ನವ ದೆಹಲಿ: ಆ್ಯಪಲ್ ಇಂಡಿಯಾ ಭಾರತದಲ್ಲಿ ಮುಂಬಯಿ ಮತ್ತು ದಿಲ್ಲಿಯಲ್ಲಿ ಎರಡು ತನ್ನದೇ ಸ್ಟೋರ್‌ಗಳನ್ನು ಹೊಂದಿದೆ. ಇವೆರಡೂ ಮಳಿಗೆಗಳು ಕಂಪನಿಗೆ ಭರ್ಜರಿ ಆದಾಯವನ್ನು ತಂದುಕೊಡುತ್ತಿದ್ದು, ಈ ಪ್ಲಾನ್ ಯಶಸ್ವಿಯಾಗಿದೆ ಎಂದು ವರದಿಯಾಗಿದೆ. (Apple India) ಆ್ಯಪಲ್ ಇಂಡಿಯಾ ತನ್ನ ಎರಡೂ ಸ್ಟೋರ್‌ಗಳಲ್ಲಿ ತಲಾ 25 ಕೋಟಿ ರೂ. ಆದಾಯವನ್ನು ಪ್ರತಿ ತಿಂಗಳೂ ಗಳಿಸುತ್ತಿದೆ.
ಆ್ಯಪಲ್ ಇಂಡಿಯಾ ಕಳೆದ ಏಪ್ರಿಲ್ 8ರಂದು ಮುಂಬಯಿನಲ್ಲಿ ತನ್ನ ಮಳಿಗೆಯನ್ನು ತೆರೆದಿತ್ತು. ಎರಡು ದಿನಗಳ ಬಳಿಕ ದಿಲ್ಲಿಯಲ್ಲಿ ಎರಡನೇ ಮಳಿಗೆ ಆರಂಭವಾಗಿತ್ತು. ಕಂಪನಿಯ ಸಿಇಒ ಟಿಮ್ ಕುಕ್ ಎರಡೂ ಸ್ಟೋರ್‌ಗಳನ್ನು ಉದ್ಘಾಟಿಸಲು ಆಗಮಿಸಿದ್ದರು. ಎರಡೂ ಮಳಿಗೆಗಳಿಗೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇದರ ಪರಿಣಾಮ ಆದಾಯವೂ ವೃದ್ಧಿಸಿದೆ.
ಭಾರತದಲ್ಲಿ ಆ್ಯಪಲ್ ಕಂಪನಿ ತನ್ನ ಐಫೋನ್‌ಗಳ ( Apple iPhone) ಮಾರಾಟವನ್ನು ಶುರು ಮಾಡಿ 15 ವರ್ಷಗಳ ಬಳಿಕ ಮೊದಲ ರಿಟೇಲ್ ಸ್ಟೋರ್ ಅನ್ನು ಮುಂಬಯಿನಲ್ಲಿ ತೆರೆದಿತ್ತು. ವಿಶ್ವದ ಎರಡನೇ ಅತಿ ದೊಡ್ಡ ಸ್ಮಾರ್ಟ್‌ಫೋನ್ ಮಾರುಕಟ್ಟೆಯಾಗಿರುವ ಭಾರತದಲ್ಲಿ ಆ್ಯಪಲ್ ಹಲವಾರು ಬಿಸಿನೆಸ್ ಸವಾಲುಗಳನ್ನು ಎದುರಿಸಿತ್ತು. ಅಮೆರಿಕ ಮೂಲದ ಆ್ಯಪಲ್ ಕಂಪನಿ, ಭಾರತದಲ್ಲಿ ತನ್ನ ಗುತ್ತಿಗೆ ಆಧಾರಿತ ಉತ್ಪಾದಕರ ಮೂಲಕ ಐಫೋನ್‌ಗಳ ಉತ್ಪಾದನೆಯನ್ನು ಹೆಚ್ಚಿಸಿದೆ.
We’re excited to make available an all-new Pride Edition Apple Watch band, which helps incredible organizations around the world that support the LGBTQ+ community. pic.twitter.com/oi5ADcYrgv
— Tim Cook (@tim_cook) May 23, 2023
ಆ್ಯಪಲ್ ಕಂಪನಿಯ ಐಫೋನ್ ಉತ್ಪಾದನೆಯ ಪ್ರಮುಖ ಗುತ್ತಿಗೆದಾರ ಕಂಪನಿ ಫಾಕ್ಸ್‌ಕಾನ್ ಬೆಂಗಳೂರಿನ ಹೊರ ವಲಯದಲ್ಲಿ 1.3 ಕೋಟಿ ಚದರ ಅಡಿ ಭೂಮಿಯನ್ನು ಖರೀದಿಸಿದೆ. ಚೀನಾದಿಂದ ಹೊರಗೆ ಉತ್ಪಾದನೆಯನ್ನು ಹೆಚ್ಚಿಸುವ ಉದ್ದೇಶ ಹೊಂದಿರುವುದಾಗಿ ತೈವಾನ್ ಮೂಲದ ಫಾಕ್ಸ್‌ಕಾನ್ ತಿಳಿಸಿದೆ. ( iPhone production ) ತೈವಾನ್ ಮೂಲದ ಎಲೆಕ್ಟ್ರಾನಿಕ್ಸ್ ದಿಗ್ಗಜ ಫಾಕ್ಸ್‌ಕಾನ್ (Foxconn), ಬೆಂಗಳೂರಿನ ದೇವನಹಳ್ಳಿಯಲ್ಲಿ 1.3 ಚದರ ಅಡಿ ( 13 million square foot) ಜಾಗವನ್ನು ಖರೀದಿಸಿದೆ.
ಚೀನಾದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಠಿಣ ಕೋವಿಡ್ ನಿಯಮಾವಳಿಗಳು ಜಾರಿಯಾಗಿರುವುದರಿಂದ ಹಾಗೂ ಚೀನಾ-ಅಮೆರಿಕ ನಡುವಣ ರಾಜತಾಂತ್ರಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಆ್ಯಪಲ್ ಕಂಪನಿಯು ಚೀನಾದಿಂದ ಹೊರಗೆ ಉತ್ಪಾದನೆಯನ್ನು ಹೆಚ್ಚಿಸಲು ಉದ್ದೇಶಿಸಿದೆ. ದೇವನಹಳ್ಳಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಇದೆ.
ಫಾಕ್ಸ್‌ಕಾನ್ ಕಂಪನಿಯು ಭೂಮಿ ಖರೀದಿಸುವ ಸಲುವಾಗಿ ತನ್ನ ಅಧೀನ ಸಂಸ್ಥೆಯಾಗಿರುವ ಫಾಕ್ಸ್‌ಕಾನ್ ಹೋನ್ ಹೈ ಟೆಕ್ನಾಲಜಿಗೆ (Foxconn Honn Hai Technology India) 303 ಕೋಟಿ ರೂ.ಗಳನ್ನು ನೀಡಿತ್ತು. ಫಾಕ್ಸ್‌ಕಾನ್‌ನ ಮತ್ತೊಂದು ಘಟಕ 480,000 ಚದರ ಮೀಟರ್ ಪ್ರದೇಶವನ್ನು ವಿಯೆಟ್ನಾಂನಲ್ಲಿ ಖರೀದಿಸುತ್ತಿದೆ. ಕರ್ನಾಟಕದಲ್ಲಿ ಹೊಸ ಕಾರ್ಖಾನೆಗೆ ಫಾಕ್ಸ್ ಕಾನ್ 5,740 ಕೋಟಿ ರೂ. ಹೂಡಿಕೆ ಮಾಡಲಿದೆ ಎಂದು ವರದಿಯಾಗಿತ್ತು.
ಫಾಕ್ಸ್‌ಕಾನ್ ಅಧ್ಯಕ್ಷ ಯಂಗ್ ಲಿಯು ಅವರು ಸೆಮಿಕಂಡಕ್ಟರ್ ಅಭಿವೃದ್ಧಿ, ಎಲೆಕ್ಟ್ರಿಕ್ ವಾಹನ ಅಭಿವೃದ್ಧಿ ಸೇರಿದಂತೆ ಹೊಸ ಕ್ಷೇತ್ರಗಳಲ್ಲಿ ಉದ್ದಿಮೆ ಅಭಿವೃದ್ಧಿಗೆ ರಾಜ್ಯದ ಸಹಕಾರ ಕೋರಿದ್ದರು. ಫಾಕ್ಸ್ ಕಾನ್ 2019ರಿಂದ ಭಾರತದಲ್ಲಿ ಆ್ಯಪಲ್ ಉತ್ಪನ್ನಗಳನ್ನು ತಮಿಳುನಾಡಿನಲ್ಲಿನ ಘಟಕದಲ್ಲಿ ತಯಾರಿಸುತ್ತಿದೆ. ತೈವಾನ್ ಮೂಲದ ವಿಸ್ಟ್ರಾನ್ ಮತ್ತು ಪೆಗಟ್ರಾನ್ ಕೂಡ ಭಾರತದಲ್ಲಿ ಆ್ಯಪಲ್ ಉತ್ಪನ್ನಗಳನ್ನು ತಯಾರಿಸುತ್ತಿವೆ.
ಆ್ಯಪಲ್ ಐಫೋನ್ ದಾಖಲೆಯ ರಫ್ತು
ಭಾರತದಿಂದ ಮೊಟ್ಟ ಮೊದಲ ಬಾರಿಗೆ 5 ಶತಕೋಟಿ ಡಾಲರ್ ಮೌಲ್ಯದ (40,000 ಕೋಟಿ ರೂ.) ಆ್ಯಪಲ್ ಐಫೋನ್ ರಫ್ತಾಗಿದೆ. (5 ಶತಕೋಟಿ ಡಾಲರ್) ಆ್ಯಪಲ್ ಕಂಪನಿಯು 2021-22ರಲ್ಲಿ 11,000 ಕೋಟಿ ರೂ. ಮೌಲ್ಯದ ಸ್ಮಾರ್ಟ್‌ಫೋನ್‌ಗಳನ್ನು ರಫ್ತು ಮಾಡಿತ್ತು. ಕೇಂದ್ರ ಸರ್ಕಾರದ ಪಿಎಲ್‌ಐ ಯೋಜನೆ ಕೂಡ ಇದಕ್ಕೆ ಕಾರಣವಾಗಿದೆ ಎಂದು ಇಂಡಿಯಾ ಸೆಲ್ಯುಲಾರ್ & ಎಲೆಕ್ಟ್ರಾನಿಕ್ಸ್ ಅಸೋಸಿಯೇಶನ್ ಅಧ್ಯಕ್ಷ ಪಂಕಜ್ ಮೊಹಿಂದಾರೊ ತಿಳಿಸಿದ್ದಾರೆ.
ಸ್ಮಾರ್ಟ್‌ಫೋನ್‌ಗಳ ಒಟ್ಟು ರಫ್ತು 10 ಶತಕೋಟಿ ಡಾಲರ್‌ಗೆ (82,000 ಕೋಟಿ ರೂ.) ಏರಿದೆ. ಭಾರತದಲ್ಲಿ ಆ್ಯಪಲ್ ಕಂಪನಿಯು ತನ್ನ ಐಫೋನ್ ಉತ್ಪಾದನೆಯನ್ನು ಗಣನೀಯವಾಗಿ ಏರಿಸಿರುವುದು ಇದಕ್ಕೆ ಕಾರಣ. ಭಾರತವನ್ನು ಸ್ಮಾರ್ಟ್‌ಫೋನ್ ಉತ್ಪಾದನೆಯ ಪ್ರಮುಖ ತಾಣವನ್ನಾಗಿಸುವ ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಇದರಿಂದ ಪುಷ್ಟಿ ಸಿಗಲಿದೆ.
ಆ್ಯಪಲ್ ಕಂಪನಿಯ ಭರ್ಜರಿ ಉತ್ಪಾದನೆಯ ಪರಿಣಾಮ ಭಾರತದಿಂದ 2022-23ರಲ್ಲಿ ಒಟ್ಟು 10 ಶತಕೋಟಿ ಡಾಲರ್ ಮೌಲ್ಯದ ಸ್ಮಾರ್ಟ್‌ಫೋನ್‌ಗಳು ರಫ್ತಾಗಿದೆ. (ಅಂದಾಜು 80,000 ಕೋಟಿ ರೂ.) ಸ್ಯಾಮ್‌ಸಂಗ್ 4 ಶತಕೋಟಿ ಡಾಲರ್ (32,000 ಕೋಟಿ ರೂ.) ಮೌಲ್ಯದ ಸ್ಮಾರ್ಟ್‌ಫೋನ್‌ಗಳನ್ನು ರಫ್ತು ಮಾಡಿದೆ ಎಂದು ಉದ್ಯಮ ವಲಯದ ಅಂಕಿ ಅಂಶಗಳು ತಿಳಿಸಿವೆ.
ಭಾರತದಲ್ಲಿ ತಯಾರಾಗುವ ಆ್ಯಪಲ್ ಐಫೋನ್‌ಗಳು ಈಗ ಬ್ರಿಟನ್, ಇಟಲಿ, ಫ್ರಾನ್ಸ್, ಮಧ್ಯಪ್ರಾಚ್ಯ, ಜಪಾನ್, ಜರ್ಮನಿ, ರಷ್ಯಾಕ್ಕೆ ರಫ್ತಾಗುತ್ತಿವೆ. ಆ್ಯಪಲ್ ಕಂಪನಿಯ ಒಟ್ಟು ಐಫೋನ್ ಉತ್ಪಾದನೆಯಲ್ಲಿ 5% ಪಾಲು ಭಾರತದಲ್ಲಿ ಈಗ ತಯಾರಾಗುತ್ತಿದೆ. 2020ರಲ್ಲಿ 1%ಗಿಂತಲೂ ಕಡಿಮೆ ಇತ್ತು. ಭಾರತದ ಎಲೆಕ್ಟ್ರಾನಿಕ್ಸ್ ರಫ್ತಿನಲ್ಲಿ ಮೊಬೈಲ್ ಫೋನ್ ಗಣನೀಯ ಪಾತ್ರವನ್ನು ವಹಿಸುತ್ತಿದೆ. ಜೆಪಿ ಮೋರ್ಗಾನ್ ವರದಿಯ ಪ್ರಕಾರ ಆ್ಯಪಲ್ 2025ರೊಳಗೆ ತನ್ನ ಐಫೋನ್ ಉತ್ಪಾದನೆಯಲ್ಲಿ 25% ಪಾಲನ್ನು ಭಾರತದಲ್ಲಿ ತಯಾರಿಸಲಿದೆ.
ಇದನ್ನೂ ಓದಿ: iPhone production : ಚೀನಾದಿಂದ ಐಫೋನ್ ಉತ್ಪಾದನೆ ಶಿಫ್ಟ್, ಫಾಕ್ಸ್‌ಕಾನ್‌ನಿಂದ ಬೆಂಗಳೂರಿನಲ್ಲಿ ಭಾರಿ ಭೂಮಿ ಖರೀದಿ