ನವ ದೆಹಲಿ: ಭಾರತವು ಕಡಿಮೆ ಉತ್ಪಾದನಾ ವೆಚ್ಚದಲ್ಲಿ (low manufacturing cost) ಜಗತ್ತಿನ ಕಾರ್ಖಾನೆ ಎಂದೇ ಖ್ಯಾತಿ ಗಳಿಸಿರುವ ನೆರೆಯ ಚೀನಾವನ್ನು ಹಿಂದಿಕ್ಕಿದೆ. ಈ ಪಟ್ಟಿಯಲ್ಲಿ ನೆರೆ ರಾಷ್ಟ್ರ ಬಾಂಗ್ಲಾದೇಶವು 6ನೇ ಸ್ಥಾನ ಗಳಿಸಿದೆ. ಭಾರತವು ಆತ್ಮನಿರ್ಭರ ಭಾರತ್ (Atmanirbhara Bharat) ಅಭಿಯಾನ ನಡೆಸುತ್ತಿರುವ ಸಂದರ್ಭದಲ್ಲಿ ಇದು ಮಹತ್ವದ ಬೆಳವಣಿಗೆ ಎನ್ನಿಸಿದೆ.
ಕಡಿಮೆ ವೆಚ್ಚದಲ್ಲಿ ಉತ್ಪಾದನೆಯ ವಿಚಾರದಲ್ಲಿ ಭಾರತವು ವೈವಿಧ್ಯಮಯ ಶ್ರೇಣಿಯನ್ನು ಒಳಗೊಂಡಿದ್ದು, ರ‍್ಯಾಂಕಿಂಗ್ ಹೆಚ್ಚಲು ಕಾರಣವಾಗಿದೆ. ಭಾರತವು ಬಿಸಿನೆಸ್‌ಗೆ ಮುಕ್ತ ಆಹ್ವಾನ (Open for Business) ವಿಷಯದಲ್ಲಿ 37ನೇ ಸ್ಥಾನ ಗಳಿಸಿದೆ. ಹೀಗಿದ್ದರೂ, ಪೂರಕ ತೆರಿಗೆ ವಿಚಾರದಲ್ಲಿ ಮಾತ್ರ 100ರಲ್ಲಿ 16.2 ಅಂಕ ಗಳಿಸಿ ಹಿಂದುಳಿದಿದೆ. ಭ್ರಷ್ಟಾಚಾರ ಅಲ್ಲ ( not corrupt) ವಿಭಾಗದಲ್ಲಿ 18.1 ಅಂಕ ಗಳಿಸಿದೆ. ಪಾರದರ್ಶಕ ಸರ್ಕಾರಿ ನೀತಿ ವಿಭಾಗದಲ್ಲಿ 3.5, ಸಮಾನ ಆದಾಯ ವಿಷಯದಲ್ಲಿ 1.9, ಸುರಕ್ಷತೆಯಲ್ಲಿ 4.3, ಆರ್ಥಿಕ ಸ್ಥಿರತೆಯಲ್ಲಿ 9.9 ಅಂಕ ಗಳಿಸಿದೆ.
ಕೋವಿಡ್ ಬಿಕ್ಕಟ್ಟಿನ ಸಂದರ್ಭ ಭಾರತವು ಆತ್ಮನಿರ್ಭರ ಭಾರತ್ ಅಭಿಯಾನವನ್ನು ಆರಂಭಿಸಿತ್ತು. ಇದು ಫಲಪ್ರದವಾಗುತ್ತಿದೆ. ವಿದೇಶಿ ಹೂಡಿಕೆದಾರರನ್ನು ಆಕರ್ಷಿಸುತ್ತಿದೆ ಎಂದು ಸಮೀಕ್ಷೆ ತಿಳಿಸಿದೆ. ಭಾರತವನ್ನು ಜಾಗತಿಕ ಉತ್ಪಾದನಾ ತಾಣವನ್ನಾಗಿಸಲು ಕೇಂದ್ರ ಸರ್ಕಾರ ಉತ್ಪಾದನೆ ಆಧರಿತ ಇನ್ಸೆಂಟಿವ್ ಯೋಜನೆಯನ್ನು (production linked incentive programme) ಹಮ್ಮಿಕೊಂಡಿದೆ. ಮೊಬೈಲ್ ಉತ್ಪಾದನೆಗೆ ಸೀಮಿತವಾಗಿದ್ದ ಪಿಎಲ್‌ಐ ಅನ್ನು ನಾನಾ ಕ್ಷೇತ್ರಗಳಿಗೆ ವಿಸ್ತರಿಸಿದೆ.
ಸಮೀಕ್ಷೆಯ ಪ್ರಕಾರ ದಕ್ಷಿಣ ಏಷ್ಯಾದಲ್ಲಿ ಭಾರತಕ್ಕೆ ಆರ್ಥಿಕವಾಗಿ ಪ್ರತಿಸ್ಪರ್ಧಿ ಚೀನಾ. ಆದರೆ ಕಡಿಮೆ ವೆಚ್ಚದಲ್ಲಿ ಉತ್ಪಾದನೆಯ ವಿಚಾರದಲ್ಲಿ ಚೀನಾವು ಎರಡನೇ ಸ್ಥಾನಕ್ಕೆ ಇಳಿದಿದೆ. ಭಾರತ ಮೊದಲ ಸ್ಥಾನ ಗಳಿಸಿದೆ. ವಿಯೆಟ್ನಾಂ ಮೂರನೇ ರ‍್ಯಾಂಕ್ ಪಡೆದಿದೆ. ಇತ್ತೀಚಿನ ವರ್ಷಗಳಲ್ಲಿ ಗಾರ್ಮೆಂಟ್ ಮತ್ತು ಪಾದರಕ್ಷೆ ಬಿಸಿನೆಸ್ ವಲಯದಲ್ಲಿ ಹೂಡಿಕೆದಾರರನ್ನು ಆಕರ್ಷಿಸಿದೆ. ಥಾಯ್ಲೆಂಡ್ ನಾಲ್ಕನೇ ಸ್ಥಾನದಲ್ಲಿದೆ. ಫಿಲಿಪ್ಪೀನ್ಸ್ ಐದನೇ ರ‍್ಯಾಂಕ್ ಪಡೆದಿದೆ.
ಮೇಕ್ ಇನ್ ಇಂಡಿಯಾಕ್ಕೆ ( Make in India) ಮತ್ತೊಂದು ಪುಷ್ಟಿ ಲಭಿಸಿದೆ. ಸ್ವದೇಶಿ ನಿರ್ಮಿತ 4,276 ಕೋಟಿ ರೂ.ಗಳ ರಕ್ಷಣಾ ವಲಯದ ಸಾಧನಗಳನ್ನು ಖರೀದಿಸಲು ರಕ್ಷಣಾ ಖರೀದಿ ಮಂಡಳಿ (DAC) ಅನುಮೋದನೆ ನೀಡಿದೆ.ಹೆಲಿನಾ (HELINA) Anti Tank Guided Missilȩş, VSHORAD ಕ್ಷಿಪಣಿ ವ್ಯವಸ್ಥೆ, ಬ್ರಹ್ಮೋಸ್ ಕ್ರೂಸ್ ಮಿಸೈಲ್ ಲಾಂಚರ್, ಯುದ್ಧ ನೌಕೆಗೆ ಅಗತ್ಯವಿರುವ ಫೈರ್ ಕಂಟ್ರೋಲ್ ಸಿಸ್ಟಮ್ ಅನ್ನು ಖರೀದಿಸಲು 4,276 ಕೋಟಿ ರೂ. ಬಳಕೆಯಾಗಲಿದೆ. ಇವೆಲ್ಲವೂ ಸ್ವದೇಶಿ ನಿರ್ಮಿತ ಸಾಧನಗಳಾಗಿವೆ. ಶತ್ರುಗಳ ಯುದ್ಧ ನೌಕೆಗಳನ್ನು ಧ್ವಂಸಗೊಳಿಸಲು, ಕ್ಷಿಪಣಿಗಳನ್ನು ನಾಶಪಡಿಸುವ ಸಾಮರ್ಥ್ಯವನ್ನು ಇವುಗಳು ಹೊಂದಿವೆ.
ಇದನ್ನೂ ಓದಿ: iPhone production : ಚೀನಾದಿಂದ ಐಫೋನ್ ಉತ್ಪಾದನೆ ಶಿಫ್ಟ್, ಫಾಕ್ಸ್‌ಕಾನ್‌ನಿಂದ ಬೆಂಗಳೂರಿನಲ್ಲಿ ಭಾರಿ ಭೂಮಿ ಖರೀದಿ