ನವದೆಹಲಿ: ಭಾರತದಲ್ಲಿ ಕಳೆದ ಮೇ 21ರಿಂದ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಯಥಾಸ್ಥಿತಿಯಲ್ಲಿದೆ. ಕೇಂದ್ರ ಸರಕಾರ ಅಬಕಾರಿ ಸುಂಕವನ್ನು ಕಡಿತಗೊಳಿಸಿ ಸಹಕರಿಸಿತ್ತು. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರುಗತಿಯಲ್ಲಿದೆ.
ಮೇ 21ರ ವೇಳೆಗೆ ಪ್ರತಿ ಬ್ಯಾರೆಲ್ ಕಚ್ಚಾ ತೈಲ ದರ 110 ಡಾಲರ್ ದರ ಇದ್ದರೆ, ಈಗ 120 ರೂ.ಗೆ ಜಿಗಿದಿದೆ. ಇದು ಕಳೆದ 10 ವರ್ಷದಲ್ಲೇ ಗರಿಷ್ಠ ದರ. ಹೀಗಾಗಿ ಪೆಟ್ರೋಲ್-ಡೀಸೆಲ್ ರಿಟೇಲ್ ದರ ಮತ್ತೆ ಏರುವ ಆತಂಕ ಉಂಟಾಗಿದೆ. ಕಚ್ಚಾ ತಲ ದರ ಕಳೆದ ಮಾರ್ಚ್ 30 ಮತ್ತು ಏಪ್ರಿಲ್ 27ರ ನಡುವೆ ಪ್ರತಿ ಬ್ಯಾರೆಲ್ ತೈಲ ದರ ಸರಾಸರಿ 103 ಡಾಲರ್ ಮಟ್ಟದಲ್ಲಿತ್ತು. ಭಾರತದ 85% ಕಚ್ಚಾ ತೈಲಕ್ಕೆ ಆಮದನ್ನು ನೆಚ್ಚಿಕೊಳ್ಳಲಾಗಿದೆ.
ತೈಲ ದರಗಳ ರಿಟೇಲ್ ದರ ನಿಗದಿಯನ್ನು ವಿಕೇಂದ್ರೀಕರಣಗೊಳಿಸಲಾಗಿದೆ. ಅಂದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯ ದರಕ್ಕೆ ಅನುಗುಣವಾಗಿ ಪ್ರತಿ ದಿನ ದರ ಬದಲಾಗುತ್ತಿರುತ್ತದೆ. ಆದರೆ 2021ರ ನವೆಂಬರ್ ಬಳಿಕ ರಿಟೇಲ್ ತೈಲ ದರಗಳು ಮಹತ್ವದ ಚುನಾವಣೆಗಳ ಸಂದರ್ಭಗಳಲ್ಲಿ ಕಚ್ಚಾ ತೈಲ ದರ ಏರುಗತಿಯಲ್ಲಿದ್ದರೂ, ಯಥಾಸ್ಥಿತಿಯಲ್ಲಿತ್ತು.
ಕಳೆದ ಏಪ್ರಿಲ್ 6ರಿಂದ ಮತ್ತೆ ರಿಟೇಲ್ ದರಗಳನ್ನು ತಡೆ ಹಿಡಿಯಲಾಗಿದೆ. ಪೆಟ್ರೋಲ್ ಪಂಪ್ ಡೀಲರ್‌ಗಳ ಪ್ರಕಾರ, ಮಾರುಕಟ್ಟೆ ದರ ಪ್ರತಿ ಬ್ಯಾರೆಲ್‌ಗೆ 120 ಡಾಲರ್ ಆಗಿದ್ದರೂ, ಪ್ರಸ್ತುತ 85 ಡಾಲರ್‌ಗೆ ತೈಲವನ್ನು ತೈಲ ಕಂಪನಿಗಳು ಡೀಲರ್‌ಗಳಿಗೆ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ಸಾರ್ವಜನಿಕ ತೈಲ ಕಂಪನಿಗಳಿಗೆ ನಷ್ಟವಾಗುತ್ತಿದೆ.
ಮೇ 21ರಂದು ಕೇಂದ್ರ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿತು. ಅಲ್ಲಿಂದ ದರಗಳು ಯಥಾಸ್ಥಿತಿಯಲ್ಲಿದೆ. ಕಳೆದ ವಾರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ, “ಸರಕಾರ ರಿಟೇಲ್ ತೈಲ ದರಗಳನ್ನು ನಿರ್ಧರಿಸುವುದಿಲ್ಲ, ಸಾರ್ವಜನಿಕ ತೈಲ ಕಂಪನಿಗಳು ಜವಾಬ್ದಾರಿಯುತ ನಿರ್ಣಯ ತೆಗೆದುಕೊಳ್ಳುತ್ತವೆ. ಹಾಗೂ ಸಾರ್ವಜನಿಕ ಹಿತಾಸಕ್ತಿಯನ್ನು ಪರಿಗಣಿಸಿ ಅಂತಿಮ ತೀರ್ಮಾನವಾಗುತ್ತದೆʼ ಎಂದು ಹೇಳಿದ್ದರು.
ತೈಲ ದರಗಳು ಏರುತ್ತಿರುವುದೇಕೆ?
ಬ್ರೆಂಟ್ ಕಚ್ಚಾ ತೈಲದ ದರ ಪ್ರತಿ ಬ್ಯಾರೆಲ್‌ಗೆ 120 ಡಾಲರ್‌ಗೆ ಜಿಗಿಯಲು, ಅದಕ್ಕಿರುವ ಬೇಡಿಕೆಯ ಹೆಚ್ಚಳ ಮೊದಲ ಕಾರಣ. ಕೋವಿಡ್ ಬಿಕ್ಕಟ್ಟಿನ ಬಳಿಕ ಕುಸಿದಿದ್ದ ಆರ್ಥಿಕ ಚಟುವಟಿಕೆಗಳು ಚೇತರಿಸುತ್ತಿರುವುದು, ಜನ ಸಂಚಾರ, ಪ್ರಯಾಣ ವೃದ್ಧಿಸಿರುವುದು ಬೇಡಿಕೆ ವೃದ್ಧಿಸಲು ಕಾರಣವಾಗಿದೆ. ಆದರೆ ಬೇಡಿಕೆಗೆ ತಕ್ಕಂತೆ ಪೂರೈಕೆಯಾಗುತ್ತಿಲ್ಲ. ಒಪೆಕ್‌ನಂಥ ಪ್ರಮುಖ ತೈಲೋತ್ಪಾದಕ ರಾಷ್ಟ್ರಗಳು ಉತ್ಪಾದನೆಯನ್ನು ಕಡಿತಗೊಳಿಸಿವೆ. ಜತೆಗೆ ರಷ್ಯಾ-ಉಕ್ರೇನ್ ಸಂಘರ್ಷ ಕೂಡ ನಕಾರಾತ್ಮಕ ಪ್ರಭಾವ ಬೀರಿದೆ.
ಅಮೆರಿಕದಲ್ಲಿ ಬೇಸಗೆಯ ಕಾಲದ ತೈಲ ಬೇಡಿಕೆ ವೃದ್ಧಿಸಿದೆ. ಅಮೆರಿಕ ತನ್ನ ಸಂಗ್ರಹಾಗಾರಗಳಿಂದ ತೈಲ ಬಿಡುಗಡೆಗೊಳಿಸುತ್ತಿದ್ದರೂ, ಪರಿಣಾಮ ಬೀರಿಲ್ಲ.
ಭಾರತದಲ್ಲಿ ಮತ್ತೆ ತೈಲ ದರ ಏರಿಕೆಯಾಗಬಹುದೇ?
ಮೂಡೀಸ್ ವರದಿಯ ಪ್ರಕಾರ ಕಳೆದ 2021ರ ನವೆಂಬರ್ ಮತ್ತು 2022 ಮಾರ್ಚ್ ಅವಧಿಯಲ್ಲಿ ಪೆಟ್ರೋಲ್-ಡೀಸೆಲ್ ದರವನ್ನು ನಿಯಂತ್ರಿಸಿದ್ದರಿಂದ ಸಾರ್ವಜನಿಕ ತೈಲ ಕಂಪನಿಗಳಿಗೆ ಅಂದಾಜು 100 ಕೋಟಿ ಡಾಲರ್ ( 7,800 ಕೋಟಿ ರೂ.) ನಷ್ಟವಾಗಿತ್ತು. ಉತ್ಪಾದನಾ ವೆಚ್ಚ ಕಡಿಮೆಯಾದಾಗ ಕಂಪನಿಗಳು ದರ ಏರಿಸುವುದು ಸ್ವಾಭಾವಿಕ. ಆದರೆ ಜನ ಸಾಮಾನ್ಯರ ಹಿತಾಸಕ್ತಿಯನ್ನೂ ಪರಿಗಣಿಸಬೇಕಾದ ಬದ್ಧತೆ ಅವುಗಳಿಗೆ ಮತ್ತು ಸರಕಾರದ ಮೇಲಿದೆ. ತೈಲ ದರಗಳು ಸೂಕ್ಷ್ಮಸಂವೇದಿ ವಿಷಯವಾಗಿ ಬದಲಾಗಿದೆ. ಏಕೆಂದರೆ ಇದರ ಆರ್ಥಿಕ, ಸಾಮಾಜಿಕ ಪರಿಣಾಮ ಅಗಾಧ. ತೈಲ ದರ ಹೆಚ್ಚಳ ಬೆಲೆ ಏರಿಕೆಗೆ ಕಾರಣಗಳಲ್ಲೊಂದು.
ಆರ್‌ಬಿಐ ನಿರೀಕ್ಷೆ ಏನು?
ಆರ್‌ಬಿಐ ಕಳೆದ ಏಪ್ರಿಲ್‌ನಲ್ಲಿ ದ್ವೈಮಾಸಿಕ ನೀತಿಯಲ್ಲಿ ತಿಳಿಸಿದ ಪ್ರಕಾರ, ಕಚ್ಚಾ ತೈಲ ದರ ಬ್ಯಾರೆಲ್‌ಗೆ 100 ಡಾಲರ್‌ಗಳ ಗಡಿ ದಾಟಿರುವುದರಿಂದ ಹಣದುಬ್ಬರ ಮತ್ತಷ್ಟು ಹೆಚ್ಚಲಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿದರೆ ಪೆಟ್ರೋಲ್-ಡೀಸೆಲ್ ದರ ಏರಿಕೆ ಸನ್ನಿಹಿತವಾದಂತಿದೆ.