ಬ್ರೆಸಿಲಿಯಾ: ಬ್ರೆಜಿಲ್‌ನಲ್ಲಿ ನೂತನ ಐಫೋನ್ ಅನ್ನು ಬ್ಯಾಟರಿ ಚಾರ್ಜರ್ ಇಲ್ಲದೆ ಮಾರಾಟ ಮಾಡುತ್ತಿದ್ದ ಆ್ಯಪಲ್ ಕಂಪನಿಗೆ (Apple iPhone) ಸ್ಥಳೀಯ ನ್ಯಾಯಾಲಯವು ಬರೋಬ್ಬರಿ 156 ಕೋಟಿ ರೂ.ಗಳ ದಂಡ ವಿಧಿಸಿದೆ. ಈ ವಿದ್ಯಮಾನ ಕಾರ್ಪೊರೇಟ್ ವಲಯದಲ್ಲಿಯೇ ಸಂಚಲನ ಮೂಡಿಸಿದೆ.
ಗ್ರಾಹಕರ ಒಕ್ಕೂಟವು ಕಂಪನಿಯ ವಿರುದ್ಧ ಕೋರ್ಟ್ ಮೆಟ್ಟಿಲೇರಿತ್ತು. ಬ್ಯಾಟರಿ ಚಾರ್ಜರ್ ಇಲ್ಲದೆ ಐಫೋನ್ ಮಾರಾಟ ಸರಿಯಲ್ಲ. ಜತೆಗೆ ಚಾರ್ಜರ್ ಇಲ್ಲದೆ ಐಫೋನ್ ಮಾರಾಟ ಮಾಡದಂತೆ ನ್ಯಾಯಾಲಯವು ನಿರ್ಬಂಧಿಸಿದೆ. ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಆ್ಯಪಲ್ ತಿಳಿಸಿದೆ.
ಪರಿಸರ ಮಾಲಿನ್ಯವನ್ನು ನಿಯಂತ್ರಿಸುವ ಉದ್ದೇಶದಿಂದ ಬ್ಯಾಟರಿ ಚಾರ್ಜರ್‌ಗಳನ್ನು ಐಫೋನ್ ಜತೆಗೆ ಮಾರುತ್ತಿಲ್ಲ ಎಂಬ ಕಂಪನಿಯ ವಾದವನ್ನು ಕೋರ್ಟ್ ತಳ್ಳಿ ಹಾಕಿದೆ.
ಪರಿಸರಕ್ಕೆ ಹಾನಿಯಾಗುತ್ತದೆ ಎಂಬ ನೆಪ ಒಡ್ಡಿ ಆ್ಯಪಲ್, 2020ರಿಂದ ಐಫೋನ್ ಮಾರಾಟ ಮಾಡುವಾಗ ಒಟ್ಟಿಗೆ ಬ್ಯಾಟರಿ ಚಾರ್ಜರ್ ಕೊಡುತ್ತಿಲ್ಲ. ಆದರೆ ಗ್ರಾಹಕರು ಹೆಚ್ಚುವರಿ ದುಡ್ಡು ಕೊಟ್ಟು ಚಾರ್ಜರ್ ಖರೀದಿಸಬೇಕಾಗುತ್ತದೆ. ಇದು ಸರಿಯಲ್ಲ ಎಂದು ಬ್ರೆಜಿಲ್ ಸರ್ಕಾರ ಹೇಳಿದೆ.