಎಂಐ ವೃದ್ಧಿಸಲಿದ್ದು, ಸಾಲಗಾರಿರಿಗೆ ಹೊರೆಯಾಗಲಿದೆ. ಆದರೆ ಹಣದುಬ್ಬರ ತಗ್ಗಿಸಲು ತುರ್ತು ಕ್ರಮವಾಗಿ ಆರ್ ಬಿಐ ಬಡ್ಡಿ ದರ ಏರಿಕೆಯ ಮಾರ್ಗ ಬಳಸಿದೆ.
ಮುಂದಿನ ವಾರ ಆರ್‌ಬಿಐನ ಹಣಕಾಸು ನೀತಿ ಪರಾಮರ್ಶೆ ಸಭೆ ನಡೆಯಲಿದೆ. ಇದಲ್ಲದೆ ಮುಂಬರುವ ಆಗಸ್ಟ್‌ನಲ್ಲಿ ಮತ್ತೆ ಬಡ್ಡಿದರ 0.35% ಹೆಚ್ಚಳವಾಗಲಿದೆ ಎಂದು ತಜ್ಞರು ಹೇಳಿದ್ದಾರೆ. ಈ ಮೂರು ಹಂತಗಳ ಏರಿಕೆಯೊಂದಿಗೆ ಒಟ್ಟು 0.75% ವೃದ್ಧಿಸಲಿದೆ ಎಂದು ಬ್ಯಾಂಕ್ ಆಫ್ ಅಮೇರಿಕಾ ಸೆಕ್ಯುರಿಟೀಸ್ ಸಂಸ್ಥೆಯ ವರದಿ ತಿಳಿಸಿದೆ.
ಆರ್‌ಬಿಐ ಕಳೆದ ಮೇ 4ರಂದು ಬಡ್ಡಿ ದರದಲ್ಲಿ 0.40 % ಏರಿಸಿತ್ತು. ಹಣದುಬ್ಬರವನ್ನು ನಿಯಂತ್ರಿಸಲು ಬಡ್ಡಿ ದರ ಕಡಿತ ಅನಿವಾರ್ಯ ಎಂದು ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದರು. ಆರ್ ಬಿಐ ಪ್ರಕಾರ ಹಣದುಬ್ಬರ ಶೇ.6 ದಾಟುವಂತಿಲ್ಲ. ಆದರೆ ರಿಟೇಲ್ ಮತ್ತು ಸಗಟು ಹಣದುಬ್ಬರ ಈಗಾಗಲೇ ಆರ್‌ಬಿಐ ನಿಗದಿಪಡಿಸಿರುವ ಸುರಕ್ಷತಾ ಮಟ್ಟವನ್ನು ಮೀರಿವೆ. ಕಳೆದ ಮೇನಲ್ಲಿ ರಿಟೇಲ್ ಹಣದುಬ್ಬರ 7.1% ದಾಟಿತ್ತು.
ಬೆಲೆ ಏರಿಕೆಯನ್ನು ನಿಯಂತ್ರಿಸಲು ಸರಕಾರ ಪೆಟ್ರೋಲ್-ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದೆ. ಆಮದು ಸುಂಕವನ್ನೂ ಕಡಿತಗೊಳಿಸಿದೆ. ಕೆಲ ವಸ್ತುಗಳ ರಫ್ತಿಗೆ ನಿರ್ಬಂಧಿಸಿದೆ. ಹೀಗಿದ್ದರೂ, ಹಣದುಬ್ಬರ ಭಾರಿ ಸವಾಲಾಗಿ ಪರಿಣಮಿಸಿದೆ.