ನವ ದೆಹಲಿ: ಆ್ಯಪಲ್ ಸಿಇಒ ಟಿಮ್ ಕುಕ್ (Apple CEO Tim cook) ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಬುಧವಾರ ಭೇಟಿಯಾಗಿದ್ದಾರೆ. ಹಾಗೂ ಭಾರತದ ನಾನಾ ಕಡೆಗಳಲ್ಲಿ ಹೂಡಿಕೆಯನ್ನು ಹೆಚ್ಚಿಸಲು ಹಾಗೂ ವಹಿವಾಟು ವೃದ್ಧಿಸಲು ಕಂಪನಿ ಬದ್ಧವಿದೆ ಎಂದು ತಿಳಿಸಿದ್ದಾರೆ.
ನಮಗೆ ಆತ್ಮೀಯ ಸ್ವಾಗತ ಮತ್ತು ಆತಿಥ್ಯ ನೀಡಿರುವುದಕ್ಕೆ ಧನ್ಯವಾದಗಳು ಪ್ರಧಾನಿ ನರೇಂದ್ರ ಮೋದಿಯವರೇ, ನಿಮ್ಮ ಸಕಾರಾತ್ಮಕ ದೃಷ್ಟಿಕೋನದಿಂದ ತಂತ್ರಜ್ಞಾನ ಉದ್ಯಮದ ಮೇಲೆ ಉತ್ತಮ ಪರಿಣಾಮ ಉಂಟಾಗಿದೆ. ಭವಿಷ್ಯದ ದಿನಗಳಲ್ಲಿ ಶಿಕ್ಷಣದಿಂದ ಉತ್ಪಾದನೆ, ಪರಿಸರದ ತನಕ ಎಲ್ಲ ವಲಯಗಳಲ್ಲಿ ತಂತ್ರಜ್ಞಾನದ ಆವಿಷ್ಕಾರಗಳ ಪ್ರಯೋಜನಗಳು ದೊರೆಯಲಿವೆ. ದೇಶದ ನಾನಾ ಕಡೆಗಳಲ್ಲಿ ಹೂಡಿಕೆ ಮಾಡಲು ನಾವು ಸಿದ್ಧರಿದ್ದೇವೆ ಎಂದು ಟಿಮ್ ಕುಕ್ ಟ್ವೀಟ್ ಮಾಡಿದ್ದಾರೆ.
ಮುಂಬಯಿನಲ್ಲಿ ಆ್ಯಪಲ್ ಕಂಪನಿಯ ಮೊದಲ ರಿಟೇಲ್ ಸ್ಟೋರ್ ತೆರೆದ ಬಳಿಕ ದಿಲ್ಲಿಯಲ್ಲಿ ಎರಡನೇ ಮಳಿಗೆಗೆ ಟಿಮ್ ಕುಕ್ ಅವರು ಚಾಲನೆ ನೀಡಲಿದ್ದಾರೆ. 2016ರಲ್ಲಿ ಭಾರತಕ್ಕೆ ಬಂದಿದ್ದ ಟಿಮ್ ಕುಕ್ ಅವರಿಗೆ ಇದು ಎರಡನೇ ಭೇಟಿಯಾಗಿದೆ.
ಭಾರತದಲ್ಲಿ ಆ್ಯಪಲ್‌ನ ಯಾತ್ರೆ:
ಭಾರತದಲ್ಲಿ ಆ್ಯಪಲ್ ಕಂಪನಿ ತನ್ನ ಐಫೋನ್‌ಗಳ ( Apple iPhone) ಮಾರಾಟವನ್ನು ಶುರು ಮಾಡಿ 15 ವರ್ಷಗಳ ಬಳಿಕ ಮೊದಲ ರಿಟೇಲ್ ಸ್ಟೋರ್ ಅನ್ನು ಮುಂಬಯಿನಲ್ಲಿ ತೆರೆದಿದೆ. ವಿಶ್ವದ ಎರಡನೇ ಅತಿ ದೊಡ್ಡ ಸ್ಮಾರ್ಟ್‌ಫೋನ್ ಮಾರುಕಟ್ಟೆಯಾಗಿರುವ ಭಾರತದಲ್ಲಿ ಆ್ಯಪಲ್ ಹಲವಾರು ಬಿಸಿನೆಸ್ ಸವಾಲುಗಳನ್ನು ಎದುರಿಸಿತ್ತು. ಅಮೆರಿಕ ಮೂಲದ ಆ್ಯಪಲ್ ಕಂಪನಿ, ಭಾರತದಲ್ಲಿ ತನ್ನ ಗುತ್ತಿಗೆ ಆಧಾರಿತ ಉತ್ಪಾದಕರ ಮೂಲಕ ಐಫೋನ್‌ಗಳ ಉತ್ಪಾದನೆಯನ್ನು ಹೆಚ್ಚಿಸಿದೆ. ಈ ಒಂದೂವರೆ ದಶಕದ ಪಯಣದ ಪ್ರಮುಖ ಘಟ್ಟಗಳ ವಿವರ ಇಲ್ಲಿದೆ.
ಆಗಸ್ಟ್ 2008 : ಭಾರತದಲ್ಲಿ ಐಫೋನ್ 3ಜಿ (iPhone 3G) ಸ್ಮಾರ್ಟ್‌ಫೋನ್ ಅನ್ನು 2008ರಲ್ಲಿ ಮೊದಲ ಬಾರಿಗೆ ಬಿಡುಗಡೆ ಮಾಡಲಾಯಿತು. ಅಮೆರಿಕ, ಯುರೋಪ್ ಮತ್ತು ಏಷ್ಯಾದ ಇತರ ಕಡೆಗಳಲ್ಲಿ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದ್ದ ಐಫೋನ್ ಭಾರತವನ್ನೂ ಪ್ರವೇಶಿಸಿತು.
ಜನವರಿ 2016: ಆ್ಯಪಲ್ ಕಂಪನಿ ತನ್ನದೇ ಮಳಿಗೆಗಳನ್ನು ಭಾರತದಲ್ಲಿ ತೆರೆಯಲು ಸರಕಾರಕ್ಕೆ ಅರ್ಜಿ ಸಲ್ಲಿಸಿತು.
ಮೇ 2016: ಆ್ಯಪಲ್ ಮುಖ್ಯಸ್ಥ ಟಿಮ್ ಕುಕ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೊದಲ ಬಾರಿಗೆ ದಿಲ್ಲಿಯಲ್ಲಿ ಭೇಟಿಯಾದರು. ಕಂಪನಿಯು ದೇಶದಲ್ಲಿ ತನ್ನ ವಹಿವಾಟು ವಿಸ್ತರಿಸಲು ಬಯಸುತ್ತಿದೆ ಎಂದು ತಿಳಿಸಿದರು.
ಜೂನ್ 2016 : ಭಾರತವು ವಿದೇಶಿ ರಿಟೇಲರ್‌ಗಳಿಗೆ ತನ್ನ ಹೂಡಿಕೆಯ ನಿಯಮಾವಳಿಗಳನ್ನು ಸಡಿಲಗೊಳಿಸಿತು. ಆ್ಯಪಲ್, ಐಕಿಯ ಇತ್ಯಾದಿ ಕಂಪನಿಗಳಿಗೆ ಭಾರತದಲ್ಲಿ ನೇರವಾಗಿ ತಮ್ಮ ಮಳಿಗೆಗಳನ್ನು ತೆರೆಯಲು ಹಾದಿ ಸುಗಮವಾಯಿತು.
ಮೇ 2017 : ಆ್ಯಪಲ್ ತನ್ನ ಗುತ್ತಿಗೆದಾರ ಉತ್ಪಾದಕ ಕಂಪನಿಗಳಾದ ವಿಸ್ಟ್ರಾನ್ ಜತೆಗೆ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಐಫೋನ್ ಎಸ್‌ಇ ಮಾದರಿಯ ಸ್ಥಳೀಯ ಘಟಕವನ್ನು ಆರಂಭಿಸಲು ಕಾರ್ಯಪ್ರವೃತ್ತವಾಯಿತು.
ಸೆಪ್ಟೆಂಬರ್ 2020: ಆ್ಯಪಲ್ ಮೊದಲ ಬಾರಿಗೆ ತನ್ನ ಆನ್‌ಲೈನ್ ಸ್ಟೋರ್ ಅನ್ನು ಆರಂಭಿಸಿತು.
ಅಕ್ಟೋಬರ್ 2020: ದೇಶೀಯವಾಗಿ ಉತ್ಪಾದನೆ ಹೆಚ್ಚಿಸಲು 16 ಕಂಪನಿಗಳಿಗೆ ಇನ್ಸೆಂಟಿವ್ ಯೋಜನೆಯನ್ನು (ಪಿಎಲ್‌ಐ) ಕೇಂದ್ರ ಸರ್ಕಾರ ಅನುಮೋದಿಸಿತು. ಇದರಲ್ಲಿ ಆ್ಯಪಲ್ ಗುತ್ತಿದಾರ ಕಂಪನಿಗಳೂ ಇದ್ದವು.
ಡಿಸೆಂಬರ್ 2020: ವೇತನ ಪರಿಷ್ಕರಣೆಗೆ ಒತ್ತಾಯಿಸಿ ಕೋಲಾರದಲ್ಲಿರುವ ಆ್ಯಪಲ್ ಗುತ್ತಿಗೆದಾರ ಕಂಪನಿ ವಿಸ್ಟ್ರಾನ್‌ನಲ್ಲಿ ಗುತ್ತಿಗೆ ಆಧಾರಿತ ನೌಕರರ ಹಿಂಸಾತ್ಮಕ ಪ್ರತಿಭಟನೆ.
ಡಿಸೆಂಬರ್ 2021 : ತಮಿಳುನಾಡಿನಲಿ ಫಾಕ್ಸ್‌ಕಾನ್ ಘಟಕದಲ್ಲಿ ಪ್ರತಿಭಟನೆ, ಮೂರು ವಾರಗಳ ಕಾಲ ಘಟಕ ಬಂದ್.
ಡಿಸೆಂಬರ್ 2021 : ಆ್ಯಪಲ್‌ನ ಇನ್-ಆ್ಯಪ್ ಫೀ ಸಿಸ್ಟಮ್ ಬಗ್ಗೆ ಸ್ಪರ್ಧಾತ್ಮಕ ಆಯೋಗದಿಂದ ತನಿಖೆ.
ಸೆಪ್ಟೆಂಬರ್ 2022: ಆ್ಯಪಲ್ ಪೂರೈಕೆದಾರ ಪೆಗಟ್ರೋನ್‌ನಿಂದ ತಮಿಳುನಾಡಿನಲ್ಲಿ ತನ್ನ ಮೊದಲ ಘಟಕ ಉದ್ಘಾಟನೆ.
ಫೆಬ್ರವರಿ 2023: ಆಂಧ್ರಪ್ರದೇಶದಲ್ಲಿ ಆ್ಯಪಲ್ ಪೂರೈಕೆದಾರ, ಐಫೋನ್ ಚಾರ್ಜರ್ ತಯಾರಕ ಫಾಕ್ಸ್ ಲಿಂಕ್ ಘಟಕದಲ್ಲಿ ಅಗ್ನಿ ಅವಘಡ.
ಏಪ್ರಿಲ್ 2023: ಮುಂಬಯಿನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಜಿಯೊ ವರ್ಲ್ಡ್ ಡ್ರೈವ್ ಮಾಲ್‌ನ ಒಳಗೆ ಆ್ಯಪಲ್‌ನ ಮೊದಲ ರಿಟೇಲ್ ಸ್ಟೋರ್ (ಆ್ಯಪಲ್ ಬಿಕೆಸಿ) ಆರಂಭ.