Site icon Vistara News

Virender Sehwag : ಭಾರತೀಯ ಮಾರುಕಟ್ಟೆ ವಿರುದ್ಧದ ದಾಳಿ ಷಡ್ಯಂತ್ರ, ಅದಾನಿಯನ್ನು ಸಮರ್ಥಿಸಿದ ವೀರೇಂದ್ರ ಸೆಹ್ವಾಗ್

Virendra Sehwag

ನವ ದೆಹಲಿ: ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು ಗೌತಮ್‌ ಅದಾನಿಯವರ ಬೆಂಬಲಕ್ಕೆ ಬಂದಿದ್ದು, ಭಾರತೀಯ ಮಾರುಕಟ್ಟೆಯ ಮೇಲಿನ ದಾಳಿಯು ಪೂರ್ವ ನಿಯೋಜಿತ ಷಡ್ಯಂತ್ರದಂತೆ ಕಾಣಿಸುತ್ತಿದೆ ಎಂದು ಹೇಳಿದ್ದಾರೆ. (Virender Sehwag) ಅಮೆರಿಕದ ಶಾರ್ಟ್‌ ಸೆಲ್ಲರ್‌ ಹಿಂಡೆನ್‌ ಬರ್ಗ್‌ ವರದಿಯ ಬಳಿಕ ಅದಾನಿ ಸಮೂಹ ಎದುರಿಸುತ್ತಿರುವ ಬಿಕ್ಕಟ್ಟಿನ ಬಗ್ಗೆ ಪ್ರತಿಕ್ರಿಯಿಸಿರುವ ಸೆಹ್ವಾಗ್‌, ವಿದೇಶಿಯರು ಭಾರತದ ಅಭಿವೃದ್ಧಿಯನ್ನು ಸಹಿಸುತ್ತಿಲ್ಲ. ಅವರು ಎಷ್ಟೇ ತೀವ್ರ ಯತ್ನಿಸಿದರೂ ಭಾರತ ಪ್ರಗತಿಯ ಹಾದಿಯಲ್ಲಿ ಪ್ರಬಲವಾಗಿ ಹೊರಹೊಮ್ಮುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಸೆಹ್ವಾಗ್‌ ಟ್ವೀಟ್‌ ಮಾಡಿದ್ದಾರೆ.

ಜನವರಿ 24ರಂದು ಹಿಂಡೆನ್‌ಬರ್ಗ್‌ ವರದಿ ಪ್ರಕಟವಾದ ಬಳಿಕ ಅದಾನಿ ಸಮೂಹದ ಕಂಪನಿಗಳ ಷೇರುಗಳ ಮೌಲ್ಯದಲ್ಲಿ ಅಂದಾಜು 8.9 ಲಕ್ಷ ಕೋಟಿ ರೂ. ನಷ್ಟವಾಗಿತ್ತು. (110 ಶತಕೋಟಿ ಡಾಲರ್)‌ ಹಿಂಡೆನ್‌ ಬರ್ಗ್‌ ವರದಿಯನ್ನು ಅದಾನಿ ಗ್ರೂಪ್‌ ತಿರಸ್ಕರಿಸಿದ್ದು, 113 ಪುಟಗಳ ಉತ್ತರವನ್ನು ಕೊಟ್ಟಿತ್ತು.

ಅವಧಿಗೆ ಮುನ್ನ 8,900 ಕೋಟಿ ರೂ. ಸಾಲ ಮರು ಪಾವತಿಗೆ ನಿರ್ಧಾರ:

ಉದ್ಯಮಿ ಗೌತಮ್‌ ಅದಾನಿ ಮತ್ತು ಕುಟುಂಬವು 8,900 ಕೋಟಿ ರೂ. (ಸುಮಾರು 1.11 ಶತಕೋಟಿ ಡಾಲರ್) ಸಾಲವನ್ನು ಅವಧಿಗೆ ಮುನ್ನವೇ ಮರು ಪಾವತಿಸಲು ನಿರ್ಧರಿಸಿದೆ. ಅದಾನಿಯವರು ಸಾಲವನ್ನು ಅವಧಿಗೆ ಮುನ್ನ ತೀರಿಸುವುದರಿಂದ ಅಡಮಾನವಿಟ್ಟಿರುವ ಷೇರುಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಸಾಧ್ಯವಾಗುತ್ತದೆ. ಅದಾನಿ ಟ್ರಾನ್ಸ್‌ಮಿಶನ್‌, ಅದಾನಿ ಪೋರ್ಟ್ಸ್‌, ಅದಾನಿ ಗ್ರೀನ್‌ ಎನರ್ಜಿಯ ಲಕ್ಷಾಂತರ ಷೇರುಗಳನ್ನು ಅದಾನಿ ಗ್ರೂಪ್‌, ಬಿಡುಗಡೆಗೊಳಿಸಲು ಇದರಿಂದ ಹಾದಿ ಸುಗಮವಾಗಲಿದೆ.

ಅದಾನಿ ಟ್ರಾನ್ಸ್‌ಮಿಶನ್‌ ಲಿಮಿಟೆಡ್‌ನ 1.17 ಕೋಟಿ , ಅದಾನಿ ಪೋರ್ಟ್ಸ್‌ನ ೧೬.೮ ಕೋಟಿ, ಅದಾನಿ ಗ್ರೀನ್‌ ಎನರ್ಜಿಯ 2.75 ಕೋಟಿ ಷೇರುಗಳನ್ನು ಬಿಡುಗಡೆಗೊಳಿಸಲು ಇದರಿಂದ ಸುಲಭವಾಗಲಿದೆ. ಅದಾನಿಯವರು ಈ ಮೂಲಕ ಷೇರು ಹೂಡಿಕೆದಾರರಲ್ಲಿ ಸಮೂಹದ ಆರ್ಥಿಕ ಆರೋಗ್ಯದ ಬಗ್ಗೆ ವಿಶ್ವಾಸ ಮೂಡಿಸಲು ಯತ್ನಿಸುತ್ತಿದ್ದಾರೆ. ಅಮೆರಿಕದ ಶಾರ್ಟ್‌ ಸೆಲ್ಲರ್‌ ಹಿಂಡೆನ್‌ ಬರ್ಗ್‌ ಅದಾನಿ ಗ್ರೂಪ್‌ ವಿರುದ್ಧ ವರದಿ ಪ್ರಕಟಿಸಿದ ಬಳಿಕ ಅದಾನಿ ಕಂಪನಿಗಳ ಷೇರು ದರಗಳಲ್ಲಿ ಭಾರಿ ಕುಸಿತ ಸಂಭವಿಸಿತ್ತು. ಅದಾನಿ ಸಮೂಹ ಸಾಲ ಮರು ಪಾವತಿಸುವ ನಿಟ್ಟಿನಲ್ಲಿ ಯಾವುದೇ ಸಮಸ್ಯೆಯನ್ನು ಹೊಂದಿಲ್ಲ ಎಂಬ ಸಂದೇಶವನ್ನು ಮತ್ತೊಮ್ಮೆ ಸಾರಲು ಅದಾನಿಯವರು ಮುಂದಾಗಿದ್ದಾರೆ.

ಷೇರು ದರ ಚೇತರಿಕೆ: ಷೇರು ಪೇಟೆಯಲ್ಲಿ ಮಂಗಳವಾರ ಅದಾನಿ ಸಮೂಹದ ಷೇರುಗಳ ದರದಲ್ಲಿ ಚೇತರಿಕೆ ಕಂಡು ಬಂದಿದೆ. ಅದಾನಿ ಪೋರ್ಟ್ಸ್‌, ಅದಾನಿ ಎಂಟರ್‌ಪ್ರೈಸಸ್‌, ಅದಾನಿ ಟ್ರಾನ್ಸ್‌ಮಿಶನ್‌ ಷೇರುಗಳ ದರ ಮಧ್ಯಂತರದಲ್ಲಿ ಚೇತರಿಸಿತ್ತು.

Exit mobile version