Site icon Vistara News

ನೀವು ವೈದ್ಯರೇ ಅಥವಾ ಜಾಲತಾಣಗಳಲ್ಲಿ ಪ್ರಭಾವಿಗಳೇ? ಜುಲೈ 1ರಿಂದ ಅನ್ವಯಿಸಲಿದೆ ಹೊಸ ಟಿಡಿಎಸ್‌ ನಿಯಮ

Dearness Allowance

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಪ್ರಭಾವಿಗಳಾಗಿರುವ ವ್ಯಕ್ತಿಗಳು, ವೈದ್ಯರು ಹಾಗೂ ಇತರ ವೃತ್ತಿಪರರು ತಮ್ಮ ವ್ಯವಹಾರಗಳಲ್ಲಿ ಸೇಲ್ಸ್‌ ಪ್ರಮೋಶನ್ಸ್‌ ಮೂಲಕ ಪಡೆಯುವ ಇನ್ಸೆಂಟಿವ್‌, ಉಚಿತ ಕೊಡುಗೆಗಳು, ಚಿನ್ನದ ನಾಣ್ಯಗಳು, ಮೊಬೈಲ್‌ ಫೋನ್‌, ಟಿ.ವಿ, ಕಂಪ್ಯೂಟರ್‌, ಪ್ರಾಯೋಜಿತ ಪ್ರವಾಸ, ಔಷಧಗಳ ಸ್ಯಾಂಪಲ್ಸ್‌, ನಗದು ಇತ್ಯಾದಿ ರೂಪಗಳ ಆದಾಯದ ಮೇಲೆ ಶೇ.೧೦ ಟಿಡಿಎಸ್‌ ಅನ್ನು ೨೦೨೨ರ ಜುಲೈ ೧ರಿಂದ ನೀಡಬೇಕಾಗುತ್ತದೆ.

ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಇತ್ತೀಚೆಗೆ ಬಿಸಿನೆಸ್‌ ಅಥವಾ ಸೇಲ್ಸ್‌ ಪ್ರಮೋಶನ್ಸ್‌ಗಳ ಮೂಲಕ ಪಡೆಯುವ ಆದಾಯಕ್ಕೆ ಟಿಡಿಎಸ್‌ ಹೇಗೆ ಅನ್ವಯಿಸುತ್ತದೆ ಎಂಬುದರ ಬಗ್ಗೆ ಮಾರ್ಗದರ್ಶಿಯನ್ನು ಬಿಡುಗಡೆಗೊಳಿಸಿದೆ.

ಕಳೆದ ಕೇಂದ್ರ ಬಜೆಟ್‌ನಲ್ಲಿ ಆದಾಯ ತೆರಿಗೆ ಕಾಯಿದೆಯಲ್ಲಿ ಹೊಸ ಸೆಕ್ಷನ್‌ ಅನ್ನೂ ಈ ಸಂಬಂಧ ಸೇರಿಸಲಾಗಿತ್ತು. ಇದರ ಪರಿಣಾಮ ಜಾಲತಾಣಗಳಲ್ಲಿ ಸಿಲೆಬ್ರಿಟಿಗಳಂತೆ ಪ್ರಭಾವಿಗಳಾಗಿರುವವರು, ಮ್ಯೂಸಿಕ್‌ ಬ್ಯಾಂಡ್‌ಗಳು, ವೈದ್ಯರು ತಮ್ಮ ಸೇಲ್ಸ್‌ ಪ್ರಮೋಶನ್ಸ್ ಮೂಲಕ ಗಳಿಸುವ ಆದಾಯದ ಮೇಲೆ ಟಿಡಿಎಸ್‌ (ಮೂಲದಲ್ಲಿಯೇ ತೆರಿಗೆ ಕಡಿತ) ನೀಡಬೇಕಾಗುತ್ತದೆ. ಟಿಡಿಎಸ್‌ ತಪ್ಪಿಸಲು ಇಂಥ ಸೇಲ್ಸ್‌ ಪ್ರಮೋಶನ್ಸ್‌ ಮೂಲಕ ಪಡೆಯುವ ಆದಾಯ ವಾರ್ಷಿಕ ೨೦,೦೦೦ ರೂ. ಮೀರದಂತೆ ನೋಡಿಕೊಳ್ಳಬೇಕು.‌

ಉತ್ಪಾದಕ ಕಂಪನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಉತ್ಪನ್ನಗಳನ್ನು ಪ್ರಚಾರ ಮಾಡಲು ಜಾತಾಣಗಳಲ್ಲಿ ಪ್ರಭಾವಿಗಳಿಗೆ ನಾನಾ ಸೌಲಭ್ಯಗಳನ್ನು, ಕೊಡುಗೆಗಳನ್ನು, ಉತ್ಪನ್ನಗಳ ಸ್ಯಾಂಪಲ್‌ಗಳನ್ನು ನೀಡುತ್ತವೆ. ಇವುಗಳ ಮೌಲ್ಯ ವಾರ್ಷಿಕ ೨೦,೦೦೦ ರೂ. ದಾಟಿದರೆ, ಟಿಡಿಎಸ್‌ ಅನ್ವಯವಾಗಲಿದೆ.

ವೈದ್ಯರಿಗೆ ಸಂಬಂಧಿಸಿ ಹೇಳುವುದಿದ್ದರೆ, ವೈದ್ಯರು ಉಚಿತವಾಗಿ ಔಷಧಗಳ ಸ್ಯಾಂಪಲ್‌ಗಳನ್ನು ಪಡೆಯುತ್ತಾರೆ. ಅದೇ ವೇಳೆ ಆಸ್ಪತ್ರೆಯೊಂದರಲ್ಲಿ ಉದ್ಯೋಗಿಗಳೂ ಆಗಿರುತ್ತಾರೆ. ಆಗ ಅವುಗಳ ಮೊತ್ತ ವಾರ್ಷಿಕ ೨೦,೦೦೦ ರೂ. ಮೀರಿದರೆ ಟಿಡಿಎಸ್‌ ಹೊಸ ನಿಯಮಗಳು ಅನ್ವಯಿಸಲಿದೆ.

Exit mobile version