ನವ ದೆಹಲಿ: ಭಾರತದಿಂದ ಮೊಟ್ಟ ಮೊದಲ ಬಾರಿಗೆ 5 ಶತಕೋಟಿ ಡಾಲರ್ ಮೌಲ್ಯದ (40,000 ಕೋಟಿ ರೂ.) ಆ್ಯಪಲ್ ಐಫೋನ್ ರಫ್ತಾಗಿದೆ. (5 ಶತಕೋಟಿ ಡಾಲರ್) ಆ್ಯಪಲ್ ಕಂಪನಿಯು 2021-22ರಲ್ಲಿ 11,000 ಕೋಟಿ ರೂ. ಮೌಲ್ಯದ ಸ್ಮಾರ್ಟ್‌ಫೋನ್‌ಗಳನ್ನು ರಫ್ತು ಮಾಡಿತ್ತು. ಕೇಂದ್ರ ಸರ್ಕಾರದ ಪಿಎಲ್‌ಐ ಯೋಜನೆ ಕೂಡ ಇದಕ್ಕೆ ಕಾರಣವಾಗಿದೆ ಎಂದು ಇಂಡಿಯಾ ಸೆಲ್ಯುಲಾರ್ & ಎಲೆಕ್ಟ್ರಾನಿಕ್ಸ್ ಅಸೋಸಿಯೇಶನ್ ಅಧ್ಯಕ್ಷ ಪಂಕಜ್ ಮೊಹಿಂದಾರೊ ತಿಳಿಸಿದ್ದಾರೆ.
ಸ್ಮಾರ್ಟ್‌ಫೋನ್‌ಗಳ ಒಟ್ಟು ರಫ್ತು 10 ಶತಕೋಟಿ ಡಾಲರ್‌ಗೆ (82,000 ಕೋಟಿ ರೂ.) ಏರಿದೆ. ಭಾರತದಲ್ಲಿ ಆ್ಯಪಲ್ ಕಂಪನಿಯು ತನ್ನ ಐಫೋನ್ ಉತ್ಪಾದನೆಯನ್ನು ಗಣನೀಯವಾಗಿ ಏರಿಸಿರುವುದು ಇದಕ್ಕೆ ಕಾರಣ. ಭಾರತವನ್ನು ಸ್ಮಾರ್ಟ್‌ಫೋನ್ ಉತ್ಪಾದನೆಯ ಪ್ರಮುಖ ತಾಣವನ್ನಾಗಿಸುವ ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಇದರಿಂದ ಪುಷ್ಟಿ ಸಿಗಲಿದೆ.
ಆ್ಯಪಲ್ ಕಂಪನಿಯ ಭರ್ಜರಿ ಉತ್ಪಾದನೆಯ ಪರಿಣಾಮ ಭಾರತದಿಂದ 2022-23ರಲ್ಲಿ ಒಟ್ಟು 10 ಶತಕೋಟಿ ಡಾಲರ್ ಮೌಲ್ಯದ ಸ್ಮಾರ್ಟ್‌ಫೋನ್‌ಗಳು ರಫ್ತಾಗಿದೆ. (ಅಂದಾಜು 80,000 ಕೋಟಿ ರೂ.) ಸ್ಯಾಮ್‌ಸಂಗ್ 4 ಶತಕೋಟಿ ಡಾಲರ್ (32,000 ಕೋಟಿ ರೂ.) ಮೌಲ್ಯದ ಸ್ಮಾರ್ಟ್‌ಫೋನ್‌ಗಳನ್ನು ರಫ್ತು ಮಾಡಿದೆ ಎಂದು ಉದ್ಯಮ ವಲಯದ ಅಂಕಿ ಅಂಶಗಳು ತಿಳಿಸಿವೆ.
ಭಾರತದಲ್ಲಿ ತಯಾರಾಗುವ ಆ್ಯಪಲ್ ಐಫೋನ್‌ಗಳು ಈಗ ಬ್ರಿಟನ್, ಇಟಲಿ, ಫ್ರಾನ್ಸ್, ಮಧ್ಯಪ್ರಾಚ್ಯ, ಜಪಾನ್, ಜರ್ಮನಿ, ರಷ್ಯಾಕ್ಕೆ ರಫ್ತಾಗುತ್ತಿವೆ. ಆ್ಯಪಲ್ ಕಂಪನಿಯ ಒಟ್ಟು ಐಫೋನ್ ಉತ್ಪಾದನೆಯಲ್ಲಿ 5% ಪಾಲು ಭಾರತದಲ್ಲಿ ಈಹ ತಯಾರಾಗುತ್ತಿದೆ. 2020ರಲ್ಲಿ 1%ಗಿಂತಲೂ ಕಡಿಮೆ ಇತ್ತು. ಭಾರತದ ಎಲೆಕ್ಟ್ರಾನಿಕ್ಸ್ ರಫ್ತಿನಲ್ಲಿ ಮೊಬೈಲ್ ಫೋನ್ ಗಣನೀಯ ಪಾತ್ರವನ್ನು ವಹಿಸುತ್ತಿದೆ. ಜೆಪಿ ಮೋರ್ಗಾನ್ ವರದಿಯ ಪ್ರಕಾರ ಆ್ಯಪಲ್ 2025ರೊಳಗೆ ತನ್ನ ಐಫೋನ್ ಉತ್ಪಾದನೆಯಲ್ಲಿ 25% ಪಾಲನ್ನು ಭಾರತದಲ್ಲಿ ತಯಾರಿಸಲಿದೆ.
ಟಾಟಾ ಗ್ರೂಪ್ ಬೆಂಗಳೂರಿಗೆ ಸಮೀಪದ ಕೋಲಾರದ ನರಸಾಪುರದಲ್ಲಿರುವ ವಿಸ್ಟ್ರಾನ್ ಐಫೋನ್ ಘಟಕವನ್ನು ಖರೀದಿಸಲು (Wistron iPhone plant) ಸಜ್ಜಾಗಿದೆ. ಏಪ್ರಿಲ್ ಅಂತ್ಯದೊಳಗೆ ಪ್ರಕ್ರಿಯೆ ಪೂರ್ಣವಾಗುವ ಸಾಧ್ಯತೆ ಇದೆ. ಇದು ಕಾರ್ಯಗತವಾದರೆ ಆ್ಯಪಲ್ ಐಫೋನ್‌ಗಳನ್ನು ತಯಾರಿಸುವ ಭಾರತದ ಮೊಟ್ಟ ಮೊದಲ ಕಂಪನಿಯಾಗಿ ಟಾಟಾ ಗ್ರೂಪ್ ಹೊರಹೊಮ್ಮಲಿದೆ. ಟಾಟಾ ಗ್ರೂಪ್ (Tata Group) ಈಗಾಗಲೇ ಇದಕ್ಕಾಗಿ ಪೂರ್ವ ತಯಾರಿ ನಡೆಸುತ್ತಿದೆ.
ಒಂದು ವೇಳೆ ಟಾಟಾ ಗ್ರೂಪ್, ವಿಸ್ಟ್ರಾನ್ ಘಟಕವನ್ನು ಖರೀದಿಸಿದರೆ 2,000 ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇದೆ. ಮಧ್ಯಮ ಸ್ತರದಲ್ಲಿರುವ 400 ಸಿಬ್ಬಂದಿ ವಲಸೆ ಹೋಗುವ ಸಾಧ್ಯತೆಯೂ ಇದೆ. 4-5 ಹಿರಿಯ ಉದ್ಯೋಗಿಗಳಿಗೆ ಕಂಪನಿ ಬಿಡುವಂತೆ ತಿಳಿಸಲಾಗಿದೆ.
ಟಾಟಾ ಗ್ರೂಪ್, ತೈವಾನ್ ಮೂಲದ ವಿಸ್ಟ್ರಾನ್‌ನ ಘಟಕವನ್ನು ಖರೀದಿಸಿದರೆ, ಐಫೋನ್ 15 ಉತ್ಪಾದನೆಗೆ ಮುಂದಾಗುವ ಸಾಧ್ಯತೆಯೂ ಇದೆ. ಪ್ರಸ್ತುತ ಘಟಕವು ಐಫೋನ್ 12 ಮತ್ತು ಐಫೋನ್ 14 ಅನ್ನು ಉತ್ಪಾದಿಸುತ್ತಿದೆ. ಟಾಟಾ ಗ್ರೂಪ್‌ಗೆ ತನ್ನ ಘಟಕವನ್ನು ಮಾರಾಟ ಮಾಡಿದ ಬಳಿಕ ವಿಸ್ಟ್ರಾನ್ ಸಂಪೂರ್ಣವಾಗಿ ಭಾರತೀಯ ಮಾರುಕಟ್ಟೆಯಿಂದ ನಿರ್ಗಮಿಸಲಿದೆ. ಏಕೆಂದರೆ ಕಂಪನಿಯು ಭಾರತದಲ್ಲಿ ಇದೊಂದೇ ಘಟಕದಲ್ಲಿ ಉತ್ಪಾದಿಸುತ್ತಿದೆ. ಭಾರತದ ಆ್ಯಪಲ್ ಐಫೋನ್ ಮಾರುಕಟ್ಟೆ 600 ದಶಲಕ್ಷ ಡಾಲರ್‌ಗಳಾಗಿದೆ.( 4920 ಕೋಟಿ ರೂ.)
ಬೆಂಗಳೂರಿನಿಂದ ಪೂರ್ವಕ್ಕೆ 50 ಕಿ.ಮೀ ದೂರದಲ್ಲಿ ವಿಸ್ಟ್ರಾನ್‌ನ ಐಫೋನ್ ಉತ್ಪಾದನಾ ಘಟಕ ಇದೆ. ಕಳೆದ ಕೆಲವು ತಿಂಗಳುಗಳಿಂದ ಮಾತುಕತೆ ನಡೆಯುತ್ತಿದೆ. ಅಮೆರಿಕ-ಚೀನಾ ವ್ಯಾಪಾರ ಸಂಘರ್ಷದ ಹಿನ್ನೆಲೆಯಲ್ಲಿ ಕ್ಯಾಲಿಫೋರ್ನಿಯಾ ಮೂಲದ ಕ್ಯಪರ್ಟಿನೊ ಕಂಪನಿಯು ಕಳೆದ ವರ್ಷ 25% ಉತ್ಪಾದನೆಯನ್ನು ಚೀನಾದಿಂದ ಭಾರತಕ್ಕೆ ಸ್ಥಳಾಂತರಿಸಲು ನಿರ್ಧರಿಸಿತ್ತು. ತೈವಾನ್‌ನ ಮೂರು ಕಂಪನಿಗಳು ಭಾರತದಲ್ಲಿ ಆ್ಯಪಲ್ ಐಫೋನ್‌ಗಳನ್ನು ತಯಾರಿಸುತ್ತಿವೆ, ಅವುಗಳೆಂದರೆ ವಿಸ್ಟ್ರಾನ್, ಪೆಗಟ್ರೋನ್, ಫಾಕ್ಸ್‌ಕಾನ್.
ಟಾಟಾ ಗ್ರೂಪ್ ಆ್ಯಪಲ್ ಕಂಪನಿಯ ಜತೆಗೂಡಿ ತನ್ನ ಉತ್ಪಾದನೆಯನ್ನು ಹೆಚ್ಚಿಸಲು ಉದ್ದೇಶಿಸಿದೆ. ಪೆಗಟ್ರೋನ್‌ನ ಐಫೋನ್ ಉತ್ಪಾದನಾ ಘಟಕವನ್ನು ಕೂಡ ಖರೀದಿಸಲು ಟಾಟಾ ಗ್ರೂಪ್ ಉದ್ದೇಶಿಸಿದೆ. 2021ರ ಡಿಸೆಂಬರ್‌ನಲ್ಲಿ ವಿಸ್ಟ್ರಾನ್ ನ ಐಫೋನ್ ಕಾರ್ಖಾನೆಯಲ್ಲಿ ಸಾವಿರಾರು ಗುತ್ತಿಗೆ ಆಧಾರಿತ ಕಾರ್ಮಿಕರು ವೇತನ ಬಾಕಿ ವಿತರಣೆಗೆ ಒತ್ತಾಯಿಸಿ ನಡೆಸಿದ ಪ್ರತಿ ಭಟನೆ ಹಿಂಸಾಚಾರಕ್ಕೆ ಕಾರಂವಾಗಿತ್ತು.