ಹೂವಪ್ಪ ಬೆಂಗಳೂರು
ದೀಪಾವಳಿ ಹಬ್ಬದ ವೇಳೆಗೆ ಜನಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ದೈನಂದಿನ ಅಡುಗೆಗೆ ಬಳಕೆಯಾಗುವ ಈರುಳ್ಳಿ , ಟೊಮೊಟೊ ಹಾಗೂ ಆಲೂಗಡ್ಡೆ ಬೆಲೆ ಏರಿಕೆಯಾಗಿದೆ.
ಕಳೆದ ಸಾಲಿನಲ್ಲಿ ಈರುಳ್ಳಿಗೆ ಸೂಕ್ತ ಬೆಲೆ ಸಿಗದ ಕಾರಣ ಶೇ. 50 ಮಾತ್ರ ಬಿತ್ತನೆಯಾಗಿದೆ. ಇದರಲ್ಲಿ ಕೂಡ ಅತಿವೃಷ್ಟಿಯಿಂದ ಈರುಳ್ಳಿ ಫಸಲು ಶೇ. 90 ರಷ್ಟು ಡ್ಯಾಮೇಜ್ ಆಗಿದೆ. ಈ ವರ್ಷ ಬೇಗ ಬೆಳೆ ಮುಕ್ತಾಯ ಹಂತಕ್ಕೆ ಬಂದಿದೆ. ರಾಜ್ಯದ ಎಪಿಎಂಸಿ ಮಾರುಕಟ್ಟೆಗೆ ದಿನಪ್ರತಿ ಈ ಸಮಯದಲ್ಲಿ 1.50 ಲಕ್ಷ ಬರಬೇಕಾಗಿದ್ದ ಈರುಳ್ಳಿ ಆವಕ, 20-25 ಸಾವಿರ ಚೀಲಗಳಿಗೆ ಕುಸಿದಿದೆ. ಮಹಾರಾಷ್ಟ್ರ ಮೂಲದ ಈರುಳ್ಳಿ ಪೂರೈಕೆಯಲ್ಲೂ ಕೊರತೆಯಾಗಿದೆ. ಇದರ ಪರಿಣಾಮ ದರ ಏರಿದೆ.
ಕಳೆದ ವಾರ ಮಹಾರಾಷ್ಟ್ರ ಮೂಲದ ಹಳೆ ಈರುಳ್ಳಿ ಕ್ವಿಂಟಾಲ್‌ಗೆ 1,100-1,400 ರೂ.ಗೆ ಮಾರಾಟವಾಗಿತ್ತು. ಈಗ 2600-2800 ರೂ. ಗೆ ಮಾರಾಟವಾಗುತ್ತಿದೆ. ರಾಜ್ಯದ ಹೊಸ ಈರುಳ್ಳಿ 800-1100 ರೂ.ಗಳಿಂದ 1600-2200 ರೂ. ಗೆ ಏರಿಕೆಯಾಗಿದೆ. ಸಗಟು ಬೆಲೆ ಏರಿಕೆ ಹಿನ್ನೆಲೆಯಲ್ಲಿ ಚಿಲ್ಲರೆ ದರದಲ್ಲಿ ಏರಿಕೆ ಕಂಡಿದೆ. ಈ ಹಿಂದೆ ಹಳೇ ಈರುಳ್ಳಿ ಉತ್ತಮ ದಪ್ಪ ಕೆಜಿಗೆ 25-30 ರೂ. ಇತ್ತು. ಈಗ 40-45 ರೂ. ಗೆ ಏರಿಕೆಯಾಗಿದೆ. ಹೊಸ ಈರುಳ್ಳಿ 20-25 ಇದ್ದದ್ದು, 30-35 ರೂ. ಗೆ ಹೆಚ್ಚಳವಾಗಿದೆ.
ಟೊಮೊಟೊ ಬೆಲೆ ಏರಿಕೆ : ಮೂರು ತಿಂಗಳಿಂನಿಂದ ಸುರಿಯುತ್ತಿರುವ ಮಳೆಗೆ ಟೊಮೊಟೊ ಬೆಳೆ ಶೇ.60 ಕುಂಠಿತವಾಗಿದೆ. ರೈತರಿಗೆ ಹೊಸ ಬೆಳೆ ಮಾಡಲು ಆಗುತ್ತಿಲ್ಲ. ಹೀಗಾಗಿ ಮಾರುಕಟ್ಟೆ ಗೆ ಬೇಡಿಕೆಗೆ ಸಾಕಷ್ಟು ಪೂರೈಕೆ ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ದರ ಏರಿಕೆಯಾಗಿದೆ.
14 ಕೆಜಿ ತುಂಬಿದ ಟೊಮೊಟೊ ಬಾಕ್ಸ್‌ನ ಸಗಟು ದರ ಈಗ 600-700 ರೂ.ಗೆ ಏರಿದೆ. ಇದರ ಪರಿಣಾಮ ಈ ಹಿಂದೆ ಕೆಜಿಗೆ 20-30 ರೂ. ಇದ್ದ ಚಿಲ್ಲರೆ ದರ, 35-45 ರೂ.ಗೆ ಮಾರಾಟವಾಗುತ್ತದೆ.
ಆಲೂಗಡ್ಡೆ ಬೆಲೆ ಏರಿಕೆ : ಪ್ರಸಕ್ತ ವರ್ಷದಲ್ಲಿ ಮಳೆಯ ರೌದ್ರಾವತಾರದಿಂದಾಗಿ ಆಲೂಗಡ್ಡೆಯ ಶೇ. 60-70 ಬೆಳೆ ಕುಂಠಿತವಾಗಿದೆ. ಪರಿಣಾಮವಾಗಿ ಮಾರುಕಟ್ಟೆಗೆ ಸರಬರಾಜು ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಲೂಗಡ್ಡೆ ಬೆಲೆ ಏರಿಕೆಯಾಗಿದೆ. ಹಾಸನ ಚಿಕ್ಕಮಗಳೂರು, ಧಾರವಾಡ ಬೆಳಗಾವಿ ಜಿಲ್ಲೆಯಲ್ಲಿ ಆಲೂಗಡ್ಡೆ ಬೆಳೆಯಲಾಗುತ್ತದೆ. ಈಗ ಮಾರುಕಟ್ಟೆಗೆ ಕನಿಷ್ಠ 60-70 ಸಾವಿರ ಚೀಲ ಆಲೂಗಡ್ಡೆ ಬರಬೇಕಾಗಿತ್ತು. ಉತ್ತರಪ್ರದೇಶ, ಮಧ್ಯಪ್ರದೇಶ ಗಳ ಆಲೂಗಡ್ಡೆ ಸೇರಿ 20-25 ಸಾವಿರ ಚೀಲಗಳಷ್ಟು ಮಾತ್ರ ಬರುತ್ತಿದೆ. ಕೋಲಾರ ಜಿಲ್ಲೆಯ ಆಲೂಗಡ್ಡೆ ಈ ತಿಂಗಳಲ್ಲಿ ಬರಬೇಕಾಗಿತ್ತು. ವಾರದಿಂದ ಸುರಿಯುತ್ತಿರುವ ಮಳೆಯಿಂದ ಶೇ. 90 ಬೆಳೆ ನೆಲ ಕಚ್ಚಿದೆ.