ನವ ದೆಹಲಿ: ಭಾರತೀಯರ ಮನೆಗಳಲ್ಲಿ ಇರುವ ಚಿನ್ನವು ವಿಶ್ವ ಬ್ಯಾಂಕ್ ಬಳಿ ಇರುವುದಕ್ಕಿಂತಲೂ ಹೆಚ್ಚು. ಇದು 25,000 ಟನ್‌ನಷ್ಟಿರಬಹುದು ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ಇಂಡಿಯಾದ (world gold council -WGC) ವ್ಯವಸ್ಥಾಪಕ ನಿರ್ದೇಶಕ ಸೋಮಸುಂದರಂ ಪಿ.ಆರ್ ಅವರು ತಿಳಿಸಿದ್ದಾರೆ. ಎರಡು ವರ್ಷಗಳ ಹಿಂದೆ ಭಾರತೀಯರಲ್ಲಿ ಅಂದಾಜು 21,000 ಟನ್ ಚಿನ್ನ ಇತ್ತು. ಈಗ 25,000 ಟನ್‌ಗೆ ಏರಿಕೆಯಾಗಿರಬಹುದು ಎಂದು ಅವರು ಹೇಳಿದ್ದಾರೆ.
2018-19ರಲ್ಲಿ ಭಾರತದ ಜಿಡಿಪಿಯ 40% ಮೌಲ್ಯಕ್ಕೆ (nominal gross domestic product-GDP) ಸಮವಾಗುವಷ್ಟು ಚಿನ್ನವನ್ನು ಭಾರತೀಯರು ಹೊಂದಿದ್ದರು. 2019ರಲ್ಲಿ ಭಾರತದಲ್ಲಿ 760 ಟನ್ ಬಂಗಾರಕ್ಕೆ ಬೇಡಿಕೆ ಇತ್ತು. 2019ರ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಬಂಗಾರಕ್ಕೆ ಬೇಡಿಕೆ 5% ಹೆಚ್ಚಳವಾಗಿತ್ತು. ಆಗ 150 ಟನ್ ಚಿನ್ನ ಆಮದಾಗಿತ್ತು.
ನೋಟು ಅಮಾನ್ಯತೆ ಬಳಿಕ 2016ರಲ್ಲಿ ಬಂಗಾರಕ್ಕೆ ತಾತ್ಕಾಲಿಕವಾಗಿ ಬೇಡಿಕೆ ಕಡಿಮೆಯಾಗಿತ್ತು. ಆ ವರ್ಷ 666 ಟನ್ ಚಿನ್ನ ಆಮದಾಗಿತ್ತು. ಈಗಲೂ 2010ರ ಮಟ್ಟಕ್ಕೆ ಹೋಲಿಸಿದರೆ ( 963 ಟನ್) ಭಾರತದ ಬಂಗಾರದ ಬೇಡಿಕೆ ಇಳಿಮುಖವಾಗಿದೆ. ಮುಂಬರುವ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚುವ ಸಾಧ್ಯತೆ ಇದೆ. ಸಾಂಪ್ರದಾಯಿಕ ವೈವಾಹಿಕ ಸೀಸನ್, ಅಕ್ಷಯ ತೃತೀಯ ಫೆಸ್ಟಿವಲ್ ಹಿನ್ನೆಲೆಯಲ್ಲಿ ಚಿನ್ನಕ್ಕೆ ಬೇಡಿಕೆ ವೃದ್ಧಿಸುವ ನಿರೀಕ್ಷೆ ಇದೆ.
ಇದನ್ನೂ ಓದಿ: Gold rate : ಬಂಗಾರದ ದರ 320 ರೂ. ಇಳಿಕೆ, ಬೆಳ್ಳಿ 1000 ರೂ. ದುಬಾರಿ
ಭಾರತೀಯರ ಚಿನ್ನದ ಬೇಡಿಕೆಯಲ್ಲಿ ಜ್ಯುವೆಲ್ಲರಿ ಪ್ರಮುಖವಾಗಿದೆ. 2019ಕ್ಕೆ ಹೋಲಿಸಿದರೆ ಬಂಗಾರದ ಗಟ್ಟಿಗಳು ಮತ್ತು ನಾಣ್ಯಗಳು ಗಣನೀಯ ಮಾರಾಟವಾಗುವ ನಿರೀಕ್ಷೆ ಇದೆ. ಸರ್ಕಾರವು ಭೌತಿಕ ಬಂಗಾರದ ಬೇಡಿಕೆ ತಗ್ಗಿಸಲು ಇಟಿಎಫ್, ಎಸ್‌ಜಿಬಿ, ಗೋಲ್ಡ್ ಮೈನಿಂಗ್ ಫಂಡ್, ಗೋಲ್ಡ್ ಫಂಡ್ ಆಫ್ ಫಂಡ್ಸ್ , ಡಿಜಿಟಲ್ ಗೋಲ್ಡ್ ಮಾರ್ಗವನ್ನು ಅನುಸರಿಸಿದ್ದರೂ, ಭೌತಿಕ ಬಂಗಾರದ ಬೇಡಿಕೆಗೆ ಯಾವುದೇ ಧಕ್ಕೆಯಾಗಿಲ್ಲ.
ಸರ್ಕಾರವು ಭೌತಿಕ ರೂಪದ ಬಂಗಾರ ಖರೀದಿಯನ್ನು ನಿರುತ್ತೇಜನಗೊಳಿಸಲು ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ (gold monetization scheme -GMS) ಜಾರಿಗೊಳಿಸಿತ್ತು. 2.5% ತನಕ ಬಡ್ಡಿಯನ್ನು ಘೋಷಿಸಿತ್ತು. ಈ ಯೋಜನೆಯಲ್ಲಿ ಹೂಡಿಕೆಗೆ ಕ್ಯಾಪಿಟಲ್ ಗೈನ್ ಟ್ಯಾಕ್ಸ್, ವೆಲ್ತ್ ಟ್ಯಾಕ್ಸ್ ವಿನಾಯಿತಿ ಪ್ರಕಟಿಸಿತ್ತು.