ನವ ದೆಹಲಿ: ಬೆಂಗಳೂರಿನಲ್ಲಿ ಆ್ಯಪಲ್-ಫಾಕ್ಸ್‌ಕಾನ್ (Apple- Foxconn plant) ಘಟಕ ಅಸ್ತಿತ್ವಕ್ಕೆ ಬರಲಿದೆ ಎಂದು ಇತ್ತೀಚೆಗೆ ಘೋಷಣೆಯಾಗಿದೆ. 300 ಎಕರೆ ಸ್ಥಳದಲ್ಲಿ ಈ ಘಟಕ ನಿರ್ಮಾಣವಾಗಲಿದೆ. ಈ ಬಗ್ಗೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ, ಕೌಶಲಾಭಿವೃದ್ಧಿ ಇಲಾಖೆಯ ಸಹಾಯಕ ಸಚಿವರಾದ ರಾಜೀವ್ ಚಂದ್ರಶೇಖರ್ ಅವರು ಹೆಚ್ಚಿನ ವಿವರಗಳನ್ನು ನೀಡಿದ್ದಾರೆ.
ಆ್ಯಪಲ್-ಫಾಕ್ಸ್‌ಕಾನ್ ಘಟಕವು ಕರ್ನಾಟಕದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಉಂಟಾಗಿರುವ ಬೆಳವಣಿಗೆಯನ್ನು ಬಿಂಬಿಸಿದೆ. ಕೋವಿಡ್ ಬಿಕ್ಕಟ್ಟಿನ ಬಳಿಕ ಜಾಗತಿಕ ಮಟ್ಟದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆಯ ವಲಯ ಹೊಸ ಸಮೀಕರಣವನ್ನು ಪಡೆಯುತ್ತಿದೆ. ಇದರ ಪರಿಣಾಮ ಭಾರತವು ಕೇವಲ ವಿನ್ಯಾಸ ಮಾತ್ರವಲ್ಲದೆ ಉತ್ಪಾದನೆಯಲ್ಲಿ ಕೂಡ ಮುಂಚೂಣಿಗೆ ಬರುತ್ತಿದೆ ಎಂದು ನಾಸ್ಕಾಮ್‌ನ ಕಾರ್ಯಕ್ರಮದಲ್ಲಿ ಚಂದ್ರಶೇಖರ್ ತಿಳಿಸಿದ್ದಾರೆ.
ನೂತನ ಘಟಕದಿಂದ ರಾಜ್ಯದಲ್ಲಿ ಇಡೀ ಎಲೆಕ್ಟ್ರಾನಿಕ್ಸ್ ಉದ್ದಿಮೆಗೆ ಸಹಾಯಕವಾಗಲಿದೆ. ಡೀಪ್ ಟೆಕ್ ಸಿಸ್ಟಮ್ (deep-tech ecosystem) ಸುಧಾರಿಸಲಿದೆ. ಯುವಜನತೆಗೆ ಅನುಕೂಲವಾಗಲಿದೆ. ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಕೌಶಲಾಭಿವೃದ್ಧಿಗೆ 8,000 ಕೋಟಿ ರೂ. ಅನುದಾನ ನಿಗದಿಪಡಿಸಿದೆ. ಕರ್ನಾಟಕ ಒಂದರಲ್ಲಿಯೇ 18-20 ಲಕ್ಷ ಮಂದಿಗೆ ಮುಂದಿನ ಮೂರು ವರ್ಷದಲ್ಲಿ ಕೌಶಲ ಅಭಿವೃದ್ಧಿಗೆ ಸಹಕರಿಸಲಿದ್ದು, ಉದ್ಯೋಗ ಸಿಗಲು ಹಾದಿ ಸುಗಮವಾಗಲಿದೆ ಎಂದು ವಿವರಿಸಿದರು.