ನವ ದೆಹಲಿ: ಐಫೋನ್ ಉತ್ಪಾದಕ ಆ್ಯಪಲ್ ಕಂಪನಿಯ ಮಾಜಿ ಎಂಜಿನಿಯರ್ ಒಬ್ಬರು ಸ್ವಯಂಚಾಲಿತ ಕಾರಿಗೆ ಸಂಬಂಧಿಸಿದ ತಂತ್ರಜ್ಞಾನವನ್ನು ಕದ್ದು ಚೀನಾಕ್ಕೆ ಪರಾರಿಯಾಗಿದ್ದಾನೆ ( Apple autonomous technology) ಎಂದು ಅಮೆರಿಕದ ಕಾನೂನು ಇಲಾಖೆ ತಿಳಿಸಿದೆ. ವರದಿಗಳ ಪ್ರಕಾರ ಚೀನಾಕ್ಕೆ ಪರಾರಿಯಾಗಿರುವ ಎಂಜಿಯರ್ ಹೆಸರು ವೆಯಿಬಾಯೊ ವಾಂಗ್. (weibao wang)
ವೆಯಿಬಾಯೊ ವಾಂಗ್ ಈಗ ಚೀನಾದ ಇಂಟರ್‌ನೆಟ್ ಕಂಪನಿ ಜಿಡು (Jidu) ಮತ್ತು ಚೀನಿ ಕಾರು ತಯಾರಕ ಗೀಲಿ ಸಹಭಾಗಿತ್ವದ ಕಂಪನಿಯ ಅಧಿಕಾರಿಯಾಗಿದ್ದಾನೆ.
ಸೆಲ್ಫ್ ಡ್ರೈವಿಂಗ್ ಕಾರು ಆ್ಯಪಲ್ ಕಂಪನಿಯ ಮಹತ್ವದ ಯೋಜನೆಯಾಗಿದೆ. ಹಲವು ವರ್ಷಗಳಿಂದ ಸ್ವಯಂಚಾಲಿತ ಕಾರು ಯೋಜನೆ ಅಭಿವೃದ್ಧಿಗೆ ಕಂಪನಿ ಯೋಜಿಸಿದೆ. ತಂತ್ರಜ್ಞಾನವನ್ನು ಚೀನಾಕ್ಕೆ ಕದ್ದು ವರ್ಗಾಯಿಸಿದ ಆರೋಪ ಎದುರಿಸುತ್ತಿರುವ ಮೂರನೇ ಆ್ಯಪಲ್ ಉದ್ಯೋಗಿ ಈತನಾಗಿದ್ದಾನೆ.
2017ರ ಏಪ್ರಿಲ್‌ನಲ್ಲಿ ಆ್ಯಪಲ್ ಕಂಪನಿಯ 135000 ಉದ್ಯೋಗಿಗಳ ಪೈಕಿ 5,000 ಮಂದಿಗೆ ಮಾತ್ರ ಪ್ರಾಜೆಕ್ಟ್ ಬಗ್ಗೆ ಮಾಹಿತಿ ಇತ್ತು. ಇದರ ಡೇಟಾಬೇಸ್ ಪಡೆಯಲು ಸೀಮಿತ ಉದ್ಯೋಗಿಗಳಿಗೆ ಮಾತ್ರ ಅವಕಾಶ ಇತ್ತು. ವಾಂಗ್ 2018ರಲ್ಲಿ ಆ್ಯಪಲ್‌ಗೆ ರಾಜೀನಾಮೆ ನೀಡಿದ್ದ.
ಇದನ್ನೂ ಓದಿ: Apple iPhone: ಆ್ಯಪಲ್‌ನ ಐಫೋನ್ 15, ಐಫೋನ್ 15 ಪ್ಲಸ್ ಉತ್ಪಾದಿಸಲಿದೆ ಟಾಟಾ ಗ್ರೂಪ್!
ಕ್ಯಾಲಿಫೋರ್ನಿಯಾದಲ್ಲಿ 2018ರ ಜೂನ್ 27ರಂದು ಪೊಲೀಸರು ವಾಂಗ್‌ನ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದಾಗ, ಆತ ತಂತ್ರಜ್ಞಾನ ಕದ್ದಿರುವುದಕ್ಕೆ ಪೂರಕವಾಗಿ ಹಲವು ಸಾಕ್ಷ್ಯಾಧಾರಗಳು ಲಭಿಸಿವೆ ಎಂದು ವರದಿಯಾಗಿದೆ. ಇದಕ್ಕೂ ಮುನ್ನ ವಾಂಗ್ ಅಮೆರಿಕದಿಂದ ಪರಾರಿಯಾಗಿ ಚೀನಾದ ಗುವಾಂಜೊಕ್ಕೆ ಹಿಂತಿರುಗಿದ್ದ ಎಂದು ವರದಿಯಾಗಿದೆ.